
ಹೋಳಿ ಹುಣ್ಣಿಮೆಯ ವಿಶೇಷತೆ ಮತ್ತು ಪುರಾಣ ಇಲ್ಲಿದೆ ಕಿರು ಮಾಹಿತಿ
- Krishna Shinde
- 14 Jan 2024 , 9:01 PM
- Belagavi
- 2112
ಹೋಳಿ ಹುಣ್ಣಿಮೆ ಅಥವಾ ಕಾಮನ ಹಬ್ಬ ಪಾಲ್ಗುಣ ಮಾಸದ ಶುದ್ಧ ಹುಣ್ಣಿಮೆ ಅಂದರೆ ಚಾಂದ್ರಮಾನ ಪಂಚಾಂಗದ ಪ್ರಕಾರ ವರ್ಷದ ಕೊನೆಯ ಹುಣ್ಣಿಮೆ. ಇದನ್ನು ಹೋಳಿ ಹುಣ್ಣಿಮೆ ಎಂದು ಕರೆಯಲಾಗುತ್ತದೆ.

ಈ ಹಬ್ಬವು ದಿನಾಂಕ, 7,03,2023,ರಂದು, ಮಂಗಳವಾರ, ಬರುತ್ತದೆ ಈ, ವಸಂತ ಮಾಸವನ್ನು ಸ್ವಾಗತಿಸುವುದಷ್ಟೇ ಅಲ್ಲ ಏಕತೆಯನ್ನು ಬಿಂಬಿಸಿ ಹೊಸದನ್ನು ಸ್ವಾಗತಿಸುವ ಹಬ್ಬ.

ಬಣ್ಣಗಳನ್ನು ಎರೆಚಾಡಿ ಸಂಭ್ರಮಿಸುವುದಕ್ಕಷ್ಟೇ ಈ ಹಬ್ಬವು ಸೀಮಿತವಾಗಿಲ್ಲ. ಬಡವ-ಬಲ್ಲಿದ, ಜಾತಿ ಧರ್ಮದ ಎಲ್ಲೆಯನ್ನು ಮೀರಿ ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ತಾತ್ವಿಕ ನಿಲುವನ್ನು ಅಕ್ಷರಶಃ ಆಚರಣೆಗೆ ತರುವುದೇ ಈಹೋಳಿ ಹುಣ್ಣಿಮೆ.
ಗೋಪಾಲಕರಿಂದ ಭೂಪಾಲಕರವರೆಗೆ, ಎಳೆಯರಿಂದ ವೃದ್ಧಾಪ್ಯದಲ್ಲಿರುವ ಎಲ್ಲರೂ ಸೇರಿ, ಸಮಗ್ರ ಭಾರತದಲ್ಲಿ ಆಚರಿಸುವ ರಂಗುರಂಗಿನ ಹಬ್ಬ ʼಹೋಳಿʼ. ಇದು ವಸಂತಾಗಮನವನ್ನು ಸಂತೋಷ, ಸಂಭ್ರಮಗಳಿಂದ ಸ್ವಾಗತಿಸುವ ಹಬ್ಬವಾದ್ದರಿಂದ ವಸೋತೋತ್ಸವವೂ ಹೌದು.
ಕಾಮನ ಹಬ್ಬ ಹೆಸರಿನ ಔಚಿತ್ಯ ಈ ಹಬ್ಬಕ್ಕೆ ಹುತಾಶನೀ ಪೂರ್ಣಿಮಾ, ಕಾಮನಹುಣ್ಣಿಮೆ, ವಸಂತ ಪೂರ್ಣಿಮೆ, ಹೋಳಿ ಹುಣ್ಣಿಮೆ ಮುಂತಾದ ಹೆಸರುಗಳಿವೆ. ಈ ಹಬ್ಬದ ಸಂದರ್ಭದಲ್ಲಿ ತರುಲತೆಗಳೆಲ್ಲಾ ಚಿಗುರಿರುತ್ತವೆ.ಎಲ್ಲೆಲ್ಲೂ ಕೋಗಿಲೆಯ ಪಂಚಮದ ಇಂಚರ ಕೇಳಿ ಬರುತ್ತದೆ.ಮಾವು, ಮಲ್ಲಿಗೆ, ಸಂಪಿಗೆಗಳೆಲ್ಲಾ ಹೂ ಬಿಟ್ಟು ನಿಸರ್ಗ ಕಂಗೊಳಿಸುತ್ತಿರುತ್ತದೆ. ಲಗ್ನಮಾಸಆರಂಭವಾಗಿರುತ್ತದೆ.
ಈ ರೀತಿ ಶೃಂಗಾರ ರಸದ ಪರಿಸರ, ಪರಿಸ್ಥಿತಿಗಳಿಂದ ಸ್ತ್ರೀ-ಪುರುಷರಲ್ಲಿ ಹುದುಗಿದ್ದ ಕಾಮ-ರತಿವಾಸನೆ ಚಿಗುರುತ್ತದೆ. ಪ್ರತ್ಯಕ್ಷ ಪರಶಿವನೂ ಸಹ ಕಾಮನನ್ನು ಸುಟ್ಟರೂ, ನಂತರ ಪಾರ್ವತಿಗೆ ಒಲಿದು ಅರ್ಧ ಶರೀರವನ್ನೇ ನೀಡಿದ್ದರಿಂದ ಕಾಮನಿಗೆ ಒಲಿದಂತೆಯೇ ಸರಿ. ಇಲ್ಲಿ ಕಾಮ ಸೋತು ಗೆದ್ದ, ಶಿವ ಗೆದ್ದು ಸೋತ. ಪರಿಶಿವನ ಕಥೆಯೇ ಹೀಗಾದರೆ ಸಾಮಾನ್ಯರ ಪಾಡೇನು? ಹೀಗೆಈ ದಿನ ಶಿವನು ತನ್ನ ಹಣೆಗಣ್ಣಿನಿಂದ ಕಾಮನನ್ನು ಸುಟ್ಟು, ಲೋಕಹಿತಕ್ಕಾಗಿ ಹುತಾತ್ಮನಾದ ಕಾಮನಿಗೆ, ಲೋಕದ ಸ್ತ್ರೀ-ಪುರುಷರೆಲ್ಲದ ಹೃದಯದಲ್ಲಿ ಸ್ಥಾನ ಕೊಟ್ಟ ದಿನ.
ಢುಂಢಾರಾಕ್ಷಸಿಯನ್ನು ಬಾಲಕರೆಲ್ಲಾ ಸೇರಿ ಓಡಿಸಿದ ದಿನ. ಹಿರಣ್ಯಕಶಿಪುವಿನ ತಂಗಿ ಹೋಲಿಕಾಳ ದಹನ ಸ್ಮಾರಕ ದಿನ. ಅಕಾಲ ಸಂಭೋಗ ನಿರತರಾದ ಕಾಮ-ರತಿಯರು ಋಷಿಯ ಶಾಪಕ್ಕೆ ತುತ್ತಾದ ದಿನ. ವರ್ಷವೆಲ್ಲಾ ಕಾದುಕೊಂಡುಬಂದ ಶ್ರೀಮದ್ಗಾಂಭೀರ್ಯವನ್ನುತೊರೆದು, ಅನಿರ್ಬಂಧವಿಹಾರಿಗಳಾಗಿ, ಸ್ವಚ್ಛಂದ ಲಹರಿಯಲ್ಲಿ ಬಣ್ಣ-ಬಣ್ಣದ ನೀರಿನಿಂದ ಓಕುಳಿಯಾಡಿ, ಕುಣಿದು ಕುಪ್ಪಳಿಸಿ ಹಾಡು ಹೇಳಿ ನಲಿವ ದಿನ ʼಹೋಳಿʼಹೋಳಿ ಹಬ್ಬಕ್ಕೆ ಸಂಬಂಧಿಸಿದ ಕಥೆಗಳು.
1 ಢುಂಢಾ ರಾಕ್ಷಸಿಯ ಕಥೆ
ಮಹಾನ್ ಧರ್ಮಾತ್ಮನೂ, ಪ್ರಜಾವತ್ಸಲನೂ ಆದ ರಘುರಾಜನ ರಾಜ್ಯಕ್ಕೆ ಆಕಸ್ಮಿಕವಾಗಿ ʼಢುಂಢಾʼ ಎಂಬ ರಾಕ್ಷಸಿ ನುಗ್ಗಿ ಆ ರಾಜ್ಯದ ಅನೇಕ ಮಕ್ಕಳನ್ನು ತಿಂದು ತೇಗಿ ಭಯದ ವಾತಾವರಣವನ್ನು ಸೃಷ್ಟಿಸಿದ್ದಳು. ಅವಳ ರಹಸ್ಯವನ್ನು ವಸಿಷ್ಠರು ಈರೀತಿಯಾಗಿ ರಾಜನಿಗೆ ತಿಳಿಸುತ್ತಾರೆ. "ಇವಳು ಮಾಲಿ ಎಂಬ ರಾಕ್ಷಸನ ಮಗಳು. ಮಹಾಮಾಯಾವಿನಿ. ಶಿವನನ್ನು ತಪಸ್ಸಿನಿಂದ ಒಲಿಸಿಕೊಂಡು ದೇವ-ದಾನವ-ಮಾನವರಿಂದ, ಶಸ್ತ್ರಾಸ್ತ್ರಗಳಿಂದ, ಮಳೆ, ಚಳಿ, ಬೇಸಿಗೆ ಕಾಲದಲ್ಲಿ,ಹಗಲು-ರಾತ್ರಿಗಳಲ್ಲಿ, ಮನೆಯಲ್ಲಾಗಲಿ,ಹೊರಗಾಗಲಿ, ಸಾವು ಬರಬಾರದೆಂದು ವರ ಪಡೆದಿದ್ದಾಳೆ. ಅವಳ ಕೋರಿಕೆಗೆ ʼಅಸ್ತುʼ ಎಂದ ಶಿವ ಕೊನೆಯಲ್ಲಿ ಒಂದು ರಹಸ್ಯ ಎಚ್ಚರಿಕೆನೀಡಿದ್ದಾನೆ. ʼಉನ್ಮತ್ತರಾದ ಮಕ್ಕಳಿಂದಋತು ಸಂಧಿ ಕಾಲದಲ್ಲಿ ಭಯವುಂಟುʼ ಎಂದು. ಆದ್ದರಿಂದಲೇ ಆ ರಾಕ್ಷಸಿ ʼಅಡಡಾʼ ಎಂದುಕೂಗುತ್ತಾ ಮಕ್ಕಳನ್ನು ಹಿಂಸಿಸುತ್ತಾಳೆ".ವಸಿಷ್ಠರು ಅವಳನ್ನು ಓಡಿಸುವ ಉಪಾಯ ಕೂಡ ಹೇಳುತ್ತಾರೆ, ಇಂದು, ಫಾಲ್ಗುಣ ಶುದ್ಧಹುಣ್ಣಿಮೆ.
ರಾಷ್ಟ್ರಾದ್ಯಂತ ಮಕ್ಕಳು ನಿರ್ಭಯರಾಗಿ ಕೇಕೆ ಹಾಕುತ್ತಾ, ಖಡ್ಗ ಆಯುಧ ಹಿಡಿದು ಯುದ್ಧೋತ್ಸಾಹದಿಂದಮೆರೆಯಲಿ. ಒಣಗಿದ ಹುಲ್ಲು ಕಡ್ಡಿ ಹಾಕಿ, ಬೆಂಕಿ ಇಟ್ಟು ರಾಕ್ಷೋಘ್ನ ಮಂತ್ರಗಳಿಂದ ಹೋಮಮಾಡೋಣ. ದೇಶಾದ್ಯಂತ ನವಯುವಕರು ಇದೇ ರೀತಿ ಕಸಕಡ್ಡಿಗಳನ್ನು ರಾಶಿ ಹಾಕಿ ಬೆಂಕಿಯಿಟ್ಟು, ಅದಕ್ಕೆಪ್ರದಕ್ಷಿಣೆ ಬಂದು, ತಮ್ಮ ಬಾಯಿಗೆ ಬಂದ ಹಾಡುಗಳನ್ನು ಹಾಡಲಿ ಎಂದರು". ಅದೇ ರೀತಿ ದೇಶಾದ್ಯಂತ ಮಕ್ಕಳ ಆರ್ಭಟ, ಅಟ್ಟಹಾಸ, ಚೆಲ್ಲಾಟ, ಕೇಕೆ ನಡೆಯುತ್ತಿರುವುದನ್ನು ಕಂಡು ಢುಂಢಾ ರಾಕ್ಷಸಿಯು ತನಗೆ ಈ ಲೋಕದಲ್ಲಿ ಉಳಿಗಾಲವಿಲ್ಲ, ತನ್ನ ಮೃತ್ಯುವಿನ ರಹಸ್ಯ ಇವರಿಗೆ ತಿಳಿದುಬಿಟ್ಟಿದೆ ಎಂದು ರಘುರಾಜನ ರಾಷ್ಟ್ರವನ್ನೇ ಬಿಟ್ಟು ಓಡಿಹೋದಳು. ಹೋಗುವಾಗ ʼಪ್ರತಿ ವರ್ಷ ಈ ಹುಣ್ಣಿಮೆಯಂದು ಅಗ್ನಿ ಹೊತ್ತಿಸಿ ಐದು ಹೋಳಿಗೆಯನ್ನು ಆಹುತಿ ಕೊಟ್ಟರೆ ಎಲ್ಲಾ ಮಕ್ಕಳೂ ಸುಖವಾಗಿರುತ್ತಾರೆʼ ಎಂದಳು. ಹೀಗೆ ಹೋಳಿಗೆಯಆಹುತಿಯಿಂದಾಗಿ ಇದು ಹೋಳಿಗೆ ಅಥವಾಹೋಳಿಯ ಹುಣ್ಣಿಮೆಯಾಯಿತು. ಈ ದಿನಅಗ್ನಿಯಲ್ಲಿ ಐದು ಹೋಳಿಗೆಯನ್ನು ಆಹುತಿ ಕೊಡುವ ರೂಢಿ ಕೆಲವೆಡೆ ಇದೆ.
2 ಹೋಲಿಕಾ ಕಥೆ ಹಿರಣ್ಯ ಕಶಿಪುವಿಗೆ ಪ್ರಹ್ಲಾದನೆಂಬ ಮಗನಿದ್ದ. ತಂದೆಯ ಮನಸ್ಸಿಗೆ ವಿರುದ್ಧವಾಗಿ ಅವನು ಸದಾ ಹರಿನಾಮ ಸ್ಮರಣೆ ಮಾಡುತ್ತಿದ್ದ. ತನ್ನ ವೈರಿಯಾದ ಹರಿಯನ್ನು ಪ್ರಹ್ಲಾದನು ಸ್ಮರಿಸುವುದನ್ನು ಸಹಿಸಲಾರದೆ ಅವನನ್ನು ತಿದ್ದುವಪ್ರಯತ್ನವೆಲ್ಲಾ ವಿಫಲವಾದಾಗ, ತಂದೆ ಮಗನನ್ನೇ ಮುಗಿಸಿ ಬಿಡಲುಯೋಚಿಸಿದ. ಅನೇಕ ಮಾಟಮಂತ್ರ, ಶಂಬರನ ಮಾಯೆ ಏನೆಲ್ಲಾ ಮಾಡಿಸಿದ. ಅದೂ ವಿಫಲವಾದಾಗ ಸಮುದ್ರದಲ್ಲಿ ಮುಳುಗಿಸಿದ, ಪರ್ವತದಿಂದ ತಳ್ಳಿಸಿದ,ಸರ್ಪಗಳಿಂದ ಕಚ್ಚಿಸಿದ, ಆನೆಗಳಿಂದ ತುಳಿಸಿದ, ಬೆಂಕಿಯಲ್ಲಿ ನೂಕಿಸಿದ, ವಿಷಮಿಶ್ರಿತ ಆಹಾರ ತಿನ್ನಿಸಿದ, ನೌಕರರಿಂದ ಹಿಂಸಿಸಿದ. ಆದರೆ ತನ್ನ ಭಕ್ತಿಯಿಂದ ಪ್ರಹ್ಲಾದ ಎಲ್ಲದರಲ್ಲೂ ಜಯಿಸಿದ. ಆಗ ಹಿರಣ್ಯಕಶಿಪು ತನ್ನ ತಂಗಿಯಾದ ಹೋಲಿಕಾಳನ್ನು ಕರೆದು ʼನೀನು ಬಾಲಪ್ರಹ್ಲಾದನನ್ನು ತೊಡೆಯ ಮೇಲೆ ಕೂಡಿಸಿಕೊಂಡು ಮುದ್ದಾಡುತ್ತಿರು. ನಿನ್ನ ಮೇಲೆ ದಿಕ್ಕು-ದಿಕ್ಕುಗಳಿಂದ ಕಟ್ಟಿಗೆಯ ರಾಶಿ ಹಾಕಿ ಸುಡಲಾಗುವುದು. ಆ ಮಗು ಸುಟ್ಟು ಬೂದಿಯಾದ ಮೇಲೆ ನೀನು ಬೆಂಕಿಯಿಂದ ಎದ್ದು ಬಾʼ ಎಂದನು. ಅಣ್ಣನ ಆಜ್ಞೆ ಮೀರಲಾಗದೆ ಹೋಲಿಕಾಳು ಅವನ ಮಾತಿಗೆ ಸಮ್ಮತಿಸಿದಳು. ಹಿಂದೆ ಅನೇಕ ಬಾರಿ ಅವಳು ಉರಿಯುವ ಬೆಂಕಿಯಿಂದ ಎದ್ದು ಬಂದಿದ್ದಳು. ಅದೆಲ್ಲಾ ಅವಳಿಗೆ ಕರತಲಾಮಲಕ! ಆದರೆ ವಿಧಿಯ ವಿಲಾಸ ಬೇರೆಯಾಗಿತ್ತು. ಹೋಲಿಕಾ ಭಸ್ಮವಾಗಿ, ಪ್ರಹ್ಲಾದ ಪುಟವಿಟ್ಟ ಬಂಗಾರದಂತೆ ಹೊಳೆಯುತ್ತಾ ʼಶ್ರೀಹರಿʼ ಎನ್ನುತ್ತಾ ಹೊರಬಂದ ಆ ಹೋಲಿಕಾ ದಹನದ ಹುಣ್ಣಿಮೆಯೇ ʼಹೋಳಿ ಹುಣ್ಣಿಮೆʼಯಾಗಿದೆ.
ಈ ಎಲ್ಲಾ ಕಥೆಗಳಿಂದ ತಿಳಿಯುವುದೇನೆಂದರೆಮ ಇದುಹುಡುಗರು ರಾಕ್ಷಸಿಯ ಸಂಹಾರಕ್ಕಾಗಿ ನಡೆಸಿದ ಹಬ್ಬ. ರಾತ್ರಿ ವೇಳೆಯಲ್ಲಿ ಕಾಮನ ಪ್ರತಿಮೆ ಸುಟ್ಟು, ಹಾಡು ಹೇಳುತ್ತಾ ಮೆರೆಯುವುದೇ ಮುಖ್ಯ ಕಲಾಪ. ಸಾವಿರಾರು ವರ್ಷಗಳ ಇತಿಹಾಸವುಳ್ಳ ಹೋಳಿ ಹಬ್ಬವನ್ನು ದೇಶದವಿವಿಧ ಪ್ರಾಂತ್ಯಗಳಲ್ಲಿವೈವಿಧ್ಯಮಯವಾಗಿ ಆಚರಿಸುತ್ತಾರೆ. ಕೆಲವೆಡೆ ʼಕೆಂಡ ಹಾಯುವʼ ರೂಢಿ ಇದ್ದರೆ, ಮಧ್ಯಪ್ರದೇಶದ ʼಉಜ್ಜಯಿನಿʼ ಬಿಹಾರದ ʼಛೋಟಾ ನಾಗಪುರ್ʼ ಮುಂತಾದೆಡೆ ʼಬೆಂಕಿ ನೃತ್ಯʼ ಕಾಣಬಹುದು. ಈ ಹಬ್ಬಕ್ಕೆ ಯಾವುದೇ ರೀತಿಯ ವಯಸ್ಸಿನ ಮಿತಿಯಿಲ್ಲ.ಹಿರಿಯರು-ಕಿರಿಯರು ಅನ್ನದೇ ಪ್ರತಿಯೊಬ್ಬರೂ ಖುಷಿ-ಖುಷಿಯಾಗಿ ಹೋಳಿ ಸಂಭ್ರಮಾಚರಣೆ ಮಾಡುತ್ತಾರೆ. ವಿವಿಧ ಬಣ್ಣಗಳ ಓಕುಳಿ ಹರಿಸಿ,ಇಡೀ ವರ್ಷಸಂತೋಷದ ಕೋಡಿಯೇಹರಿಯಲಿ ಅಂತ ಹಾರೈಸುವ ರಂಗಿನ ಹಬ್ಬ ಇದು.
ಪುರಾಣದಲ್ಲಿ ಉಲ್ಲೇಖವಿರುವ ಕಾಮದಹನದಲ್ಲಿ- ತಾರಕಾಸುರನೆಂಬ ರಾಕ್ಷಸ ರಾಜ ಬ್ರಹ್ಮನ ವರಬಲದ ಸೊಕ್ಕಿನಿಂದ ಲೋಕದಲ್ಲಿ ಮೆರೆಯತೊಡಗಿದಾಗ, ಆತನ ಉಪಟಳ ತಾಳಲಾರದೆ, ಅವನ ಸಂಹಾರಕ್ಕೆ ದೇವತೆಗಳು ಉಪಾಯ ಹೂಡುತ್ತಾರೆ. ಶಿವನಿಗೆ ಜನಿಸಿದ ಏಳು ದಿನದ ಮಗುವಿನಿಂದ ಮಾತ್ರವೇ ತನಗೆ ಸಾವು ಎಂಬ ವರಬಲವೇ ಆತನ ಮದಕ್ಕೆ ಕಾರಣ. ಆದರೆ ಆ ಸಂದರ್ಭದಲ್ಲಿ ಶಿವನು ದಕ್ಷ ಯಜ್ಞದಲ್ಲಿ ದಾಕ್ಷಾಯಿಣಿಯನ್ನು ಕಳೆದುಕೊಂಡು ಭೋಗಸಮಾಧಿಯಲ್ಲಿದ್ದ ಕಾರಣ, ಮತ್ತೊಂದೆಡೆ ಶಿವೆಯೂ ಶಿವನಿಗಾಗಿ ತಪಸ್ಸು ಮಾಡುತ್ತಿದ್ದ ಕಾರಣ, ಅವರಿಬ್ಬರೂ ಒಂದುಗೂಡುವಂತಿರಲಿಲ್ಲ. ದೇವತೆಗಳು ಕಾಮ (ಮನ್ಮಥ)ನ ಮೊರೆ ಹೋದರು. ತತ್ಫಲವಾಗಿ ತನ್ನ ನಿರ್ನಾಮದ ಅರಿವಿದ್ದೂ, ಲೋಕಕಲ್ಯಾಣವೆಂಬ ಅತಿಶಯವಾದ ಪರೋಪಕಾರಾರ್ಥವಾಗಿ ಕಾಮನು ತನ್ನ ಹೂಬಾಣಗಳಿಂದ ಶಿವನನ್ನು ಬಡಿದೆಬ್ಬಿಸಿ, ತಪೋಭಂಗ ಮಾಡುತ್ತಾನೆ. ಕೆರಳಿ ಮೂರನೇ ಚಕ್ಷುವನ್ನು ತೆರೆದ ಈಶ್ವರನ ಕ್ರೋಧಾಗ್ನಿಗೆ ಕಾಮನು ಸುಟ್ಟು ಭಸ್ಮವಾಗುತ್ತಾನೆ. ಕಾಮನರಸಿ ರತಿದೇವಿಯು ಪರಿಪರಿಯಾಗಿ ಶಿವನಲ್ಲಿ ಪತಿಭಿಕ್ಷೆ ಯಾಚಿಸಲು, ಕಾಮನು ಅನಂಗನಾಗಿಯೇ ಇರುತ್ತಾನೆ. ಆದರೆ ಪತ್ನಿಗೆ ಮಾತ್ರ ಶರೀರಿಯಾಗಿ ಕಾಣಿಸುತ್ತಾನೆ ಎಂದು ಶಿವನು ಅಭಯ ನೀಡಿದನೆಂಬುದು ಪುರಾಣ ಕಥನ.
ಮತ್ತೊಂದು ಪಾಠಾಂತರದ ಪ್ರಕಾರ- ಪೂರ್ವದಲ್ಲಿ ತಾರಕಾಸುರನೆಂಬ ರಾಕ್ಷಸನಿದ್ದ. ದುರಹಂಕಾರಿಯೂ ಕ್ರೂರಿಯೂ ಆದ ತಾರಕಾಸುರನು ಲೋಕಕಂಟಕನಾಗಿ ಮೆರೆಯುತ್ತಿದ್ದ. ತನಗೆ ಮರಣವು ಬಾರದಿರಲಿ, ಬಂದರೂ ಅದು ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಬರಲಿ ಅಂದು ಬ್ರಹ್ಮನಲ್ಲಿ ವರವನ್ನು ಬೇಡಿದ್ದ. ಭೋಗಸಮಾಧಿಯಲ್ಲಿದ್ದ ಶಿವ, ಪಾರ್ವತಿಯ ಜೊತೆ ಸಮಾಗಮ ಹೊಂದಲು ಸಾದ್ಯವಿರಲಿಲ್ಲ. ದೇವತೆಗಳು ನಿರುಪಾಯರಾಗಿ ಪಾರ್ವತಿಯಲ್ಲಿ ಮೋಹ ಹೊಂದುವಂತೆ ಮಾಡಲು ಕಾಮನಲ್ಲಿ ಬೇಡಿದರು. ಕಾಮ (ಮನ್ಮಥ) ಮತ್ತು ಅವನ ಪತ್ನಿ ರತಿದೇವಿ ಈ ಸತ್ಕಾರ್ಯಕ್ಕೆ ಒಪ್ಪಿದರು. ಭೋಗಸಮಾಧಿಯಲ್ಲಿದ್ದ ಶಿವನಿಗೆ ಹೂ ಬಾಣಗಳಿಂದ ಹೊಡೆದು ಸಮಾಧಿಯಿಂದ ಎಚ್ಚರಿಸಿದರು. ಇದರಿಂದ ಕುಪಿತಗೊಂಡ ಶಿವನು ತನ್ನ ಮೂರನೇ ಕಣ್ಣಿಂದ ಕಾಮನನ್ನು ಸುಟ್ಟು ಭಸ್ಮ ಮಾಡಿದನು. ರತಿದೇವಿ ದು:ಖದಿಂದ ಶಿವನಲ್ಲಿ ಪತಿಭಿಕ್ಷೆಯನ್ನು ಬೇಡಿದಳು. ಶಾಂತಗೊಂಡ ಶಿವನು ಪತ್ನಿಯೊಡನೆ ಮಾತ್ರ ಶರೀರಿಯಾಗುವಂತೆ ಕಾಮನಿಗೆ ವರ ಕೊಟ್ಟನು. ಲೋಕಕಲ್ಯಾಣಕ್ಕಾಗಿ ಮನ್ಮಥನು ಅನಂಗನಾದ. ಈ ಘಟನೆ ನಡೆದದ್ದು ಫಾಲ್ಗುಣ ಶುದ್ಧ ಪೂರ್ಣಿಮೆಯಂದು. ಆದ್ದರಿಂದ ಈ ದಿನವನ್ನು "ಕಾಮನ ಹುಣ್ಣಿಮೆ"ಯಾಗಿ ಆಚರಿಸಲ್ಪಡುತ್ತದೆ.
ನಾರದ ಪುರಾಣದಲ್ಲಿ ಮತ್ತೊಂದು ಕಥೆ ಬರುತ್ತದೆ. ತಾನೇ ದೇವರು ಎಂದು ಒಪ್ಪಿಕೊಳ್ಳದೆ ಶ್ರೀಹರಿಯನ್ನೇ ಜಗನ್ನಿಯಾಮಕನೆಂದು ಪರಿಭಾವಿಸುವ ತನ್ನದೇ ಕರುಳ ಕುಡಿ ಪ್ರಹ್ಲಾದನನ್ನು ಕೊಲ್ಲಲು, ದೈತ್ಯರಾಜ ಹಿರಣ್ಯಕಶ್ಯಪು ನಾನಾ ವಿಧದ ಪ್ರಯತ್ನಗಳನ್ನು ಮಾಡಿಯೂ ವಿಫಲನಾಗಿ, ಕೊನೆಗೆ, ಬೆಂಕಿಯಿಂದ ರಕ್ಷಣೆ ನೀಡುವ ವಸ್ತ್ರ ಹೊಂದಿರುವ ತಂಗಿ ಹೋಳಿಕಾ (ಹೋಲಿಕಾ)ಳ ಮೊರೆ ಹೋಗುತ್ತಾನೆ. ಅಣ್ಣನ ಅನುಜ್ಞೆಯಂತೆ ಬಾಲ ಪ್ರಹ್ಲಾದನನ್ನು ಹೊತ್ತುಕೊಂಡ ಹೋಳಿಕಾ, ಅಗ್ನಿಕುಂಡ ಪ್ರವೇಶಿಸುತ್ತಾಳೆ. ಆಗ ವಸ್ತ್ರವು ಹಾರಿಹೋಗುತ್ತದೆ, ಹೋಳಿಕಾಳ ದಹನವಾಗುತ್ತದೆ. ವಿಷ್ಣು ಭಕ್ತಾಗ್ರೇಸರ ಪ್ರಹ್ಲಾದ ಬದುಕುಳಿಯುತ್ತಾನೆ.
ಮೇಲೆ ಹೇಳಿದ ಎರಡೂ ಪುರಾಣ ಕಥನಗಳ ಸಂದೇಶ ಒಂದೇ. ಕೆಟ್ಟದ್ದನ್ನು ಸುಟ್ಟು ಬಿಡುವುದು; ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಅಗ್ನಿಕುಂಡದಲ್ಲಿ ಸುಟ್ಟು, ಸದಾಚಾರವನ್ನು ರೂಢಿಸಿಕೊಳ್ಳುವುದು. ಆಸುರೀ ಶಕ್ತಿಗಳ ನಿರ್ನಾಮದ ದ್ಯೋತಕವಾಗಿ ಹೋಳಿ ಅಂದರೆ ಉತ್ಸವಾಗ್ನಿ ಹಾಕುವ ಪದ್ಧತಿ ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಣೆಯಲ್ಲಿದೆ. ಇಂಥದ್ದೊಂದು ಅಮೂಲ್ಯ ಸಂದೇಶ ಸಾರುವ ಮತ್ತು ಆ ಮೂಲಕ ಕೆಡುಕಿಗೆ ಯಾವತ್ತೂ ಸೋಲು ಕಾದಿದೆ ಎಂಬ ಸಂದೇಶ ಸಾರುವ ಹೋಳಿ ಹಬ್ಬ ಅಥವಾ ಕಾಮನ ಹಬ್ಬದ ಆಚರಣೆಯಲ್ಲಿ ಸದುದ್ದೇಶವಿದೆ.