ಜಲಾಶಯಗಳಲ್ಲಿ ನೀರು ಸಂಗ್ರಹ, ಹೊರ ಹರಿವು ಮಾಹಿತಿ ವಿನಿಮಯಕ್ಕೆ ನೀರಾವರಿ ಇಲಾಖೆಯ ಎಂಜಿನಿಯರ್ ನಿಯೋಜನೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ
- 15 Jan 2024 , 3:31 AM
- Belagavi
- 101
ಬೆಳಗಾವಿ: ನೆರೆಯ ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಅಲ್ಲಿನ ಕೊಯ್ನಾ ಮತ್ತಿತರ ಜಲಾಶಯಗಳಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣ ಹಾಗೂ ನೀರು ಬಿಡುಗಡೆ ಕುರಿತು ನಿರಂತರ ಮಾಹಿತಿಯನ್ನು ಒದಗಿಸುವುದಕ್ಕಾಗಿ ಅನುಕೂಲವಾಗುವಂತೆ ಬೆಳಗಾವಿ ಜಿಲ್ಲೆಯ ನೀರಾವರಿ ಇಲಾಖೆಯ ಎಂಜಿನಿಯರ್ ಒಬ್ಬರನ್ನು ಸಾಂಗ್ಲಿ ಜಿಲ್ಲೆಗೆ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆಗಿರುವ ಎನ್.ಎಂ.ದಿವಟೆ ಅವರನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿರುತ್ತದೆ.

ನಿಯೋಜಿತ ಅಧಿಕಾರಿಯು ಸಾಂಗ್ಲಿಯಲ್ಲಿರುವ ನೀರಾವರಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಅವರ ಕಚೇರಿಯಲ್ಲಿ ಇದ್ದುಕೊಂಡು ಕೃಷ್ಣಾ ನದಿಯ ಜಲಾಶಯಗಳಲ್ಲಿ ನೀರು ಸಂಗ್ರಹ ಮಟ್ಟ ಹಾಗೂ ಹೊರ ಹರಿವು ಪ್ರಮಾಣದ ಕುರಿತು ನಿರಂತರವಾಗಿ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನೀಡಲಿದ್ದಾರೆ.
ಮಹಾರಾಷ್ಟ್ರದಲ್ಲಿರುವ ಕೃಷ್ಣಾ ನದಿಯ ಜಲಾಶಯಗಳಿಂದ ರಾಜಾಪುರ ಬ್ಯಾರೇಜ್ ವರೆಗಿನ ನೀರಿನ ಹೊರ ಹರಿವು ಕುರಿತು ನಿಯೋಜಿತ ಅಧಿಕಾರಿಯು ಮಾಹಿತಿಯನ್ನು ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.










