ಪ್ರಯಾಣಿಕರಿಗೆ ಚ್ಯುತಿ ಬಾರದಂತೆ ನೋಡಿಕೊಳ್ಳಿ

ಹುಬ್ಬಳ್ಳಿ: ಸುರಕ್ಷತೆಯ ನಂಬಿಕೆಯಿಂದ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು ಎಂದು ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಭರತ್ ಹೇಳಿದ್ದಾರೆ.

promotions

ಬಿ.ಆರ್.ಟಿ.ಎಸ್. ಕಂಟ್ರೋಲ್ ರೂಂ ನಲ್ಲಿ ಸಾರಿಗೆ ಸಂಸ್ಥೆಯ ಚಾಲಕರಿಗೆ ಆಯೋಜಿಸಿದ್ದ ಅಪಘಾತ ರಹಿತ ಸುರಕ್ಷಿತ ಚಾಲನೆ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡುತ್ತಿದ್ದರು.

promotions

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರತಿದಿನ 15 ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣ ಮಾಡುತ್ತಿದ್ದಾರೆ. ಸಂಸ್ಥೆಯ ಚಾಲಕರ ವೃತ್ತಿಪರತೆ ಹಾಗೂ ಸುರಕ್ಷಿತ ಚಾಲನೆಯ ಬಗ್ಗೆ ಸಾರ್ವಜನಿಕರು ವಿಶ್ವಾಸ ಹೊಂದಿದ್ದಾರೆ. ಅದಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಅಪಘಾತಗಳಿಂದ ಪ್ರಯಾಣಿಕರು, ಸಿಬ್ಬಂದಿ ಪ್ರಾಣ ಹಾನಿ, ಅಂಗವೈಕಲ್ಯತೆ ಅನುಭವಿಸಬೇಕಾಗುತ್ತದೆ. ಒಂದು ಅಪಘಾತದಿಂದ ಹಲವು ಕುಟುಂಬಗಳು ಸಾಕಷ್ಟು ನೋವು, ಜೀವನ ಸಂಕಷ್ಟಕ್ಕೆ ಸಿಲುಕುತ್ತವೆ‌. ಸಂಸ್ಥೆಗೂ ಅಪಾರ ಆರ್ಥಿಕ ಹೊರೆ ಬೀಳುತ್ತದೆ. ಹಿಗಾಗಿ ಚಾಲನಾ ಸಿಬ್ಬಂದಿ ಅಪಘಾತ ರಹಿತ ಕರ್ತವ್ಯ ನಿರ್ವಹಿಸಬೇಕು. ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂಸ್ಥೆಯಲ್ಲಿ ಹಲವಾರು ಉಪಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ಧಾರವಾಡ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯ ಮನೋರೋಗ ತಜ್ಞ ಡಾ. ಆದಿತ್ಯ ಪಾಂಡುರಂಗಿ ಯವರು ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಮಾನಸಿಕ ಸಮತೋಲನ ಮತ್ತು ಒತ್ತಡ ನಿರ್ವಹಣೆ ಕುರಿತು ಉಪನ್ಯಾಸ ನೀಡುತ್ತಾ, ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಪ್ರತಿನಿತ್ಯ ಹಲವಾರು ಬದಲಾವಣೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ನಾವು ಅವುಗಳಿಗೆ ಒಗ್ಗಿಕೊಳ್ಳದಿದ್ದಾಗ ನಮ್ಮಲ್ಲಿ ಒತ್ತಡ ಉಂಟಾಗುತ್ತದೆ. ಬದಲಾವಣೆಗಳನ್ನು ಸಕಾರತ್ಮಕವಾಗಿ ಸ್ವೀಕರಿಸಬೇಕು. ಅವುಗಳಿಗೆ ಹೊಂದಿಕೊಳ್ಳಬೇಕು ಮತ್ತು ಮೈಗೂಡಿಸಿಕೊಳ್ಳಬೇಕು. ಕರ್ತವ್ಯವನ್ನು ಪ್ರೀತಿಸಬೇಕು ಹಾಗೂ ಗೌರವಿಸಬೇಕು ಅಂದಾಗ ಮಾತ್ರ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಹೇಳಿದರು.

ಇತ್ತೀಚೆಗೆ ಸಂಭವಿಸಿದ ಕೆಲ ಅಪಘಾತಗಳ ವೀಡಿಯೋ ಕ್ಲಿಪ್ಪಿಂಗ್ ಗಳನ್ನು ಪ್ರಸ್ತುತಪಡಿಸಿ ಅಪಘಾತಗಳ ಪರಿಣಾಮ, ಸಂತ್ರಸ್ತರ ಸಂಕಷ್ಟ, ಅಪಘಾತಕ್ಕೆ ಕಾರಣ, ಅಪಘಾತ ತಪ್ಪಿಸಬಹುದಾಗಿದ್ದ ಸಾಧ್ಯತೆಗಳ ಕುರಿತು ತಜ್ಞರಿಂದ ವಿಶ್ಲೇಷಿಸಲಾಯಿತು.

ಹುಬ್ಬಳ್ಳಿ ಪೂರ್ವ ಸಂಚಾರ ಠಾಣೆ ಇನ್ಸ್ಪೆಕ್ಟರ್ ಕಾಡದೇವರಮಠ ಅವರು ಅಪಘಾತ ನಿಯಂತ್ರಣದಲ್ಲಿ ಸಂಚಾರ ನಿಯಮಗಳ ಪಾಲನೆ ಮಹತ್ವ ಕುರಿತು ತಿಳಿಸಿದರು.

ನಿವೃತ್ತ ಮುಖ್ಯ ತಾಂತ್ರಿಕ ಇಂಜಿನಿಯರ್ ಸುಭಾಷ ಚಂದ್ರ ಅವರು ಅಪಘಾತಗಳಿಂದ ಪ್ರಯಾಣಿಕರು, ಸಿಬ್ಬಂದಿ ಹಾಗೂ ಸಂಸ್ಥೆಯ ಮೇಲಾಗುವ ದುಷ್ಪರಿಣಾಮಗಳ ಕುರಿತು ತಿಳಿಸಿದರು.

ಸಂಸ್ಥೆಯ 9 ವಿಭಾಗಗಳ 52 ಡಿಪೊಗಳಿಂದ ಬಂದಿದ್ದ ಚಾಲಕರು ತರಬೇತಿಯಲ್ಲಿ ಭಾಗವಹಿಸಿದ್ದರು.

ಹಿರಿಯ ಅಧಿಕಾರಿಗಳಾದ ರಾಜೇಶ್ ಹುದ್ದಾರ, ಹೆಚ್. ರಾಮನಗೌಡರ, ನಾರಾಯಣಪ್ಪ ಕುರುಬರ, ಎಸ್.ಎಸ್.ಮುಜುಂದಾರ, ಶಿವಾನಂದ ನಾಗಾವಿ, ರವಿ ಅಂಚಿಗಾವಿ, ಹನುಮನಗೌಡರ ಮತ್ತಿತರರು ಇದ್ದರು.

Read More Articles