ಬಿಜೆಪಿ ಮಹಿಳೆಯರು ಮತ್ತು ಶ್ರಮಿಕ ವರ್ಗದ ವಿರೋಧಿ : ಮುಖ್ಯಮಂತ್ರಿ ಸಿದ್ದರಾಮಯ್ಯ
- Shivaraj Bandigi
- 14 Jan 2024 , 11:01 PM
- Bengaluru
- 194
ಬೆಂಗಳೂರು : ಬಿಜೆಪಿ ಸೈದ್ಧಾಂತಿಕವಾಗಿಯೇ ಮಹಿಳೆಯರು ಮತ್ತು ಶ್ರಮಿಕ ವರ್ಗದ ವಿರೋಧಿ. ಈ ವರ್ಗ ಆರ್ಥಿಕವಾಗಿ ಸಭಲರಾಗುವುದನ್ನು ಬಿಜೆಪಿ ವಿರೋಧಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಕಾಂಗ್ರೆಸ್ ಸರ್ಕಾರದ ಅತ್ಯಂತ ಮಹತ್ವದ ಗೃಹ ಲಕ್ಷ್ಮಿ ಗ್ಯಾರಂಟಿ ಯೋಜನೆಗೆ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಮಾತನಾಡಿದರು.

ಇಡೀ ದೇಶದಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡಿದ ಏಕೈಕ ರಾಜ್ಯ ಕರ್ನಾಟಕ. ಬಿಜೆಪಿಯ ಬುರುಡೆ ದಾಸರು ಬುರುಡೆ ಬುಡುತ್ತಾ ಜನರ ಹಾದಿ ತಪ್ಪಿಸುತ್ತಿದ್ದಾರೆ.
ಅನ್ನಭಾಗ್ಯ ಯೋಜನೆ ಮೋದಿಯವರದ್ದು ಎಂದು ಬಿಜೆಪಿಯವರು ಬುರುಡೆ ಬಿಡುತ್ತಾರೆ. ಆದರೆ, ಬಿಜೆಪಿ ಅಧಿಕಾರದಲ್ಲಿರುವ ಉತ್ತರಪ್ರದೇಶ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಏಕೆ ಜಾರಿಗೆ ತಂದಿಲ್ಲ? ಅಲ್ಲೆಲ್ಲಾ ಉಚಿತ ಅಕ್ಕಿ ಕೊಡುವ ಕಾರ್ಯಕ್ರಮಗಳು ಏಕೆ ಇಲ್ಲ ಎಂದು ಪ್ರಶ್ನಿಸಿದರು.
ಗೃಹ ಲಕ್ಷ್ಮಿ ಯೋಜನೆಗೆ 35 ಸಾವಿರ ಕೋಟಿ ರೂಪಾಯಿ ಕೊಡುತ್ತಿದ್ದೇವೆ. ಇಡಿ ದೇಶದಲ್ಲಿ 30 ಸಾವಿರ ಕೋಟಿಯ ಒಂದೇ ಯೋಜನೆ ಜಾರಿಗೆ ತಂದ ಏಕೈಕ ರಾಜ್ಯ ನಮ್ಮ ಕರ್ನಾಟಕ. ಒಂದು ಕೋಟಿ 28 ಲಕ್ಷ ಕುಟುಂಬಗಳಿಗೆ ಗೃಹಲಕ್ಷ್ಮಿ ಯೋಜನೆ ತಲುಪುತ್ತಿದೆ. ಇದನ್ನು ಸಹಿಸಲಾರದೆ ಅತ್ತೆ-ಸೊಸೆ, ಅತ್ತಿಗೆ- ನಾದಿನಿ ಜಗಳ ಹುಟ್ಟು ಹಾಕ್ತಾ ಬಿಜೆಪಿಯವರು ಕಿರಿಕ್ ಮಾಡ್ತಾ ಇದಾರೆ. ಇವರಿಗೆ ಮನುಷ್ಯತ್ವ ಇದೆಯಾ ಎಂದು ಸಭೆಯಲ್ಲಿದ್ದ ಮಹಿಳೆಯರಿಗೆ ಕೇಳಿದರು. ಮಹಿಳೆಯರು ಇಲ್ಲ ಎಂದು ಕೂಗಿದರು.
ಶಾಸಕರಾದ ರಿಜ್ವಾನ್ ಹರ್ಷದ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ್ ಹಾಗೂ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಎಚ್. ಮುನಿಯಪ್ಪ, ಡಾ. ಹೆಚ್. ಸಿ. ಮಹದೇವಪ್ಪ, ರಹೀಂ ಖಾನ್, ಬೈರತಿ ಸುರೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸೇರಿದಂತೆ ಹಲವು ಶಾಸಕರು, ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.










