ಬೆಳಗಾವಿ ಲೋಕಸಭಾ ಕ್ಷೇತ್ರದ ಫುಲ್ ಡಿಟೇಲ್ಸ್
- 7 Jan 2024 , 4:14 AM
- Belagavi
- 103
ಲೋಕಲ್ ವಿವ್ಯೂ ವಿಶೇಷ
ಬೆಳಗಾವಿ: ಲೋಕಸಭಾ ಕ್ಷೇತ್ರದ ಉಪ ಚುನಾವಣೆ ದಿನಾಂಕ ಈಗಾಗಲೇ ಘೋಷಣೆಯಾಗಿದೆ. ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿ ಗೆಲ್ಲಲು ಕಸರತ್ತು ನಡೆಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೇಸ ನಡುವೆ ನೇರ ಪೈಪೋಟಿ ನಡೆಯುವುದರಿಂದ ಎರಡು ಪಕ್ಷದಲ್ಲಿ ಪ್ರಬಲ ಅಭ್ಯರ್ಥಿಗಳೇ ಕಣಕ್ಕಿಳಿದ್ದಿದ್ದಾರೆ.


ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅಕಾಲಿಕ ನಿಧನದಿಂದ ಎದುರಾಗಿರುವ ಈ ಚುನಾವಣೆಯಲ್ಲಿ ಅವರ ಪತ್ನಿ ಮಂಗಲಾ ಅಂಗಡಿಗೆ ಬಿಜೆಪಿ ಟಿಕೆಟ್ ನೀಡಿದರೆ ಇತ್ತ ಕೆಪಿಸಿಸಿ ಕಾರ್ಯಾಧ್ಯಕ್ಷ ಕಾಂಗ್ರೆಸ್ ಪ್ರಭಾವಿ ನಾಯಕ ಯಮಕನಮರಡಿ ಶಾಸಕರಾಗಿರುವ ಸತೀಶ ಜಾರಕಿಹೊಳಿಗೆ ಕಾಂಗ್ರೇಸ್ ಟಿಕೇಟ್ ನೀಡಿವೆ. ಒಟ್ಟಿನಲ್ಲಿ ಎರಡು ಪಕ್ಷಗಳು ಉಪಚುನಾವಣೆ ಗೆಲ್ಲಲು ತಂತ್ರ ಮಾಡಿವೆ.


ಅಷ್ಟಕ್ಕೂ ಈ ಲೋಕಸಭಾ ವ್ಯಾಪ್ತಿಯಲ್ಲಿ ಸದ್ಯ ಪ್ರಾಭಲ್ಯ ಯಾರಿದ್ದಾರೆ...?
ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಆರು ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತ ಶಾಸಕರಿದ್ದರೆ ಕೇವಲ ಎರಡು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ. ಅರಭಾವಿ ಕ್ಷೇತ್ರ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ, ಗೋಕಾಕ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ, ಬೆಳಗಾವಿ ದಕ್ಷಿಣ ಅಭಯ್ ಪಾಟೀಲ್, ಬೆಳಗಾವಿ ಉತ್ತರ ಅನಿಲ್ ಬೆನಕೆ, ರಾಮದುರ್ಗ ಮಹಾದೇವಪ್ಪ ಯಾದವಾಡ, ಸವದತ್ತಿ ಕ್ಷೇತ್ರದಲ್ಲಿ ಆನಂದ ಮಾಮನಿ ಇದ್ದರೆ ಬೈಲಹೊಂಗಲದಲ್ಲಿ ಕಾಂಗ್ರೆಸ್ ಪಕ್ಷದ ಮಹಾಂತೇಶ್ ಕೌಜಲಗಿ ಮತ್ತು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಇದ್ದುದರಿಂದ ಈ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ರಾಭಲ್ಯ ಜಾಸ್ತಿ ಇದೆ.

ಕ್ಷೇತ್ರದಲ್ಲಿ ಲಿಂಗಾಯತ ಮತಗಳೇ ಅಂತಿಮ
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 73ರಷ್ಟು ಹಿಂದೂಗಳು ಮತ್ತು ಶೇಕಡ 21ರಷ್ಟು ಮುಸ್ಲಿಮರು ಇದ್ದು, ಲಿಂಗಾಯತ ಮತದಾರರೇ ಅಂತಿಮವಾಗಿದ್ದಾರೆ. ಅಷ್ಟೇ ಅಲ್ಲದೆ ಕೃಷಿ ಪ್ರಧಾನವಾಗಿರುವ ಈ ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಶೇ.59.86ರಷ್ಟು ಹಳ್ಳಿಗರು ವಾಸವಾಗಿದ್ದರೆ, ಶೇ.40.14ರಷ್ಟು ಮಾತ್ರವೇ ಪಟ್ಟಣದಲ್ಲಿ ಜನರ ವಾಸವಿದೆ. ಇಲ್ಲಿ ಭಾಷೆ ಯಾವುದೇ ಇರಲಿ ಹಳ್ಳಿಗರ ಮತವೇ ಪ್ರಾಧಾನ್ಯತೆ ಪಡೆದುಕೊಳ್ಳುತ್ತದೆ.

ಚನ್ನಮ್ಮನ ಅಸ್ಥಾನದಲ್ಲಿ ಮೊದಲ ಬಾರಿಗೆ ಮಹಿಳೆಗೆ ಅವಕಾಶ?

ಹೌದು... ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೂ ಸಹ ಒಬ್ಬ ಮಹಿಳೆಯೂ ಲೋಕಸಭಾ ಸದಸ್ಯೆಯಾಗಿ ಆಯ್ಕೆಯಾಗದಿರುವುದೇ ಈ ತರದೊಂದು ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು.
2014 ರ ಚುನಾವಣೆಯಲ್ಲಿ ಸದ್ಯ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪರ್ಧಿಸಿ ಸೋಲನುಭವಿಸಿದ್ದರು. ಪ್ರಸಕ್ತ ಚುನಾವಣೆಯಲ್ಲಿ ಮಹಿಳಾ ಸದಸ್ಯರನ್ನು ಲೋಕಸಭೆಗೆ ಆಯ್ಕೆ ಮಾಡಬೇಕು ಎಂದು ಮಹಿಳೆಯರ ಒತ್ತಾಯವೂ ಇತ್ತು ಆದ್ದರಿಂದ ಮೊದಲ ಭಾರಿಗೆ ಬಿಜೆಪಿ ದಿವಂಗತ ಸುರೇಶ ಅಂಗಡಿ ಪತ್ನಿ ಮಂಗಲಾ ಅಂಗಡಿ ಅವರಿಗೆ ಟಿಕೆಟ್ ನೀಡಿ ಶತಾಯಗತಾಯ ಗೆಲ್ಲಲು ತೀವ್ರ ಕಸರತ್ತು ನಡೆಸಿದೆ.

ಒಟ್ಟು 2,566 ಮತಗಟ್ಟೆಗಳಿದ್ದು 11,290 ಮತಗಟ್ಟೆಗೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 18,07,250 ಮತದಾರ. 9,08,103 ಪುರುಷ ಮತದಾರರು, 8,99,091 ಮಹಿಳೆ ಮತದಾರರು, 41,535. 80 + ವಯಸ್ಸಿನ ಮತದಾರರು ಇದ್ದಾರೆ. ಒಟ್ಟಾರೆಯಾಗಿ ಎರಡು ಪಕ್ಷಗಳ ನಡುವೆ ನೇರ ಹಣಾಹಣಿ ಇರುವುದರಿಂದ ಈ ಲೋಕಸಭಾ ಚುನಾವಣೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ.










