ಹೃದಯ ರೋಗ ಗಣನೀಯವಾಗಿ ಹೆಚ್ಚಳವಾಗುತ್ತಿದೆ: ಡಾ. ಜಾಲಿ
- 14 Jan 2024 , 4:54 AM
- Belagavi
- 231
ಬೆಳಗಾವಿ :ಎರಡುವರೆ ದಶಕದ ಹಿಂದೆ ಹ್ರೃದ್ರೋಗ ಎಂದು ಕೆಲವೇ ಕೆಲವು ಜನ ಬರುತ್ತಿದ್ದರು ಆದರೆ ಇಂದು ನೂರಾರು ಸಂಖ್ಯೆಯಲ್ಲಿ ತಪಾಸಣೆ ಮತ್ತು ಚಿಕಿತ್ಸೆಗಾಗಿ ಪ್ರತಿದಿನ ಆಸ್ಪತ್ರೆಗೆ ಬರುವದು ಸಾಮಾನ್ಯವಾಗಿದೆ. ಹೃದ್ರೋಗವು ತ್ವರಿತಗತಿಯಲ್ಲಿ ಹೆಚ್ಚಳವಾಗುತ್ತಿದ್ದು, 2030ಕ್ಕೆ ಇದು ವಿಶ್ವದಾದ್ಯಂತ ನಂ ಒನ್ ಕೊಲೆಗಾರ ರೋಗವಾಗಿ ಮಾರ್ಪಡಲಿದ್ದು, ಭಾರತದಲ್ಲಿ ಶೇ. 30ರಷ್ಟು ಸಾವು ಕೇವಲ ಹೃದ್ರೋಗದಿಂದ ಸಂಭವಿಸಲಿವೆ ಎಂದು ಸಮೀಕ್ಷೆಯು ಕಂಡುಕೊಂಡಿದೆ ಎಂದು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದ್ರೋಗ ವಿಭಾಗದ ಮುಖ್ಯಸ್ಥರಾದ ಡಾ. ಸುರೇಶ ಪಟ್ಟೇದ ಅವರಿಂದಿಲ್ಲಿ ಹೇಳಿದರು.

ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರತಿಯೊಂದು ಹೃದಯವನ್ನು ಹೃದಯಕ್ಕಾಗಿ ಬಳಸಿ ಎಂಬ ಧ್ಯೇಯವಾಕ್ಯದೊಂದಿಗೆ ಮುನ್ನಡೆದು, ಆರಂಭಿಕ ಹಂತದಲ್ಲಿ ಹೃದ್ರೋಗವನ್ನು ತಡೆಗಟ್ಟಿ ಸಮಾಜದಲ್ಲಿ ಜಾಗೃತಿ ಮೂಡಿಸುವುದು ವಿಶ್ವ ಹೃದಯ ದಿನದ ಮಹತ್ವವಾಗಿದೆ. ಮಾನಸಿಕ, ನೈತಿಕ, ಭಾವನಾತ್ಮಕವಾಗಿ ನಾವು ಜನರೊಂದಿಗೆ ಬೆರೆಯುವದರೊಂದಿಗೆ ನಾವೆಲ್ಲರೂ ನಮ್ಮ ಹೃದಯವನ್ನು ಬಳಸಬೇಕು. ಸಲಹೆ, ಕಾಳಜಿ, ಚಿಕಿತ್ಸೆಯು ಪ್ರತಿ ಹೃದಯವನ್ನು ಗುಣಪಡಿಸುತ್ತದೆ. ಹೃದಯವನ್ನು ನೋಡಿಕೊಳ್ಳುವುದು ಒಂದು ದಿನದ ಕೆಲಸವಲ್ಲ, ಅದು ಪ್ರತಿದಿನವೂ ಆಗಬೇಕು.

ಇದು ಮೊಣಕಾಲಿನ ಪ್ರತಿಕ್ರಿಯೆಯಲ್ಲ ಎಂದ ಅವರು, ಕಳೆದ 30 ವರ್ಷಗಳಿಂದ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಹೃದಯ ವಿಜ್ಞಾನ ವಿಭಾಗವು ಕಾರ‍್ಯನಿರ್ವಹಿಸುತ್ತಿದ್ದು, ಈ ಭಾಗದಲ್ಲಿ ಹೃದ್ರೋಗಿಗಳ ಆರೈಕೆಯಲ್ಲಿ ಮುಂಚೂಣಿಯಲ್ಲಿದೆ. ಎಲ್ಲ ಸಂಕೀರ್ಣ ಹೃದ್ರೋಗಗಳಿಗೆ ಸಮಗ್ರ ಚಿಕಿತ್ಸೆ ನಮ್ಮ ಆಸ್ಪತ್ರೆಯಲ್ಲಿ ಲಭ್ಯವಿದೆ ಎಂದು ಹೇಳಿದರು.
ಹಿರಿಯ ಹೃದಯ ಶಸ್ತ್ರಚಿಕಿತ್ಸಕರಾದ ಡಾ. ರಿಚರ್ಡ ಸಾಲ್ಡಾನಾ ಅವರು ಮಾತನಾಡಿ, ಅನಿಯಂತ್ರಿತ ಮಧುಮೇಹ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಜಡ ಜೀವನಶೈಲಿ ಮತ್ತು ಕೆಟ್ಟ ತಂಬಾಕು ಉತ್ಪನ್ನಗಳ ಅತಿರೇಕದ ಸೇವನೆಯಿಂದಾಗಿ ಹೃದ್ರೋಗಗಳು ಹೆಚ್ಚಾಗಲು ಕಾರಣ. ಕೊನೆಯ ಹಂತದ ಹೃದ್ರೋಗವು ಜೀವನದ ಅಂತ್ಯವಲ್ಲ, ಹೃದಯ ಕಸಿಯ ಕೊಡುಗೆಯನ್ನು ನೀಡಿದ ವೈದ್ಯವಿಜ್ಞಾನವು ಈ ರೋಗಿಗಳಿಗೆ ಚಿಕಿತ್ಸೆಯ ವರದಾನ ನೀಡಿದೆ.
ಡಾ. ಪ್ರಭಾಕರ ಕೋರೆ ಅವರ ನೇತೃತ್ವದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯು ಸಂಕೀರ್ಣ ಹೃದಯ ಕಸಿ ಮಾಡಲು ಅತ್ಯಾಧುನಿಕ ಉನ್ನತ ದರ್ಜೆಯ ವೈದ್ಯಕೀಯ ಮೂಲಸೌಕರ್ಯವನ್ನು ಕಲ್ಪಿಸಿಕೊಟ್ಟಿದೆ ಎಂದು ತಿಳಿಸಿದರು. ಇಲ್ಲಿಯವರೆಗೆ ಆಸ್ಪತ್ರೆಯಲ್ಲಿ 27 ಸಾವಿಕ್ಕೂ ಅಧಿಕ ಹೃದಯ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದ್ದರೆ, 2 ಲಕ್ಷಕ್ಕೂ ಅಧಿಕ ಹೃದಯ ಚಿಕಿತ್ಸಾ ಪ್ರಕ್ರಿಯೆಗಳನ್ನು ಮಾಡಲಾಗಿದೆ. ಬಿಪಿಎಲ್ ಕಾರ್ಡ ಹೊಂದಿದವರಿಗೆ ಹೃದಯ ಕಸಿಗೊಳಗಾಗುವ ರೋಗಿಗೆ ಆಯುಷ್ಯಮಾನ ಭಾರತ –ಕರ್ನಾಟಕ ಆರೋಗ್ಯ ಯೋಜನೆಯಡಿ 10 ಲಕ್ಷದವರೆಗೆ ಅನುದಾನ ಲಭಿಸುತ್ತದೆ ಎಂದು ತಿಳಿಸಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಮತ್ತು ಮುಖ್ಯ ಕರ‍್ಯನಿರ್ವಹಣಾಧಿಕಾರಿಗಳಾದ ಡಾ. ಎಂ.ವಿ.ಜಾಲಿ ಅವರು ಮಾತನಾಡಿ, ಹೃದಯ ಕಸಿಯ ಯಶಸ್ವಿಯು ತಂಡದ ಕಠಿಣ ಪ್ರಯತ್ನದಲ್ಲಿ ಅಡಗಿದೆ. ಇದು ನರತಜ್ಞವೈದ್ಯರು, ನರಶಸ್ತ್ರಚಿಕಿತ್ಸಕರು ದಾನಿಗಳ ಮೃತ ಮೆದುಳಿನ ಸಾವಿನ ಘೋಷಣೆ, ಅಂಗಾಂಗಗಳನ್ನು ಹಿಂಪಡೆಯುವದು, ನಿರ್ವಹಿಸುವದು ಅತ್ಯಂತ ಕಠಿಣವಾದದ್ದು. ಅಂಗಾಂಗಗಳನ್ನು ಶೀಘ್ರವಾಗಿ ಸ್ಥಳಾಂತರಿಸಲು ಹಸಿರು ಕಾರಿಡಾರ್ ಅನ್ನು ಸಕಾಲಿಕವಾಗಿ ಒದಗಿಸುವಲ್ಲಿ ಪೊಲೀಸ್ ಇಲಾಖೆಯನ್ನೂ ಒಳಗೊಂಡಿರುತ್ತದೆ.
ಈಗಾಗಲೇ ಹೃದಯ ಶಸ್ತ್ರಚಿಕಿತ್ಸಾ ತಂಡವು 8 ಯಶಸ್ವಿ ಹೃದಯ ಕಸಿ ಮಾಡಿದೆ ಎಂದು ಹೇಳಿದರು.
ತಂತ್ರಜ್ಞಾನವು ಜಡತ್ವದ ಜೀವನವನ್ನು ಕಲಿಸಿಕೊಡುತ್ತಿದೆ. ಮಕ್ಕಳನ್ನು ಮೊಬೈಲ ಗೀಳು ಬಿಡಿಸಿ ಆಟಕ್ಕೆ ಕಳುಹಿಸಲು ಸಾಧ್ಯವಾಗುತ್ತಿಲ್ಲ. 600 ವರ್ಷಗಳ ಹಿಂದೆಯೇ ಭಾರತದಲ್ಲಿ ಸಾಂಪ್ರದಾಯಿಕ ಆಹಾರ ಪದ್ದತಿಯನ್ನು ಹೇಳಿಕೊಟ್ಟಿದ್ದಾರೆ. ಆದರೆ ಆಧುನಿಕತೆಯಲ್ಲಿ ಪಾಸ್ಟಪುಡ್ ಹಾಗೂ ಒತ್ತಡದ ಜೀವನದಿಂದಾಗಿ ಮಧುಮೇಹದೊಂದಿಗೆ ಹೃದ್ರೋಗವು ಅಂಟಿಕೊಳ್ಳುತ್ತಿದೆ.
ಶೇ. 50ರಷ್ಟು ಹೃದ್ರೋಗಿಗಳು ಮಧುಮೇಹ ಪೀಡಿತರಾಗಿದ್ದಾರೆ. ಅದ್ದರಿಂದ ಮಕ್ಕಳನ್ನು ಮೊಬೈಲ್ ಮನರಂಜನೆಯಿಂದ ಹೊರಗಿಡಬೇಕು ಎಂದು ಕರೆ ನೀಡಿದರು.
ಯುರಾಲಾಜಿಯ ಹಿರಿಯ ಶಸ್ತ್ರಚಿಕಿತ್ಸಕರು ಹಾಗೂ ಕ್ಲಿನಿಕಲ್ ಸೇವೆಗಳ ನಿರ್ದೇಶಕರಾದ ಡಾ. ಆರ್ ಬಿ ನೇರ್ಲಿ ಅವರು ಮಾತನಾಡಿ, ಕಿಡ್ನಿಯನ್ನು ಜೀವಂತವಿರುವ ವ್ಯಕ್ತಿ ದಾನಮಾಡಬಹುದು. ಆದರೆ ಹೃದಯವನ್ನು ಮೃತಮೆದುಳು ಹೊಂದಿದ ವ್ಯಕ್ತಿ ಮಾತ್ರ ದಾನ ಮಾಡಲು ಸಾಧ್ಯ. ದೇಶಾದ್ಯಂತ ವರ್ಷದಲ್ಲಿ ಸಾವಿರಕ್ಕೂ ಕಡಿಮೆ ಹೃದಯ ಕಸಿಯಾಗುತ್ತಿವೆ.
ಆದ್ದರಿಂದ ಸಮಾಜದಲ್ಲಿ ಜಾಗೃತಿ ಮೂಡಿಸಿ, ಅಂಗಾಂಗ ದಾನಗಳ ಅರಿವು ಮೂಡಿಸಬೇಕಾಗಿರುವದು ಅತ್ಯಂತ ಮುಖ್ಯ. ಓರ್ವ ವ್ಯಕ್ತಿ ನೀಡುವ ಅಂಗಾಂಗಳಿಂದ 8 ಜನರ ಜೀವ ಉಳಿಯಬಲ್ಲದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ಮೋಹನ ಗಾನ, ನರರೋಗ, ನರಶಸ್ತ್ರಚಿಕಿತ್ಸೆ, ಹೃದಯದ ಅರಿವಳಿಕೆ ತಜ್ಞವೈದ್ಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಯಶಸ್ವಿ ಹೃದಯ ಕಸಿ ಮಾಡಿದ ವ್ಯಕ್ತಿಗಳು ತಮ್ಮ ಕುಟುಂಬ ಸದಸ್ಯರೊಂದಿಗೆ ಉಪಸ್ಥಿತರಿದ್ದರು.










