ಕೆ.ಎಲ್.ಇ ಸಂಸ್ಥೆ ವಿಶ್ವಮಾನ್ಯವಾಗಿ ಬೆಳೆಸಿದ ಕೀರ್ತಿ ಡಾ.ಪ್ರಭಾಕರ ಕೋರೆ ಅವರಿಗೆ ಸಲ್ಲುತ್ತದೆ: ಮುಖ್ಯಮಂತ್ರಿ ಬೊಮ್ಮಾಯಿ 

ಬೆಳಗಾವಿ : ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಡಾ.ಪ್ರಭಾಕರ್ ಕೋರೆ ಅವರು ಕಾರ್ಮೋಡ ವಾತಾವರಣದಂತಹ ಕಠಿಣವಾಗಿದ್ದ ಹಲವಾರು ಸವಾಲುಗಳನ್ನು ಎದುರಿಸಿ,  ಕೆ.ಎಲ್.ಇ ಸೊಸೈಟಿಯನ್ನು ಬೆಳೆಸಿದ್ದಾರೆ. ಕೆ.ಎಲ್.ಇ ಸಂಸ್ಥೆ ವಿಶ್ವ ಮಾನ್ಯವಾಗಿ ಬೆಳೆಸಿರುವ ಕೀರ್ತಿ ಕೋರೆ ಅವರಿಗೆ ಸಲ್ಲುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

promotions

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಡಾ. ಪ್ರಭಾಕರ ಕೋರೆ ಅವರ 75ನೇ ಅಮೃತ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

promotions

ಕೆ.ಎಲ್. ಇ ಸಂಸ್ಥೆ ದೇಶದಲ್ಲೇ ದೊಡ್ಡ ಯೂನಿವರ್ಸಿಟಿಯಾಗಿ ಪರಿವರ್ತನೆಯಾಗಿದೆ. ಅದನ್ನು ಕಟ್ಟಲು ಕೋರೆ ಅವರ ಶ್ರಮ ಬಹಳಷ್ಟಿದೆ. ಗ್ರಾಮೀಣ ಬಡ ಜನರಿಗೆ ಶಿಕ್ಷಣ ಒದಗಿಸುವುದು ಅವರ ಮುಖ್ಯ ಗುರಿಯಾಗಿತ್ತು. ತಮ್ಮ ರಾಜಕೀಯ ಜೀವನ ತ್ಯಾಗದ ಜೊತೆಗೆ ಸಮಾಜಮುಖಿ ಕೆಲಸಗಳನ್ನು ಮಾಡಿ ಈ ಸಾಧನೆಯ ಶಿಖರವನ್ನು ಏರಿದ್ದಾರೆ ಎಂದು ಹೇಳಿದರು.

ಸರ್ಕಾರ ಮಾಡುವ ಅನೇಕ ಕೆಲಸಗಳನ್ನು ಕೆ.ಎಲ್. ಇ ಸೊಸೈಟಿ ಮಾಡಿದೆ. ಈ ಸಂಸ್ಥೆಯ ಪ್ರೇರಣೆಯಿಂದ ಅನೇಕ ಸೊಸೈಟಿ, ಶಿಕ್ಷಣ ಸಂಸ್ಥೆಗಳು ಪ್ರಾರಂಭವಾಗಿ ಉತ್ತಮ ಸೇವೆ ನೀಡುತ್ತಿವೆ. ಪ್ರಭಾಕರ ಕೋರೆ ಅವರು ಈ ಭಾಗದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ್ದಾರೆ. ಜಗತ್ತಿನ ಶಿಕ್ಷಣ ಕ್ಷೇತ್ರದಲ್ಲಿ ವೈದ್ಯಕೀಯ, ಕೃಷಿ ಸೇರದಂತೆ ತಂತ್ರಜ್ಞಾನ ಇಲ್ಲಿ ದೊರೆಯುತ್ತಿವೆ.

ಆದರ್ಶ ವ್ಯಕ್ತಿತ್ವ: ಪ್ರಭಾಕರ ಕೋರೆಯವರ ಶ್ರಮ, ಕಾರ್ಯವೈಖರಿ, ಬದ್ಧತೆ ಮೂಲಕ ಕೆ.ಎಲ್.ಇ ಮಹತ್ತರ ಬೆಳವಣಿಗೆ ಕಂಡಿದೆ. ಈ ಸೊಸೈಟಿಗೆ ಉಜ್ವಲ ಭವಿಷ್ಯ ನಿರ್ಮಿಸಿ ಕೊಟ್ಟಿದ್ದಾರೆ.
ರಾಜಕೀಯ, ಸಾಮಾಜಿಕ, ಧಾರ್ಮಿಕ, ಎಲ್ಲಾ ರಂಗಗಳಲ್ಲಿ ಅವರು ಪ್ರಭಾವಿ, ಹಾಗೂ ಆದರ್ಶ ವ್ಯಕ್ತಿತ್ವಗಳಾಗಿದ್ದಾರೆ ಎಂದು ತಿಳಿಸಿದರು.

ಸಮಾಜ ಸೇವೆ,ಬಡವರಿಗೆ ಶಿಕ್ಷಣ ಒದಗಿಸಲು  ಕೆ.ಎಲ್. ಇ ಸೊಸೈಟಿಗೆ ಅವರು ತಮ್ಮ ಬದುಕು ಮುಡಿಪಾಗಿಟ್ಟಿದ್ದಾರೆ. ಸೂರ್ಯ ಚಂದ್ರ ಇರುವ ವರೆಗೂ ಪ್ರಭಾಕರ ಕೋರೆ ಅವರು ಹೆಸರು ಶಾಶ್ವತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಮ್ಮೆ ವ್ಯಕ್ತಪಡಿಸಿದರು.

ರಾಜಕೀಯ ವಲಯದಲ್ಲಿ ನನ್ನ ಬೆಳವಣಿಗೆ ಬದಿಗೊತ್ತಿ   ಅನೇಕ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ನಾನು ಕೆ.ಎಲ್.ಇ ಸೊಸೈಟಿಗೆ ಉನ್ನತಿಗೆ ಹೆಚ್ಚು ಒತ್ತು ನೀಡಿದೆ. ಪ್ರಾರಂಭ ಹಂತದಲ್ಲಿ 300 ಬೆಡ್ ಪ್ರಾರಂಭಿಸಿ ಈಗ 2400 ಬೆಡ್ ಆಸ್ಪತ್ರೆಯಾಗಿ ಮಾರ್ಪಾಡಾಗಿದೆ. ಅನೇಕರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ, ನೀಡಲಾಗುತ್ತಿದೆ ಎಂದು ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರು ತಿಳಿಸಿದರು.

ಇಂದಿನ ದಿನ ನಮ್ಮ ಬದುಕಿನ ಅತ್ಯಂತ ಮಹತ್ವದ ದಿನವಾಗಿದೆ. ತಮ್ಮ ಸಾಧನೆಗೆ ತಂದೆ ತಾಯಿ ಹಿರಿಯ ಸಹೋದರ ಚಿದಾನಂದ ಕೋರೆ ಅವರು ಕಾರಣ ಎಂದು ಸ್ಮರಿಸಿದರು.

ಕೆ.ಎಲ್.ಇ.ಆಸ್ಪತ್ರೆಯ ಸಾಧನೆ: ದೇಶ,ವಿದೇಶದಲ್ಲಿ ನಡೆಯುತ್ತಿರುವ ಬಹುದೊಡ್ಡ ಚಿಕಿತ್ಸೆಗಳಾದ, ಮೂತ್ರಪಿಂಡ, ಹೃದಯ ಕಸಿ ಮಾಡುವಷ್ಟು ದೊಡ್ಡ ಆಸ್ಪತ್ರೆಯಾಗಿ ಕೆ.ಎಲ್.ಇ ಆಸ್ಪತ್ರೆ ಸಾಧನೆ ಮಾಡಿದೆ. ಜಗತ್ತಿನಲ್ಲಿ ಯಾವುದೇ ಹೊಸ ತಂತ್ರಜ್ಞಾನ ಬಂದರೂ ಅದನ್ನು ಕೆ.ಎಲ್. ಇ ಆಸ್ಪತ್ರೆಯಲ್ಲಿ ತರಲಾಗುವುದು ಎಂದು ತಿಳಿಸಿದರು.

ಶೀಘ್ರದಲ್ಲೇ ಹುಬ್ಬಳ್ಳಿಯಲ್ಲಿ 1000 ಸಾವಿರ ಬೆಡ್ ಆಸ್ಪತ್ರೆ  ನಿರ್ಮಾಣ ಮಾಡಲಾಗುವದು. ಈ ಭಾಗದಲ್ಲಿ ಹೆಚ್ಚು ಕಬ್ಬು ಬೆಳೆ ಇರುವುದರಿಂದ ಅನುಕೂಲ ಆಗುವ ನಿಟ್ಟಿನಲ್ಲಿ ನಿಜಲಿಂಗಪ್ಪ ಸಕ್ಕರೆ ಸಂಶೋಧನೆ ಕಾರ್ಖಾನೆ ನಿರ್ಮಾಣ ಮಾಡಲಾಯಿತು ಎಂದು ಹೇಳಿದರು.

ರೈತರ ಮಕ್ಕಳಿಗೆ ಉಚಿತ ಶಿಕ್ಷಣದ ಭರವಸೆ: ಒಳ್ಳೆಯ ಕೆಲಸಕ್ಕೆ ಪಕ್ಷ, ಜಾತಿ, ಭಾಷೆ ಅವಶ್ಯಕತೆ ಇಲ್ಲ.
ಮುಂದಿನ ದಿನಗಳಲ್ಲಿ ಸರ್ಕಾರದ ಸಹಯೋಗದೊಂದಿಗೆ ರೈತರ ಮಕ್ಕಳಿಗೆ,  ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುವದು ಎಂದು ಕೆ.ಎಲ್. ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರು ಭರವಸೆ ನೀಡಿದರು  

ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಗಿಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ , ವಿವಿಧ ಚಿಕಿತ್ಸೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕೆ.ಎಲ್.ಇ ಸಂಸ್ಥೆಯದಾಗಿದೆ. ಬೆಳಗಾವಿಯ ದಕ್ಷಿಣ ಭಾಗದ ಜನರಿಗೆ ಯಳ್ಳೂರಿನಲ್ಲಿ 500 ಬೆಡ್ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅವಶ್ಯವಿರುವ ವಿವಿಧ ಭಾಗಗಳಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುವದು ಎಂದು ತಿಳಿಸಿದರು.

ಸನ್ಮಾನ ಕಾರ್ಯಕ್ರಮ: ಕೆ.ಎಲ್. ಇ ಸಂಸ್ಥಾಪಕ ಪ್ರಭಾಕರ ಕೋರೆ 75 ನೇ ಅಮೃತ ಮಹೋತ್ಸವ ಅಂಗವಾಗಿ ಅವರ ಜೀವನ ಚರಿತ್ರೆ, ವಿವಿಧ ಕ್ಷೇತ್ರಗಳಲ್ಲಿ ಸಾಧೆಗೈದ ಕುರಿತು ಪುಸ್ತಕ ಬಿಡುಗಡೆ ಮಾಡಲಾಯಿತು. ಬಳಿಕ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಾ.ಪ್ರಭಾಕರ ಕೋರೆ  ಹಾಗೂ ಪತ್ನಿ ಆಶಾ ಕೋರೆ ಅವರಿಗೆ ಗೌರವಿಸಿ, ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಡಾ. ಪ್ರಭಾಕರ ಕೋರೆ ಅವರಿಗೆ 
ಗ್ರಂಥ, ಪುಸ್ತಕಗಳ ತುಲಾಭಾರ ಮಾಡಲಾಯಿತು.

ಕೇಂದ್ರ ಶಿಕ್ಷಣ, ಕೌಶಲ್ಯ ಇಲಾಖೆಯ ಸಚಿವರಾದ ಧರ್ಮೇಂದ್ರ ಪ್ರಧಾನ್, ಕೇಂದ್ರ ಸಂಸದೀಯ ಹಾಗೂ ಕಲ್ಲಿದ್ದಲು, ಗಣಿ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪ, ಜಗದೀಶ್ ಶೆಟ್ಟರ್, ಗೋವಾ ರಾಜ್ಯದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಮಾಜಿ ಸಚಿವ ಆರ್.ವಿ ದೇಶಪಾಂಡೆ, ಪ್ರಾಥಮಿಕ, ಪ್ರೌಡ ಶಿಕ್ಷಣ ಸಚಿವ ಬಿ.ಸಿ ನಾಗೇಶ್,  ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ,  ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಸೊಲ್ಲಾಪುರ ಸಂಸದ ಜಯಸಿದ್ದೇಶ್ವರ ಸ್ವಾಮಿ, ಸಂಸದೆ ಮಂಗಳಾ ಅಂಗಡಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆ, ಬೆಳಗಾವಿ ದಕ್ಷಿಣ ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಅಭಯ ಪಾಟೀಲ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ, ಪರಿಷತ್ ಸದಸ್ಯ ಲಕ್ಷ್ಮಣ ಸವದಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ನಗರ ಪೊಲೀಸ್ ಆಯುಕ್ತರಾದ ಡಾ.ಎಂ. ಬಿ ಬೋರಲಿಂಗಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ ಸ್ವಾಗತ ಕೋರಿದರು.

Read More Articles