ದಾನಿಗಳ ಸಹಕಾರದಿಂದ ಸುಕನ್ಯಾ ಸಮೃದ್ಧಿ ಯೋಜನೆ ಯಶಸ್ವಿ; ಸಚಿವೆ ಶಶಿಕಲಾ ಜೊಲ್ಲೆ
- 14 Jan 2024 , 11:25 PM
- Belagavi
- 142
ನಿಪ್ಪಾಣಿ: ಬಡ ಹೆಣ್ಣು ಮಕ್ಕಳ ಭವಿಷ್ಯ ಉತ್ತಮವಾಗಿರಬೇಕು ಎಂಬ ಸದುದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಎಲ್ಲರೂ ಏಕತೆಯಿಂದ ಶ್ರಮಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ತಾಲೂಕಿನಲ್ಲಿಂದು ಹಮ್ಮಿಕೊಂಡ ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾ ನೂತನ ಪದಾಧಿಕಾರಿಗಳ ಪರಿಚಯ ಮತ್ತು ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ದಾನಿಗಳ ಸಹಕಾರದಿಂದಾಗಿ ನಮ್ಮ ಜಿಲ್ಲೆಯಲ್ಲಿ ಬಡ ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಮಹಿಳಾ ಮೋರ್ಚಾ ಉತ್ತಮವಾಗಿ ಸೇವೆ ಸಲ್ಲಿಸುತ್ತಾ ಬಂದಿದೆ.

ನಿಪ್ಪಾಣಿಯಲ್ಲಿ ಈಗಾಗಲೇ ಸುಮಾರು 50 ಬಡ ಹೆಣ್ಣು ಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಗಳನ್ನು ತೆರೆಯಲಾಗಿದೆ. ಇನ್ನು ಮುಂದೆಯೂ ಬಡ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆದು, ಆರ್ಥಿಕವಾಗಿ ಸಹಾಯ ಮಾಡುತ್ತೇವೆ ಎಂದರು. ನಂತರ ದಾನಿಗಳು ಹಾಗೂ ಮಹಿಳಾ ಮೋರ್ಚಾದ ಪದಾಧಿಕಾರಿಗಳ ಅವಿರತ ಕಾರ್ಯಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.











