ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಿ: ಮಡ್ಡೆಪ್ಪ
- 15 Jan 2024 , 12:00 AM
- Belagavi
- 221
ಬೆಳಗಾವಿ: ರಾಜ್ಯ ಸರಕಾರ ಕುರುಬ ಸಮಾಜವನ್ನು ಕನಕ ಜಯಂತಿಯ ಒಳಗಾಗಿ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಕೇಂದ್ರ ಸರಕಾರಕ್ಕೆ ಶಿಪಾರಸ್ಸು ಮಾಡಬೇಕು ಎಂದು ಕರ್ನಾಟಕ ಕುರುಬರ ಸಂಘದ ಜಿಲ್ಲಾಧ್ಯಕ್ಷ ಮಡ್ಡೆಪ್ಪ ಲ ತೋಳಿನವರ ಒತ್ತಾಯಿಸಿದರು.

ಶುಕ್ರವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿ ಕುರುಬ ಸಮಾಜ 80 ಲಕ್ಷ ಅಧಿಕ ಜನಸಂಖ್ಯೆ ಹೊಂದಿದ್ದು, ಅತಿ ಹಿಂದುಳಿದ ಸಮಾಜವಾಗಿದೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸಾಕಷ್ಟು ಹಿಂದುಳಿದ ಸಮಾಜವಾಗಿದೆ. ಈಗಾಗಲೇ ನಮಗೆ 2 ಎ ಮೀಸಲಾತಿ ಇದ್ದು, ಈ ವರ್ಗದಲ್ಲಿ ನೂರಾರು ಜಾತಿಗಳಿವೆ. ಪಂಚಮಸಾಲಿ ಸಮಾಜವನ್ನು ಹೊರತು ಪಡಿಸಿ ಉಳಿದ ಎಲ್ಲಾ ಲಿಂಗಾಯತ ಉಪ ಪಂಗಡಗಳು 2 ಎ ಮೀಸಲಾತಿಯಲ್ಲಿವೆ. ಈಗಾಗಲೇ ಕಾಗಿನೆಲೆ ಸ್ವಾಮೀಜಿ ನೇತೃತ್ವದಲ್ಲಿ ಆರು ಕಡೆ ವಿಭಾಗ ಮಟ್ಟದ ಸಮಾವೇಶ, ಅಲ್ಲದೆ ಬೃಹತ್ ಪಾದಯಾತ್ರೆ ಮಾಡಿ ಸರಕಾರದ ಗಮನ ಸೆಳೆದಿದೆ. ಆದ್ದರಿಂದ ನಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿದರು.
ಈಗಾಗಲೇ ಕುರುವ ಸಮಾಜದ ಕೊಡಗು ಜಿಲ್ಲೆಯಲ್ಲಿ ಕುರುಬ ಜಾತಿಗೆ ಎಸ್ಟಿ ಮೀಸಲಾತಿ ನೀಡಲಾಗಿದೆ. ಬೀದರ ಜಿಲ್ಲೆಯಲ್ಲಿ ನಮ್ಮ ಸಮಾಜದ ಉಪ ಪಂಗಡವಾದ ಗೊಂಡ, ಸಮಾಜಕ್ಕೆ ಎಸ್ಟಿ ಮೀಸಲಾತಿ ಇರುತ್ತದೆ. ಅದನ್ನು ಕುರುಬ ಸಮಾಜದ ಎಲ್ಲಾ ಪಂಗಡಗಳಿಗೆ ಕರ್ನಾಟಕದಾದ್ಯಂತ ವಿಸ್ತರಿಸಬೇಕು ಎಂದರು.
ಬೆಂಗಳೂರಿನಲ್ಲಿ ನಡೆದ ಪರಿಶಿಷ್ಟ ಪಂಗಡ ಸಭೆಯಲ್ಲಿ ರಾಜ್ಯದಿಂದ 15 ಲಕ್ಷ ಜನ ಆಗಮಿಸಿ ಸರಕಾರಕ್ಕೆ ಒತ್ತಾಯ ಮಾಡಲಾಗಿದೆ. ನ.11 ರಂದು ನಡೆಯಲಿರುವ ಕನಕ ಜಯಂತಿ ಒಳಗಾಗಿ ನಮ್ಮ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಾಜಿ ಎಂಎಲ್ ಸಿ ವಿವೇಕರಾವ್ ಪಾಟೀಲ, ಲಕ್ಷ್ಮಣರಾವ್ ಚಿಂಗಳೆ, ರಾಜೇಂದ್ರ ಸಣ್ಣಕ್ಕಿ, ಶಂಕರಗೌಡ, ಸಿದ್ದಲಿಂಗ ದಳವಾಯಿ, ಎಸ್ ಎಫ್ ಪೂಜಾರಿ, ಅಶೋಕ ಮೆಟಗುಡ್ಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.










