ಮಳೆಯಿಂದಾಗಿ ದ್ರಾಕ್ಷಿ ಬೆಳೆಗೆ ದೌಣಿ, ಬೂದಿ, ಗೊನೆಕೊಳೆ ರೋಗ !
- 15 Jan 2024 , 3:23 AM
- Belagavi
- 416
ಅಥಣಿ : ಸತತವಾಗಿ ಎರಡು ವಾರಗಳಿಂದ ಪದೇ ಪದೆ ಸುರಿಯುತ್ತಿರುವ ಮಳೆ ಮತ್ತು ಮೋಡ ಕವಿದ ವಾತಾವರಣ ದ್ರಾಕ್ಷಿಗೆ ಮಾರಕವಾಗಿ ಪರಿಣಮಿಸಿದೆ. ಸಿಹಿ ಹಣ್ಣಿನ ಬೆಳೆಗೆ ದೌಣಿ, ಬೂದಿ, ಗೊನೆ ಕೊಳೆ ರೋಗ ಬಾಧಿಸಿದೆ.

ಅಥಣಿ ತಾಲೂಕಿನ ಸುಮಾರು 23 ಸಾವಿರ ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಿದೆ, ತಾಲೂಕಿನ ಪೂರ್ವ ಹಾಗೂ ಉತ್ತರ ಭಾಗದ ಬಹುತೇಕ ರೈತರಿಗೆ ದ್ರಾಕ್ಷಿ ಬೆಳೆಯೇ ಜೀವನಾಧಾರ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ದ್ರಾಕ್ಷಿ ಗಿಡಗಳನ್ನು ಚಾಟ್ನಿ ಮಾಡಲಾಗಿದೆ. ಬಹಳಷ್ಟು ತೋಟಗಳಲ್ಲಿ ಈಗಾಗಲೇ ಹೂಗಳು ಮೂಡಿ, ಕಾಯಿ ಕಟ್ಟುವ ಹಂತದಲ್ಲಿವೆ. ಈ ಹಂತದಲ್ಲಿ ಉತ್ತಮ ಹವಾಮಾನ ಅಗತ್ಯ.

ಆದರೆ ಸುರಿಯುತ್ತಿರುವುದರಿಂದ ಈಗ ಮಳೆ ಡವಣಿ ಹಾಗೂ ಕೊಳೆ ರೋಗದಿಂದ ದ್ರಾಕ್ಷಿ ಕಾಳುಗಳ ಗೊಂಚಲು ಕೊಳೆಯುತ್ತಿವೆ. ಹೂವುಗಳು ಉದುರುತ್ತಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಚಾಟಿ ಮಾಡಿದ ತೋಟಗಳಲ್ಲಿ ಈಗಷ್ಟೇ ಹೂವು ಮೂಡುತ್ತಿದ್ದು ಅದಕ್ಕೂ ಡೌನಿ ರೋಗ ಬರುವ ಆತಂಕ ಎದುರಾಗಿದೆ.
ತಾಲೂಕಿನ ಅರಟಾಳ, ಬಾಡಗಿ, ಕೋಹಳ್ಳಿ, ಬಡಚಿ, ಯಕ್ಕಂಚಿ, ಯಲಿಹಡಲಗಿ, ಅಡಹಳ್ಳಿ, ಅಡಹಳಟ್ಟಿ, ಕಕಮರಿ, ರಾಮತೀರ್ಥ, ಕೊಟ್ಟಲಗಿ ಸೇರಿದಂತೆ ತೆಲಸಂಗ ಹೋಬಳಿಯ ವ್ಯಾಪ್ತಿಯ ಅನೇಕ ಹಳ್ಳಿಗಳಲ್ಲಿ ದ್ರಾಕ್ಷಿ ಬೆಳೆಗೆ ರೋಗ ತಗುಲಿದೆ. ದ್ರಾಕ್ಷಿ ಗೊನೆಯಲ್ಲಿ ನೀರು ನಿಲ್ಲುವುದರಿಂದ ಗೊನೆಗಳು ಕೊಳೆಯುತ್ತವೆ. ಎಷ್ಟು ಔಷಧ ಸಿಂಪಡಿಸಿದರೂ ರೋಗ ಹತೋಟಿಗೆ ಬರುತ್ತಿಲ್ಲ ಎಂಬುದು ರೈತರ ಅಭಿಮತ.










