ರೈತರಿಗೆ ಅಸಮರ್ಪಕ ವಿದ್ಯುತ್ ಪೂರೈಕೆ 21ರಂದು ಹೆಸ್ಕಾಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಡಾ.ವಿಶ್ವನಾಥ ಪಾಟೀಲ
- Shivaraj Bandigi
- 15 Jan 2024 , 12:49 AM
- Belagavi
- 404
ಬೈಲಹೊಂಗಲ : ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಶನಿವಾರ ಅ.21 ರಂದು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದೆಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.

ಅವರು ಪಟ್ಟಣದ ವಿದ್ಯಾನಗರದ ಗೃಹಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಮಾತನಾಡಿ, ರಾಜ್ಯದ ರೈತರ ಸಂಕಷ್ಟದ ಬಗ್ಗೆ ಕಾಂಗ್ರೆಸ್ ಸರಕಾರಕ್ಕೆ ಕಾಳಜಿ ಇಲ್ಲ. ಬರ ಮತ್ತು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯದಿಂದ ರೈತ ಸಮುದಾಯ ತತ್ತರಿಸಿದೆ. ಹೆಸ್ಕಾಂ ಅಧಿಕಾರಿಗಳು ರೈತರಿಗೆ ಹಗಲಿನಲ್ಲಿನ ಏಳು ಗಂಟೆ ತ್ರೀಫೇಸ್ ಮತ್ತು ರಾತ್ರಿ ೧೨ ಗಂಟೆ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಮಾಡುವವರಿಗೆ ಅವರನ್ನು ವಿರಮಿಸಲು ಬಿಡುವುದಿಲ್ಲವೆಂದು ಸರಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

ಹಗಲು ೩ ಗಂಟೆ ತ್ರೀಫೇಸು ವಿದ್ಯುತ್‌ನಿಂದ ಬೆಳೆಗಳ ಸಂರಕ್ಷಣೆ ಕಷ್ಟವಾಗುತ್ತಿದೆ. ರಾತ್ರಿ ಸಿಂಗಲ್ ಫೇಸ್ ವಿದ್ಯುತ್ ಸರಿಯಾಗಿ ಬರುತ್ತಿಲ್ಲ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗತೊಡಗಿದೆ. ಈ ನಿಟ್ಟಿನಲ್ಲಿ ಡಾ.ವಿಶ್ವನಾಥ ಪಾಟೀಲ ಅಭಿಮಾನಿ ಬಳಗದಿಂದ ಹಾಗೂ ವಿವಿಧ ರೈತ ಸಂಘಟನೆಗಳ ಆಶ್ರಯದಲ್ಲಿ ಶನಿವಾರ ಅ.21 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ರಾಜ್ಯದ ಜನತೆಯ, ರೈತರ ಹಿತ ಕಾಪಾಡುವಲ್ಲಿ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದ ಜನರಿಗೆ ಕಾಂಗ್ರೆಸ್ ಸರಕಾರ ಸುಳ್ಳು ಭರವಸೆಗಳನ್ನು ನೀಡಿ ದಾರಿ ತಪ್ಪಿಸುತ್ತಿದೆ. ಬರಗಾಲದಂತಹ ಪರಿಸ್ಥಿತಿಯಲ್ಲಿ ರೈತರ ಹಿತ ಕಾಪಾಡುವುದು ಬಿಟ್ಟು, ರೈತರ ಜೀವನದ ಜೊತೆ ಚೆಲ್ಲಾಟ ಆಡುತ್ತಿದೆ ಎಂದು ಆರೋಪಿಸಿದರು. ದೇಶಕ್ಕೆ ಅನ್ನ ನೀಡುವ ರೈತನ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸುಳ್ಳು ಗ್ಯಾರೆಂಟಿಗಳೊಂದಿಗೆ ರಾಜ್ಯವನ್ನು ಲೂಟಿ ಮಾಡುತ್ತಿದೆ.
ಸರಕಾರದ ನಿರ್ಲಕ್ಷ್ಯವೇ ರೈತರ ಆತ್ಮಹತ್ಯೆಗೆ ಕಾರಣವಾಗಿದೆ
ಮುಖ್ಯಮಂತ್ರಿಗಳಿಗೆ, ಸಚಿವರುಗಳಿಗೆ, ಶಾಸಕರುಗಳಿಗೆ ರೈತರ ಕಷ್ಟ ಅರ್ಥ ಮಾಡಿಕೊಳ್ಳುವದಕ್ಕಿಂತ ಹಣ ಮಾಡುವ ಚಿಂತೆ ಇದೆ. ಶನಿವಾರ ಅ.21 ರಂದು ಪಟ್ಟಣದ ಚನ್ನಮ್ಮಾ ವೃತ್ತದಿಂದ ಸಾವಿರಾರು ರೈತರೊಂದಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಬಸ್ ನಿಲ್ದಾಣದ ಮಾರ್ಗವಾಗಿ ಕೆಇಬಿ ಮುತ್ತಿಗೆ ಹಾಕಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ರೈತ ಬಾಂಧವರು ಆಗಮಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕೆಂದರು.
ಹಿರಿಯ ಮುಖಂಡ ಮಡಿವಾಳಪ್ಪ ಹೋಟಿ, ರಾಜು ಕುಡಸೋಮಣ್ಣವರ ಮಾತನಾಡಿದರು.
ಆಯ್.ಎಲ್.ಪಾಟೀಲ, ಮಡಿವಾಳಪ್ಪ ಹೋಟಿ, ರಾಜು ಕುಡಸೋಮಣ್ಣವರ, ಪುರಸಭೆ ಸದಸ್ಯರಾದ ಶಿವಾನಂದ ಕೋಲಕಾರ, ಸುಧೀರ ವಾಲಿ, ಮುಖಂಡರಾದ ವಿಜಯ ಪತ್ತಾರ, ರಿತೇಶ ಪಾಟೀಲ, ಆನಂದ ಮೂಗಿ, ಮುರಗೇಶ ಗುಂಡ್ಲೂರ, ಮಹೇಶ ಹರಕುಣಿ, ಬಾಳನಗೌಡ ಪಾಟೀಲ, ಅಶೋಕ ಗುಂಡ್ಲೂರ, ಚಂದನ ಕೌಜಲಗಿ, ಬಸವರಾಜ ನೇಸರಗಿ, ಮಡಿವಾಳಪ್ಪ ಚಿಕ್ಕೊಪ್ಪ, ಶ್ರೀಶೈಲ ಹಂಪಿಹೊಳಿ, ಗಂಗಪ್ಪ ಗುಗ್ಗರಿ, ರುದ್ರಪ್ಪ ದೇಗ್ಗಾಂವಿ ಮುಂತಾದವರು ಇದ್ದರು.










