ಮೈಸೂರು: ರಾಜ್ಯದ ಪ್ರಮುಖ ಪ್ರವಾಸಿತಾಣಗಳಿಗೂ ಹಾಗೂ ಪ್ರಸಿದ್ಧ ಮೈಸೂರು ಝೂ ಕೋರೊನಾದ ಲಾಕ್ ಡೌನ್ ಬಿಸಿ ತಟ್ಟಿತ್ತು. ಕಳೆದ 3 ತಿಂಗಳಿನಿಂದ ಬಂದ ಆಗಿದ್ದ ಮೈಸೂರು ಝೂ ಇಂದಿನಿಂದ ಪುನಾರಾರಂಭ ಆಗಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರ ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಮೃಗಾಲಯಗಳ ಪುನಾರಂಭಕ್ಕೆ ಅನುಮತಿ ಸಿಕ್ಕ ಹಿನ್ನೆಲೆಯಲ್ಲಿ ಅಲ್ಲಿಯ ಸಿಬ್ಬಂದಿ ವರ್ಗ ಅಗತ್ಯ ಸುರಕ್ಷತಾ ಕ್ರಮಗಳನ್ನೂ ಕೈಗೊಂಡು ಪ್ರವಾಸಿಗರನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ಕೊರೊನಾ ಮಾರ್ಗಸೂಚಿ ಪಾಲಿಸಿಕೊಂಡು ಮೃಗಾಲಯ ತೆರೆದಿದ್ದು ಮೃಗಾಲಯದಲ್ಲಿ ಪ್ರವಾಸಿಗರು, ಸಿಬ್ಬಂದಿ ಹಾಗೂ ಪ್ರಾಣಿ-ಪಕ್ಷಿಗಳ ಹಿತ ಕಾಪಾಡಲು ಸೂಕ್ತ ಕ್ರಮವನ್ನು ಕೈಗೊಳ್ಳಲಾಗಿದೆ. ಬೆಳಗ್ಗೆ 8.30ರಿಂದ ಸಂಜೆ 5.30ರವರೆಗೆ ಸಮಯ ನಿಗದಿ ಪಡಿಸಲಾಗಿದೆ. ವೀಕ್ಷಣೆಗೆ ಆಗಮಿಸುವ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಪ್ರವೇಶ ದ್ವಾರದಲ್ಲೇ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ದೇಹದಲ್ಲಿ ಹೆಚ್ಚು ಉಷ್ಣಾಂಶ ಹೆಚ್ಚು ಕಂಡು ಬಂದರೆ ವಾಪಸ್ ಕಳಿಸಲಾಗುತ್ತದೆ. ಅಂತರ ಕಾಯ್ದುಕೊಂಡು ಟಿಕೆಟ್ ಖರೀದಿಸಿ ವೀಕ್ಷಣೆಗೆ ಕೇವಲ 3 ಗಂಟೆಗಳ ಕಾಲಾವಕಾಶ ನೀಡಿದೆ. ಮೃಗಾಲಯದ ಆವರಣದಲ್ಲಿ ಬ್ಯಾರಿಕೇಡ್ ಮುಟ್ಟಬಾರದು, ಉಗುಳಬಾರದು, ಪಾನ್ ಮಸಾಲಾ ಸೇರಿದಂತೆ ಯಾವುದನ್ನು ಬಳಸಬಾರದು ಎಂದು ಸೂಚನೆ ನೀಡಲಾಗುತ್ತಿದೆ.