ಹಾವೇರಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ ಜವಾಬ್ದಾರಿಯಲ್ಲಿ ವಿಫಲ
- 15 Jan 2024 , 2:26 AM
- Haveri
- 138
ಹಾವೇರಿ: ರಾಣೇಬೆನ್ನೂರ ತಾಲೂಕಿನ ಈಗಾಗಲೇ ಕೋವಿಡ್ ತಾಂಡವವಾಡುತ್ತಿದ್ದರೂ ಅದನ್ನು ನಿಭಾಯಿಸಬೇಕಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ ಪದೇ ಪದೆ ರಜೆ ಮೇಲೆ ತೆರಳುತ್ತಿದ್ದು ಕೂಡಲೇ ಅವರ ದೈಹಿಕ ಮತ್ತು ಮಾನಸಿಕ ಸ್ಥಿರತೆಯನ್ನು ಕಿಮ್ಸ ನಿಂದಾಗಲಿ ಅಥವಾ ತಜ್ಞ ವೈದ್ಯರ ತಂಡದಿಂದ ಪರೀಕ್ಷೆಗೊಳಪಡಿಸಿ ಜಿಲ್ಲೆಯ ಆರೋಗ್ಯ ಇಲಾಖೆಯನ್ನು ಕಾಪಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಹಾಗೂ ಮಹಿಳಾ ಸಂಘದ ಕಾರ್ಯಕರ್ತರು ಶುಕ್ರವಾರ ಉಪ ತಹಸೀಲ್ದಾರ ಎಂ.ಎನ್.ಹಾದಿಮನಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ಸಮಯದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಶಿವಪುತ್ರಪ್ಪ ಮಲ್ಲಾಡದ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಡಿಎಚ್‍ಒ ಪಾತ್ರ ಬಹುಮುಖ್ಯವಾಗಿರುತ್ತದೆ. ಆದರೆ ಹಾವೇರಿ ಜಿಲ್ಲೆಯ ಡಿಎಚ್‍ಒ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಇವರ ಆಡಳಿತವನ್ನೆಲ್ಲಾ ಒಬ್ಬ ಎಫ್‍ಡಿಸಿ ಅಧಿಕಾರಿ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಗೆ ಮುಖ್ಯಸ್ಥರೆ ಇಲ್ಲವೇನೋ ಎಂಬ ವಾತಾವರಣ ನಿರ್ಮಾಣವಾಗಿದೆ. ಈ ಕೂಡಲೇ ಮುಖ್ಯಮಂತ್ರಿಗಳು ಡಿಎಚ್‍ಒ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಈ ಸಮಯದಲ್ಲಿ ಚಂದ್ರಪ್ಪಮೇಗಳಮನಿ, ಜಗದೀಶಕೆರೂಡಿ, ರಾಜುಓಲೇಕಾರ, ಕರಬಸಪ್ಪಕಡ್ಲೇಪ್ಪನವರ ಸೇರಿದಂತೆ ಉಪಸ್ಥಿತರಿದ್ದರು.












