ಜಯಂತಿಗಳ ಆಚರಣೆ ಅನುದಾನ ನೀಡಿಕೆಯಲ್ಲಿ ತಾರತಮ್ಯವಿಲ್ಲ: ಕೋಟ ಶ್ರೀನಿವಾಸ ಪೂಜಾರಿ
- 14 Jan 2024 , 11:01 PM
- Belagavi
- 206
ಬೆಳಗಾವಿ : ಮಹಾಪುರುಷರ ರಾಜ್ಯಮಟ್ಟದ ಜಯಂತಿ ಕಾರ್ಯಕ್ರಮಕ್ಕೆ, ಆಯಾ ಜಿಲ್ಲಾಧಿಕಾರಿಗಳಿಗೆ ರೂ.5.00 ಲಕ್ಷಗಳು, ಜಿಲ್ಲಾ ಮಟ್ಟದ ಜಯಂತಿ ಆಚರಣೆಗೆ ರೂ.50,000 ಮತ್ತು ತಾಲ್ಲೂಕು ಮಟ್ಟದ ಆಚರಣೆಗೆ ರೂ.20,000 ಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ಎಲ್ಲಾ ಜಯಂತಿಗಳ ಆಚರಣೆಗೂ ಒಂದೇ ತರನಾದ ಅನುದಾನವನ್ನು ನೀಡಲಾಗುತ್ತಿದ್ದು, ಇದರಲ್ಲಿ ಯಾವುದೇ ತಾರತಮ್ಯವಿರುವುದಿಲ್ಲ.

ಜಯಂತಿಗಳನ್ನು ಆಚರಣೆ ಮಾಡುವಾಗ ಶಿಷ್ಟಾಚಾರದಂತೆ ಆಮಂತ್ರಣ ಪತ್ರಗಳನ್ನು ಮುದ್ರಿಸಿ, ಗಣ್ಯರನ್ನು ಆಹ್ವಾನಿಸಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ ಎಂದು ವಿಧಾನ ಪರಿಷತ್ತಿನ ಸಭಾ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು.

ರಾಜ್ಯ ಸರ್ಕಾರ ಪ್ರತಿ ವರ್ಷ ವಿವಿಧ ಸಮಾಜಗಳ ಜಯಂತಿಗಳನ್ನು ಆಚರಿಸುತ್ತಾ ಬರುತ್ತಿದ್ದು, ಈ ಎಲ್ಲಾ ಜಯಂತಿಗಳ ಆಚರಣೆಗೆ ಒದಗಿಸುತ್ತಿರುವ ಅನುದಾನದಲ್ಲಿ ತಾರತಮ್ಯವೆಸಗುತ್ತಿದ್ದು ಜಾತಿವಾರು ಜಯಂತಿಗಳ ಆಚರಣೆಯಲ್ಲಿ ಬಲಿಷ್ಠ ಸಮಾಜದ ಜಯಂತಿಗಳಿಗೆ ಹೆಚ್ಚಿನ ಕಾಳಜಿ ಹಾಗೂ ಅನುದಾನವನ್ನು ಒದಗಿಸುವುದು, ಸಣ್ಣ ಸಣ್ಣ ಸಮಾಜದ ಜಯಂತಿಗಳ ಆಚರಣೆಗೆ ತಾತ್ಸಾರ ತೋರುವುದು ನಡೆದುಕೊಂಡು ಬಂದಿರುತ್ತದೆ.
ಎಲ್ಲಾ ಜಯಂತಿಗಳನ್ನು ಶಿಷ್ಟಾಚಾರ ಪ್ರಕಾರ ನಡೆಸುತ್ತಿಲ್ಲ ಎನ್ನುವ ವಿಷಯದ ಬಗ್ಗೆ ಸದಸ್ಯ ಕೆ ಪಿ ನಂಜುಂಡಿ ಅವರು ನಿಯಮ 72ರಡಿಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು ನೀಡಿರುವ ಲಿಖಿತ ಹೇಳಿಕೆ ಬಗ್ಗೆ ತಿಳಿಸಿದ ಸಭಾ ನಾಯಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ವಿವಿಧ ಮಹಾಪುರುಷರ 31 ಜಯಂತಿಗಳನ್ನು ರಾಜ್ಯಮಟ್ಟ, ಜಿಲ್ಲಾಮಟ್ಟ, ಹಾಗೂ ತಾಲೂಕು ಮಟ್ಟದಲ್ಲಿ ಆಚರಣೆ ಮಾಡುತ್ತಿದ್ದು, ಆ ಮೂಲಕ ಮಹಾಪುರುಷರ ತತ್ವ ಸಂದೇಶಗಳನ್ನು ಹಾಗೂ ಜೀವನ ಆದರ್ಶಗಳನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ.
ರಾಜ್ಯಮಟ್ಟದ ಜಯಂತಿಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗಿರುವುದನ್ನು ಬದಲಾಯಿಸಿ ಆಯಾ ಮಹಾಪುರುಷರು ಜನಿಸಿದ ಜನ್ಮ ಸ್ವಾನ, ಅವರ ಕಾರ್ಯಕ್ಷೇತ್ರ ಅಲ್ಲದೆ ಆಯಾ ಮಹಾಪುರುವರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಗಳಲ್ಲಿ ರಾಜ್ಯಮಟ್ಟದ ಜಯಂತಿಗಳನ್ನು 2022ನೇ ಸಾಲಿನಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.










