ಜಿದ್ದಾಜಿದ್ದಿ ಕಾಳಗದಲ್ಲಿ ಯಾರಿಗೆ ಸಿಗುತ್ತದೆ ಕುಂದಾ...?
- 5 Jan 2024 , 11:56 PM
- Belagavi
- 109
ಬೆಳಗಾವಿ: ಎರಡೂವರೆ ವರ್ಷಗಳ ಬಳಿಕ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಗೆ ಮತದಾನ ನಡೆಯುತ್ತಿದ್ದು ತೀವ್ರ ಕುತೂಹಲ ಕೆರಳಿಸಿದೆ. 25 ವರ್ಷಗಳ ಬಳಿಕ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಆಮ್ ಆದ್ಮಿ ಪಕ್ಷಗಳು ಚಿಹ್ನೆಯಡಿ ಸ್ಪರ್ಧೆ ಮಾಡುತ್ತಿದ್ದು ಜಿದ್ದಾಜಿದ್ದಿಗೆ ಕಾರಣವಾಗಿದೆ. ಈ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆಗೆ ನಡೆಯುವ ಚುನಾವಣೆಯಲ್ಲಿ ಎಲ್ಲ ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತಿದ್ದರು.

ಆಗ ರಾಜಕೀಯ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದರು. ಇಲ್ಲಿ ಭಾಷೆಯ ಆಧಾರದ ಮೇಲೆ ಚುನಾವಣೆ ನಡೆಯುತ್ತಿದ್ದವು. ಕನ್ನಡ, ಮರಾಠಿ, ಉರ್ದು ಭಾಷಿಕರ ನಡುವೆ ಚುನಾವಣೆ ನಡೆಯುತ್ತಿತ್ತು. ಆದ್ದರಿಂದ ಯಾವುದೇ ರಾಜಕೀಯ ಪಕ್ಷದ ನಾಯಕರು ಬೆಳಗಾವಿ ನಗರಕ್ಕೆ ಆಗಮಿಸಿ ಪ್ರಚಾರವನ್ನು ನಡೆಸುತ್ತಿರಲಿಲ್ಲ. ಆದರೆ ಈ ಬಾರಿ ಪಕ್ಷದ ಚಿಹ್ನೆಯ ಮೇಲೆ ಸ್ಪರ್ಧೆ ನಡೆಸುತ್ತಿರುವುದಕ್ಕೆ ಎಲ್ಲ ಘಟಾನುಘಟಿ ನಾಯಕರು ಆಗಮಿಸಿ ಪ್ರಚಾರ ನಡೆಸಿದ್ದರು.

ಬಿಜೆಪಿ 55, ಕಾಂಗ್ರೆಸ್ 45, ಆಮ್ ಆದ್ಮಿ ಪಾರ್ಟಿ 27, ಜೆಡಿಎಸ್ 11, ಎಐಎಂಐಎಂ 6 ಉತ್ತಮ ಪ್ರಜಾಕೀಯ 1 ಸೇರಿದಂತೆ ಪಕ್ಷೇತರರು ಸೇರಿದಂತೆ ಒಟ್ಟು 385 ಜನ ಅಭ್ಯರ್ಥಿಗಳು ಅಗ್ನಿ ಪರೀಕ್ಷೆಗೆ ಇಳಿದಿದ್ದಾರೆ. ರಾಜಕೀಯ ಪಕ್ಷಗಳು ಸಹಜವಾಗಿ ಚಿಹ್ನೆಯ ಮೇಲೆ ಸ್ಪರ್ಧೆ ಮಾಡುತ್ತಿರುವುದರಿಂದ ಎಂಇಎಸ್‌ಗೆ ನಡುಕ ಪ್ರಾರಂಭವಾಗಿದೆ.
ಎಂಇಎಸ್ ಪ್ರತಿ ಬಾರಿ ಪಾಲಿಕೆಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಅವರಿಗೆ ಬೆಂಬಲ ಸೂಚಿಸುತ್ತಿದ್ದವು. ಗೆದ್ದ ಅಭ್ಯರ್ಥಿಗಳನ್ನು ನಮ್ಮವರು ಎಂದು ಮಾಲೆ ಹಾಕಿ ನಮ್ಮ ಅಭ್ಯರ್ಥಿ ಎಂದು ಘೋಷಣೆ ಮಾಡುತ್ತಿದ್ದರು. ಆದರೆ ಈ ಬಾರಿ ಎಂಇಎಸ್ ಅಧಿಕೃತವಾಗಿ ತಮ್ಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ.ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ ಸಂಖ್ಯೆ ಮಾತ್ರ ಹೇಳಿಲ್ಲ.










