ಹಾಲು, ಬಸ್ ಪ್ರಯಾಣ ದರ ಏರಿಕೆ ಜನಸಾಮಾನ್ಯರಿಗೆ ಬರೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಟೀಕೆ

ಬೈಲಹೊಂಗಲ: ಹಾಲು ಹಾಗೂ ಬಸ್ ಪ್ರಯಾಣ ದರ ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹೊರಿಸಿದೆ ಎಂದು ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಆರೋಪಿಸಿದರು.

promotions

ನಗರದ ವಿದ್ಯಾನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಾಲು ಮತ್ತು ಬಸ್ ಪ್ರಯಾಣ ದರ ಏರಿಕೆ ಸೇರಿದಂತೆ ರೈತರ ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

promotions

ಹಾಲಿನ ದರ ಏರಿಕೆಯಿಂದ ಗ್ರಾಹಕರಿಗೆ ಹೊರೆ

ರಾಜ್ಯ ಸರ್ಕಾರ ಲೀಟರ್ ಹಾಲಿಗೆ ₹8 ಹೆಚ್ಚಳ ಮಾಡುವುದಾಗಿ ತಿಳಿಸಿದ್ದರೂ, ವಿವಿಧ ಶ್ರೇಣಿಯ ಹಾಲಿನ ದರಗಳಲ್ಲಿ ಬೇರೆ ಬೇರೆ ಪ್ರಮಾಣದ ಏರಿಕೆ ಮಾಡಿದೆ. ಕೆಲವು ಉತ್ಪನ್ನಗಳ ದರವನ್ನು ಲೀಟರ್‌ಗೆ ₹12ರಿಂದ ₹13ರವರೆಗೆ ಹೆಚ್ಚಿಸುವ ಮೂಲಕ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ ಎಂದು ದೂರಿದರು.

ಹಾಲಿನ ದರ ಹೆಚ್ಚಳದ ₹8ರಲ್ಲಿ ₹7ನ್ನು ರೈತರಿಗೆ ನೀಡಲಾಗುವುದು ಹಾಗೂ ಉಳಿದ ₹1ನ್ನು ಪ್ಯಾಕಿಂಗ್, ಸಾಗಣೆ, ಇಂಧನ ಮತ್ತು ನಿರ್ವಹಣಾ ವೆಚ್ಚಗಳಿಗೆ ಬಳಸಲಾಗುವುದು ಎಂದು ಸರ್ಕಾರ ಹೇಳಿದೆ. ಆದರೆ ಈ ಲೆಕ್ಕಾಚಾರ ಟೋನ್ ಹಾಲಿನ ಒಂದು ಲೀಟರ್ ಪ್ಯಾಕೆಟ್‌ಗೆ ಮಾತ್ರ ಅನ್ವಯಿಸುತ್ತದೆ. ಈ ಹಿಂದೆ ₹46 ಇದ್ದ ಟೋನ್ ಹಾಲಿನ ದರ ಇದೀಗ ₹54ಕ್ಕೆ ಏರಿಕೆಯಾಗಿದೆ ಎಂದರು.

ಶುಭಂ ಸ್ಟ್ಯಾಂಡರ್ಡ್ ಹಾಲಿನ ಒಂದು ಲೀಟರ್ ಪ್ಯಾಕೆಟ್ ದರ ₹52ರಿಂದ ₹64ಕ್ಕೆ ಏರಿಕೆಯಾಗಿದ್ದು, ₹12 ಹೆಚ್ಚಳವಾಗಿದೆ. ಹೋಮೊಜೀನೈಸ್ಡ್ ಶುಭಂ ಹಾಲಿನ ದರ ₹53ರಿಂದ ₹66ಕ್ಕೆ ಏರಿಕೆಯಾಗಿ, ಗ್ರಾಹಕರು ಹೆಚ್ಚುವರಿಯಾಗಿ ₹13 ಪಾವತಿಸುವಂತಾಗಿದೆ. ಅರ್ಧ ಲೀಟರ್ ಮೊಸರಿನ ಪ್ಯಾಕೆಟ್ ದರವೂ ₹6 ಹೆಚ್ಚಳವಾಗಿದೆ ಎಂದು ವಿವರಿಸಿದರು.

ಬಸ್ ಪ್ರಯಾಣ ದರ ಏರಿಕೆಯಿಂದಲೂ ಜನರಿಗೆ ಸಂಕಷ್ಟ

ಹಾಲಿನ ದರ ಏರಿಕೆಯ ಹೊರೆ ಕಡಿಮೆಯಾಗುವ ಮುನ್ನವೇ ರಾಜ್ಯ ಸರ್ಕಾರ ಬಸ್ ಪ್ರಯಾಣ ದರವನ್ನೂ ಹೆಚ್ಚಿಸಿದೆ. ಶೇಕಡಾವಾರು ದರ ಏರಿಕೆ ಪ್ರಕಟಿಸುವ ಬದಲು ಸ್ಟೇಜ್‌ವಾರು ಪ್ರಯಾಣ ದರ ಹೆಚ್ಚಿಸಿರುವುದರಿಂದ ರಾಜ್ಯದ ವಿವಿಧ ಸಾರಿಗೆ ಸಂಸ್ಥೆಗಳಲ್ಲಿ ಶೇ.23ರಿಂದ ಶೇ.35ರವರೆಗೆ ದರ ಏರಿಕೆಯಾಗಿದೆ ಎಂದು ಹೇಳಿದರು.

ಕೆಎಸ್‌ಆರ್‌ಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಸರಾಸರಿ ಶೇ.23ರಷ್ಟು ಹೆಚ್ಚಳವಾಗಿದ್ದರೆ, ಬಿಎಂಟಿಸಿ ಪ್ರಯಾಣ ದರ ಗರಿಷ್ಠ ಶೇ.35ರಷ್ಟು ಏರಿಕೆಯಾಗಿದೆ. ಇದು ರಾಜ್ಯದ ಇತಿಹಾಸದಲ್ಲೇ ಗರಿಷ್ಠ ಪ್ರಮಾಣದ ದರ ಏರಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಖರೀದಿಸುವ ಮುನ್ನವೇ ಬಸ್ ಪ್ರಯಾಣ ದರ ಏರಿಕೆ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಸರ್ಕಾರ ಜನರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ವಸ್ತುಗಳು ಹಾಗೂ ಸಾರಿಗೆ ಸೇವೆಗಳ ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ರೈತರ ಬೇಡಿಕೆ ಈಡೇರಿಸಲು ಆಗ್ರಹ

ದೇಶಕ್ಕೆ ಅನ್ನ ನೀಡುವ ರೈತರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಬೀದಿಗಿಳಿದು ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿ. ರೈತರೊಂದಿಗೆ ಚೆಲ್ಲಾಟವಾಡುವುದನ್ನು ಬಿಟ್ಟು ಅವರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು.

ನ್ಯಾಯಯುತ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಪೊಲೀಸರು ಬಂಧಿಸಿರುವುದು ಖಂಡನೀಯ. ಸಮರ್ಪಕ ಮಳೆಯಿಲ್ಲದೆ ಬೆಳೆಗಳು ಒಣಗುತ್ತಿವೆ. ರೈತರು ಸಾಲ-ಶೂಲ ಮಾಡಿ ಕಬ್ಬು ಬೆಳೆದರೂ ಅದಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ. ಕೃಷಿ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರೈತರ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಇಂತಹ ಸಂದರ್ಭದಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದರು.

ರೈತರ ನ್ಯಾಯಸಮ್ಮತ ಬೇಡಿಕೆಗಳನ್ನು ಶೀಘ್ರ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಡಾ. ವಿಶ್ವನಾಥ ಪಾಟೀಲ ಎಚ್ಚರಿಸಿದರು.

ವರದಿಗಾರ : ರವಿಕಿರಣ್ ಯಾತಗೇರಿ 

Read More Articles