ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡುವಂತೆ ಒತ್ತಾಯ
- shivaraj bandigi
- 14 Jan 2024 , 2:18 PM
- Belagavi
- 272
ಬೆಳಗಾವಿ :

ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಅತ್ಯಂತ ಕಡಿಮೆ ಗೌರವ ಭತ್ಯೆ ಪಡೆದು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಸರಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಸೇವಾ ಕಾಯಂಮಾತಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗುರುವಾರ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಅತಿಥಿ ಉಪನ್ಯಾಸಕರನ್ನು ಸರಕಾರ ಕಾಯಂಮಾತಿ ಮಾಡಿ ಸೇವಾ ವಿಲೀನಗೊಳಿಸುವಾಗ ಕಳೆದ 2009 ಜುಲೈ 11 ರ ಒಳಗೆ ಎಂಪಿಎಲ್ ಪದವಿ ಪಡೆದವರಿಗೆ ಸಕ್ರಮಾತಿ ಸಂದರ್ಭದಲ್ಲಿ ಪರಿಗಣಿಸಬೇಕು. ಈ ಹಿಂದೆ ಸರಕಾರಿ ಕಾಲೇಜುಗಳಲ್ಲಿ ಹಂಗಾಮಿಯಾಗಿ ಕರ್ತವ್ಯ ನಿರ್ವಹಿಸಿದ ಪದನಾಮ ಬದಲಾದ ಸ್ಥಳೀಯ ಅಭ್ಯರ್ಥಿ, ಸ್ಟಾಪ್, ಗ್ಯಾಪ್, ಗುತ್ತಿಗೆ ಆಧಾರಿತ ಅರೆ ಕಾಲಿಕ ಉಪನ್ಯಾಸಕರನ್ನು ಸರಕಾರ ಮಾನವೀಯತೆ ಆಧಾರದ ಮೇಲೆ ಸೂಕ್ತ ಕಾಯ್ದೆ ತಿದ್ದುಪಡಿ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಜೆಓಸಿ ವಿಭಾಗದಲ್ಲಿ ಸೇವೆ ಸಲ್ಲಿಸಿದವರನ್ನು ಹೇಗೆ ಸೇವಾ ವಿಲೀನ ಮಾಡಲಾಗಿದೆಯೋ ಅದೇ ಮಾದರಿಯಲ್ಲಿ ಅತಿಥಿ ಉಪನ್ಯಾಸಕರ ಸೇವಾ ವಿಲೀನ ಮಾಡಿಕೊಳ್ಳಬೇಕು. ಪೌರಾಡಳಿತ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ದಿನಗೂಲಿ ನೌಕರರನ್ನು ಹಾಗೂ ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡಿ ಸೇವಾ ವಿಲೀನಗೊಳಿಸಲಾಗಿದೆ. ಕೃಷಿ ಇಲಾಖೆಯಲ್ಲಿ ಆತ್ಮ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರನ್ನು ಹಿಂದಿನ ಸರಕಾರ ಖಾಯಂ ಮಾಡಲು ಸಮ್ಮತಿ ಸೂಚಿಸಿದೆ. ಆದರೆ ನಮಗೆ ಮಾತ್ರ ಮಾಡಿಲ್ಲ ಎಂದು ಮನವಿಯಲ್ಲಿ ಪ್ರತಿಭಟನಾಕಾರರು ತಿಳಿಸಿದ್ದಾರೆ.
ಡಾ. ಅ.ಬ.ಇಟಗಿ, ಪ್ರಕಾಶ ಮಬ್ಬನವರ, ಇರ್ಫಾನ ಶಿಲೇದಾರ, ನೀಲಕಂಠ ಭೊಮನ್ನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.










