ಜನತೆಯ ಭರವಸೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ! ಜಗದೀಶ ಶೆಟ್ಟರ
- shivaraj bandigi
- 20 Jun 2024 , 4:09 PM
- Bailhongal
- 9191
ಬೈಲಹೊಂಗಲ : ಜಾತಿ, ಮತ ಪಂಥ ಮರೆತು ಮತ ನೀಡಿ ಜನ ನನ್ನ ಆಯ್ಕೆ ಮಾಡಿದ್ದು, ಈ ಗೆಲವು ಅವರಿಗೆ ಸಲ್ಲಬೇಕಾಗಿದ್ದು ಎಂದು ಬೆಳಗಾವಿ ಲೋಕಸಭಾ ಸಂಸದ ಜಗದೀಶ ಶೆಟ್ಟರ ಹೇಳಿದರು.

ಅವರು ಪಟ್ಟಣದ ವಿಜಯ ಸೋಶಿಯಲ್ ಕ್ಲಬದಲ್ಲಿ ಆಯೋಜಿಸಿದ್ದ, ಸತತ ಮೂರನೇಯ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ ಅವರಿಗೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ನೂತನ ಸದಸ್ಯರಾಗಿ ಆಯ್ಕೆಯಾದ ಜಗದೀಶ ಶೆಟ್ಟರ ಅವರಿಗೆ ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿ, ಜಿಲ್ಲೆಯಲ್ಲಿ ನಿರುದ್ಯೋಗ ಯುವಕರಿಗೆ ಉದ್ಯೋಗಗಳನ್ನು ಕಲ್ಪಿಸುವ ಕೆಲಸದ ಜೊತೆಗೆ ಬಹುದಿನಗಳಿಂದ ಈ ಭಾಗದ ಜನರ ಬೇಡಿಕೆಯಾದ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಚುನಾವಣೆಯಲ್ಲಿ ಹಣ ಹಂಚಿ ಮತ ಪಡೆಯಬಹುದು ಎಂದುಕೊಂಡವರಿಗೆ ಜನ ತಕ್ಕ ಉತ್ತರ ನೀಡಿದ್ದಾರೆ. ಈ ಗೆಲವು ನಮ್ಮ ಕಾರ್ಯಕರ್ತರು, ಬೆಳಗಾವಿಯ ಜನತೆಗೆ ಸಮರ್ಪಿಸುತ್ತೇನೆ. ನನ್ನ ಗೆಲುವಿಗೆ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ದಿ. ಸುರೇಶ ಅಂಗಡಿಯವರ ರೇಲ್ವೆ ಯೋಜನೆ ನೆನೆಗುದಿಗೆ ಬಿದ್ದಿದ್ದು ಅದರ ಕುರಿತು ಜಿಲ್ಲಾಧಿಕಾರಿಗಳ ಸಭೆ ಕರೆದು ಚರ್ಚಿಸಿ ಕ್ರಮ ಜರುಗಿಸಲಾಗುವದು. ಜಿಲ್ಲೆಯಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸಿ ಮಾದರಿ ಲೋಕಸಭಾ ಕ್ಷೇತ್ರ ಮಾಡಲು ಸಶ್ರಮಿಸುವೆ ಎಂದರು.
ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಮಾತನಾಡಿ, ಜಗದೀಶ್ ಶೆಟ್ಟರ್ ಅವರ ಆಡಳಿತದಲ್ಲಿ ಜಿಲ್ಲೆ ಹೆಚ್ಚಿನ ಅಭಿವೃದ್ಧಿ ಹೊಂದಲಿದೆ ಎಂದರು.
ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಮಾತನಾಡಿದರು.
ಮಂಡಲ ಬಿಜೆಪಿ ಹಾಗೂ ಹಲವಾರು ಸಂಘ ಸಂಸ್ಥೆಗಳು ಜಗದೀಶ್ ಶೆಟ್ಟರ್ ಅವರನ್ನು ಸನ್ಮಾನಿಸಿದರು.
ಜಗದೀಶ ಬೂದಿಹಾಳ ನಿರೂಪಿಸಿದರು, ಸಂತೋಷ ಹಡಪದ ಸ್ವಾಗತಿಸಿ, ವಂದಿಸಿದರು.
ಪಕ್ಷದ ಮುಖಂಡರು, ಕಾರ್ಯಕರ್ತರು ಸಾರ್ವಜನಿಕರು ಇದ್ದರು.
ವರದಿ : ರವಿಕಿರಣ್ ಯಾತಗೇರಿ










