ಹದಗೆಟ್ಟ ರಸ್ತೆ, ನಿದ್ರೆಗೆ ಜಾರಿದ ಪಿಡಬ್ಲುಡಿ ಅಧಿಕಾರಿಗಳು
- 14 Jan 2024 , 11:40 PM
- Belagavi
- 128
ಅಥಣಿ : ಪಟ್ಟಣದ ಹೊರವಲಯದ ಸುಮಾರು 5 ಕಿಲೋ ಮೀಟರ್ ರಸ್ತೆ ಹಾಳಾಗಿದ್ದು ದಿನಂಪ್ರತಿ ವಾಹನ ಸವಾರರು ಈ ರಸ್ತೆಯಲ್ಲಿ ಪ್ರಯಾಣಿಸಲು ಸರ್ಕಸ್ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಕೂಡಲೇ ರಸ್ತೆ ನಿರ್ಮಿಸಿ ಎಂದು ರಸ್ತೆಯಲ್ಲಿ ಗಿಡನೆಟ್ಟು ಕಾಂಗ್ರೇಸ್ ಮುಖಂಡರು ಆಕ್ರೋಷ ಹೊರಹಾಕಿದರು.

ಅಥಣಿಯಿಂದ ಖಿಳೇಗಾವಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಥಣಿ ಗ್ರಾಮೀಣ ಪ್ರದೇಶದಿಂದ ಅಬ್ಬಿಹಾಳವರೆಗೆ ಪೂರ್ಣ ಹದಗೆಟ್ಟಿದೆ ಬೃಹದಾಕಾರದ ಹೊಂಡಗಳು ಬಿದ್ದಿವೆ ಇದರಿಂದ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಸ್ಥಿತಿ ಎದುರಾಗಿದೆ. ಅಲ್ಲದೆ ರಸ್ತೆಯ ತುಂಬೆಲ್ಲ ಜಲ್ಲಿ ಕಲ್ಲುಗಳು ಬಿದ್ದಿವೆ, ತಗ್ಗು ಗುಂಡಿಗಳು ಬಿದ್ದಿವೆ ಇದರಿಂದ ಶಾಲಾ ಮಕ್ಕಳು, ರೈತರು ಮುಖ್ಯವಾಗಿ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ಹೋಗಬೇಕಾದ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.

ಇನ್ನೂ ಈ ರಸ್ತೆಯ ಅವ್ಯವಸ್ಥೆ ಬಗ್ಗೆ ಗಮನಕ್ಕೆ ಬಂದರೂ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾತ್ರ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕು ಕೇಂದ್ರವಾದ ಅಥಣಿಗೆ ಸಂಪರ್ಕ ಜೋಡಿಸುವ ಜಿಲ್ಲಾ ಮುಖ್ಯರಸ್ತೆಯ ಸ್ಥಿತಿಯ ಬಗ್ಗೆ ಅಥಣಿಯ ಶಾಸಕರು ಗಮನಹರಿಸಬೇಕಾಗಿದೆ ಅಲ್ಲದೆ ಇನ್ನಾದರೂ ನಿದ್ರೆಯಿಂದ ಎದ್ದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣ ರಸ್ತೆ ಸುಧಾರಣೆಗೆ ಮುಂದಾಗಬೇಕಾಗಿದೆ.










