ಗೌರಿ ಗಣೇಶ ಹಬ್ಬ, ಈದ್ ಮಿಲಾದ್: ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯಿಂದ ಶಾಂತಿ ಸಭೆ
- shivaraj B
- 29 Aug 2024 , 6:42 PM
- Koppal
- 153
ಕೊಪ್ಪಳ : ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಎರಡೂ ಹಬ್ಬಗಳು ಏಕಕಾಲಕ್ಕೆ ಬಂದಿರುವುದರಿಂದ ಎಲ್ಲರೂ ಪರಸ್ಪರ ಸ್ನೇಹ ಭಾವನೆಯಿಂದ ಕೂಡಿ ಹಬ್ಬ ಆಚರಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರ ಹೇಳಿದರು.
ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಗಸ್ಟ್ 29ರಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಂತಿ ಸೌಹಾರ್ದತೆಗೆ ಹೆಸರಾಗಿರುವ ಕೊಪ್ಪಳ ಜಿಲ್ಲೆಗೆ ಕಳಂಕ ಬಾರದ ರೀತಿಯಲ್ಲಿ, ಎಲ್ಲ ಧರ್ಮೀಯರೂ ಸೇರಿ ಕಾನೂನು ಸುವ್ಯವಸ್ಥೆಗೆ ಹಾಗೂ ಕೋಮು ಭಾವನೆಗಳಿಗೆ ಧಕ್ಕೆ ಬಾರದ ರೀತಿ ಶಾಂತಿ ಸೌಹಾರ್ದತೆಯಿಂದ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಆಚರಿಸಬೇಕು.
ಹಬ್ಬ ಆಚರಣೆ ಸಂಬಂಧ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಪಾಲನೆ ಮಾಡಬೇಕು. ಆಸ್ಪತ್ರೆ, ಶಾಲೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರು ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದರು.
ಗಣೇಶ ಪ್ರತಿಷ್ಠಾಪನೆಗೆ ಅಗತ್ಯವಿರುವ ಸ್ಥಳ, ಪೆಂಡಾಲ್ ವಿದ್ಯುತ್ ಸಂಪರ್ಕ ಮುಂತಾದ ಪರವಾನಿಗೆಗಳನ್ನು ಏಕಗವಾಕ್ಷಿ ಪದ್ಧತಿಯಡಿ ಪಡೆದುಕೊಳ್ಳಬೇಕು. ಶುಭಾಶಯ ಕೋರುವ ಬ್ಯಾನರ್, ಬಂಟಿಂಗಗಳನ್ನು ಆಳವಡಿಸಲು ಆಯಾ ಸ್ಥಳೀಯ ಪ್ರಾಧಿಕಾರದಿಂದ ತಪ್ಪದೇ ಅನುಮತಿ ಪಡೆದುಕೊಳ್ಳಬೇಕು. ಪೆಂಡಾಲುಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ಪರವಾನಿಗೆ ಪಡೆಯಬೇಕು ಎಂದರು.
ಗಣೇಶ ಮೂರ್ತಿಗಳ ವಿಸರ್ಜನೆ, ಮೆರವಣಿಗೆ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗುವುದು ಎಂದರು.
ರಸ್ತೆಯಲ್ಲಿ ಪೆಂಡಾಲ್ ಹಾಕಿ ಸಾರ್ವಜನಿಕರಿಗೆ ಹಾಗೂ ಅಂಬ್ಯುಲೆನ್ಸ್, ಅಗ್ನಿ ಶಾಮಕ ವಾಹನಗಳ ಓಡಾಟಕ್ಕೆ ತೊಂದರೆ ಮಾಡಲು ಅವಕಾಶವಿರುವುದಿಲ್ಲ. ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಪರಿಸರ ಸ್ನೇಹಿ ಹಾಗೂ ಮಣ್ಣಿನಿಂದ ಮಾಡಿದ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬೇಕು ಎಂದರು.
ಕೊಪ್ಪಳ ಜಿಲ್ಲೆಯ ಸಾರ್ವಜನಿಕರು ಇದುವರೆಗೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗೆ ಸಹಕಾರ ನೀಡಿದ್ದಾರೆ. ಮುಂದೆಯು ಸಹ ಸಹಕಾರ ನೀಡಿ ಎರಡೂ ಹಬ್ಬಗಳು ಶಾಂತಿಯಿಂದ ನೆರವೇರಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ರಾಮ್ ಎಲ್ ಅರಿಸಿದ್ದಿ ಅವರು ಮಾತನಾಡಿ, ಗಣೇಶ ಪ್ರತಿಷ್ಠಾಪನೆಯ ಪೆಂಡಾಲ್‌ಗಳಲ್ಲಿ ಅಗ್ನಿನಂದಕಗಳನ್ನು ಬಳಕೆ ಮಾಡಬೇಕು, ಪೆಂಡಾಲ್‌ಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು. ಪೆಂಡಾಲ್‌ನಲ್ಲಿ ಸಾರ್ವಜನಿಕರ ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದ್ವಾರ ಮಾರ್ಗ ನಿರ್ಮಿಸಬೇಕು. ಗಣೇಶ ಪ್ರತಿಷ್ಠಾಪಣಾ ಮಂಡಳಿಯವರು ಮೂರ್ತಿಗಳ ವಿಸರ್ಜನೆ, ಮೇರವಣಿಗೆ ಮಾಡುವ ಮಾರ್ಗವನ್ನು ಮುಂಚಿತವಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ತಿಳಿಸಿ ಕಡ್ಡಾಯವಾಗಿ ಪರವಾನಿಗೆಯನ್ನು ಪಡೆದುಕೊಳ್ಳಬೇಕು. ಪರವಾನಿಗೆ ಪಡೆದ ಮಾರ್ಗವನ್ನು ಯಾವುದೇ ಕಾರಣಕ್ಕೂ ಬದಲಾವಣೆಯನ್ನು ಮಾಡುವಂತಿಲ್ಲ. ಗಣೇಶ ಮೂರ್ತಿಯ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಎಲ್ಲರೂ ಶಾಂತಿ, ಸಂಯಮದಿಂದ ವರ್ತಿಸಿ, ಕಾನೂನು ಸುವ್ಯವಸ್ಥೆ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಬೇಕು. ಈದ್ ಮಿಲಾದ್ ಹಬ್ಬವನ್ನು ಸಹ ಶಾಂತಿಯುತವಾಗಿ ಆಚರಿಸಬೇಕು ಎಂದರು.
ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮಜದ್ ಪಟೇಲ್ ಅವರು ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಶಾಂತಿ ನೆಲೆಸಿದೆ. ಇಲ್ಲಿ ಎಲ್ಲರೂ ಶಾಂತಿ, ಸೌಹಾರ್ದಯಿಂದ ಬಾಳುತ್ತಿದ್ದೇವೆ. ಎಲ್ಲಾ ಹಬ್ಬಗಳನ್ನು ಹಿಂದೂ-ಮುಸ್ಲಿಂ ಒಗ್ಗೂಡಿಕೊಂಡು ಆಚರಿಸುತ್ತೇವೆ ಅದರಂತೆ ಈ ಎರಡೂ ಹಬ್ಬಗಳನ್ನು ಶಾಂತಿ ಪಾಲನೆ ಜೊತೆಗೆ ಸಡಗರ ಸಂಭ್ರಮದಿಂದ ಆಚರಿಸುತ್ತೇವೆ ಎಂದರು.
ಮುಖಂಡರಾದ ಮರಿಯಪ್ಪ ಅವರು ಮಾತನಾಡಿ, ಹಬ್ಬದ ಸಂದರ್ಭದಲ್ಲಿ ಮದ್ಯ ಮಾರಾಟ ನಿಷೇಧ ಕಟ್ಟುನಿಟ್ಟಾಗಿ ಜಾರಿಯಾಗಬೇಕು ಎಂದರು.
ಮುಖಂಡರಾದ ನಾಸೀರ ಹುಸೇನಿ, ರಾಜಶೇಖರ ಆಡೂರ, ಗಂಗಾವತಿಯ ಶಾಮೀದ್ ಮನಿಯಾರ ಅವರು ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹೇಮಂತ್ ಕುಮಾರ್,
ಕೊಪ್ಪಳ ಉಪ ವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ
ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಹಶಿಲ್ದಾರರು, ಪೊಲೀಸ್ ಇಲಾಖೆಯ ಇನ್ನೀತರ ಅಧಿಕಾರಿಗಳು ಮತ್ತು ಸಿಬ್ಬಂದಿ, ಗಣೇಶ ಮಂಡಳಿಯ ಮುಖ್ಯಸ್ಥರು ಮತ್ತು ಮತ್ತಿತರರಿದ್ದರು.
ವರದಿ : ರವಿಚಂದ್ರ ಬಡಿಗೇರ