ಲಿಂಗಾಯತರು ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ: ಟೋಪಣ್ಣವರ
- Shivaraj Bandigi
- 15 Jan 2024 , 5:50 AM
- Belagavi
- 319
ಬೆಳಗಾವಿ : ಬೆಳಗಾವಿ ನಗರದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಲಿಂಗಾಯತರ ಜನಸಂಖ್ಯೆ ಇದೆ. ಬೆಳಗಾವಿ ಉತ್ತರ ಹಾಗೂ ದಕ್ಷಿಣ ಎರಡೂ ಕ್ಷೇತ್ರದಲ್ಲಿ ನಿರ್ಣಾಯಕರಾಗಿದ್ದೇವೆ. ಶಂಕರಗೌಡ ಪಾಟೀಲ ಅವರನ್ನು ಹೊರತು ಪಡಿಸಿದರೆ ಕಾಂಗ್ರೆಸ್ ಹಾಗೂ ಬಿಜೆಪಿಯವರು ಮತಬ್ಯಾಂಕ್ ಗಾಗಿ ಉಪಯೋಗ ಮಾಡಿಕೊಂಡು ಲಿಂಗಾಯತರಿಗೆ ನ್ಯಾಯ ಕೊಟ್ಟಿಲ್ಲ. ಒಂದು ರುಟೇಷನ್ ಪದ್ಧತಿಯಲ್ಲಿ ಟಿಕೆಟ್ ಹಂಚಿಕೆ ಮಾಡಿದರೆ ಎಲ್ಲ ಸಮಾಜಕ್ಕೆ ನ್ಯಾಯ ಸಿಗುತ್ತದೆ ಎಂದು ಲಿಂಗಾಯತ ಮುಖಂಡ ರಾಜಕುಮಾರ ಟೋಪಣ್ಣವರ ತಿಳಿಸಿದ್ದಾರೆ.

ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಎರಡೂ ರಾಷ್ಟ್ರೀಯ ಪಕ್ಷದವರು ಒಂದೇ ಸಮಾಜದವರಿಗೆ ಟಿಕೆಟ್ ನೀಡುತ್ತಾರೆ. ದಕ್ಷಿಣದಲ್ಲಿಯೂ ಸಹ ಒಂದೇ ಸಮುದಾಯದವರಿಗೆ ಟಿಕೆಟ್ ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಬೆಳಗಾವಿ ನಗರದಲ್ಲಿ ಆಳಿದ ದಡ್ಡರು ಹಾಗೂ ದರೋಡೆಕೋರು ನಗರವನ್ನು ಲೂಟಿ ಮಾಡಿದ್ದಾರೆ. ಈ ಎರಡೂ ಕ್ಷೇತ್ರದಲ್ಲಿ ಲಿಂಗಾಯತರನ್ನು ಕಡೆಗಣಿಸುತ್ತಿದ್ದಾರೆ. ಲಿಂಗಾಯತರಲ್ಲಿ ಸಾಕಷ್ಟು ಜನ ಶಿಕ್ಷಿತರಿದ್ದಾರೆ. ಅಭಿವೃದ್ಧಿ ಯೋಜನೆ ಮಾಡುತ್ತಾರೆ. ಆದರೆ ಒಂದೇ ಸಮುದಾಯದವರಿಗೆ ಕೊಡುವುದು ಎಷ್ಟು ಸರಿ. ಕೇವಲ ಒಬ್ಬರಿಗೆ ಮಾತ್ರ ನೀಡುವುದಲ್ಲ ಎಲ್ಲ ಸಮುದಾಯಕ್ಕೂ ರಾಷ್ಟ್ರೀಯ ಪಕ್ಷಗಳು ಟಿಕೆಟ್ ನೀಡಿ ಅವಕಾಶ ನೀಡಬೇಕು ಎಂದರು.
ಕೆಲವು ಉತ್ಸಾಹಿ ಯುವಕರು ರಾಷ್ಟ್ರೀಯ ಪಕ್ಷದ ಕಾರ್ಯಕರ್ತರು ಆಮ್ ಆದ್ಮಿ ಪಕ್ಷಕ್ಕೆ ಯಾಕೆ ಸೇರಿಕೊಂಡಿರಿ ಎಂದು ಪ್ರಶ್ನೆ ಮಾಡುತ್ತಾರೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಎಷ್ಟು ಜನ ಲಿಂಗಾಯತರಿಗೆ ಅವಕಾಶ ನೀಡಿದೆ. ಕೇವಲ ನಮಗೆ ಮತಬ್ಯಾಂಕ್ ಗಾಗಿ ಉಪಯೋಗಿಸುವ ನಾಯಕರ ನಡೆ ಸರಿ ಇದೆಯೇ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಲಿ. ಅಲ್ಲದೆ ಬಿಜೆಪಿಯಲ್ಲಿದ್ದಾಗಲೂ ಸಹ ಲಿಂಗಾಯತರಿಗೆ ಅನ್ಯಾಯವಾದಾಗ ಧ್ವನಿ ಎತ್ತಿದ್ದೇನೆ. ಬಿಜೆಪಿಯಲ್ಲಿ ಬೆಳೆಯಲು ಸಾಧ್ಯವಿಲ್ಲ ಎನ್ನುವ ಉದ್ದೇಶದಿಂದ ನಾನು ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಿದ್ದೇನೆ ಎಂದರು.

ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕೆಂದು ಎಲ್ಲ ವೀರಶೈವ ಲಿಂಗಾಯತ ಸಮುದಾಯದವರು ಕನಸು ಕಂಡಿದ್ದರು. ಆದರೆ ಬೆಳಗಾವಿ ಉತ್ತರ ಹಾಗೂ ದಕ್ಷಿಣ ಮತಕ್ಷೇತ್ರದಲ್ಲಿ ಲಿಂಗಾಯತ ನಾಯಕರು ಬೆಳೆಯಲು ಅವಕಾಶ ನೀಡಿದ್ದಾರೆಯೇ ಎನ್ನುವುದನ್ನು ಪ್ರಶ್ನೆ ಮಾಡಿಕೊಳ್ಳಿ ಎಂದರು.
ಬೆಳಗಾವಿ ಉತ್ತರ ಹಾಗೂ ದಕ್ಷಿಣ ಮತಕ್ಷೇತ್ರದಲ್ಲಿ ಎಲ್ಲ ಸಮುದಾಯದವರಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಒಂದೇ ಸಮುದಾಯವರಿಗೆ ಟಿಕೆಟ್ ನೀಡುತ್ತಾರೆ. ದಕ್ಷಿಣದಲ್ಲಿ ಬ್ರಾಹ್ಮಣ ಮರಾಠಾ, ನೇಕಾರರು ಇದ್ದಾರೆ. ಅದರಂತೆ ಉತ್ತರ ಮತಕ್ಷೇತ್ರದಲ್ಲಿ ಲಿಂಗಾಯತ ಮತದಾರರು ಹೆಚ್ಚಿದ್ದಾರೆ. ಅವರಿಗೆ ಅವಕಾಶ ಕೊಡಬೇಕು. ಒಂದೇ ಸಮುದಾಯದವರಿಗೆ ಮೂರ್ನಾಲ್ಕು ಬಾರಿ ಟಿಕೆಟ್ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಈ ಬಾರಿ ಲಿಂಗಾಯತ ಸಮಾಜದ ನಾಯಕರಿಗೆ ರಾಷ್ಟ್ರೀಯ ಪಕ್ಷಗಳು ಟಿಕೆಟ್ ನೀಡಿದರೆ ಅವರಿಗೆ ಬೆಂಬಲ ಕೊಡುವುದಾಗಿ ಟೋಪಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










