ವಿದ್ಯಾರ್ಥಿಗಳಿಗೆ ಬದುಕಿನ ಪಾಠ ಕಲಿಸಿದ ಲಕ್ಷ್ಮೀ ಹೆಬ್ಬಾಳಕರ
- 12 Jan 2024 , 8:29 PM
- Belagavi
- 243
ಬೆಳಗಾವಿ: ಸ್ವಾತಂತ್ರ್ಯಾ ನಂತರದ 75 ವರ್ಷಗಳಲ್ಲಿ ಆಗಿರುವ ಬದಲಾವಣೆಗಳು ನಾವು ಹೆಮ್ಮೆ ಪಡುವಂಥ ವಿಚಾರ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು. ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೆ ಕೆ ಕೊಪ್ಪ ಗ್ರಾಮದ ಶ್ರೀಮತಿ ಸೋಮವ್ವ ಚ. ಅಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 2021-22ನೇ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಕ್ರೀಡಾ, ಎನ್ ಎಸ್ ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ಎನ್ ಸಿ ಸಿ ಮತ್ತು ರೆಡ್ ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಮತ್ತು ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

75 ವರ್ಷಗಳ ಹಿಂದೆ ಈಗಿನಂತೆ ಧರಿಸಲು ಬಟ್ಟೆ ಇರಲಿಲ್ಲ, ಉಣ್ಣಲು ಊಟ ಇರಲಿಲ್ಲ. ಸಾಂಕ್ರಾಮಿಕಳು ತಾಂಡವಾಡುತ್ತಿದ್ದ ಸಮಯ ಅದು. ಅಂದಿನ ಪರಿಸ್ಥಿತಿ ಅವಲೋಕಿಸಿದರೆ ಇಂದಿನ ಸ್ಥಿತಿಗತಿಗಳ ಬಗ್ಗೆ ನಾವು ಹೆಮ್ಮೆ ಪಡಬೇಕು ಎಂದರು. ಅನಕ್ಷರಸ್ಥ ತಂದೆ- ತಾಯಿ ಇಂದು ಹೊಲದಲ್ಲಿ ದಿನವಿಡೀ ದುಡಿದು ಬಾಲಕ- ಬಾಲಕಿಯರು ಸೇರಿ ಶಿಕ್ಷಣ ಪಡೆಯುವಂಥ ವಾತಾವರಣದಲ್ಲಿ ಕಲಿಕೆಗೆ ಅವಕಾಶ ಕಲ್ಪಿಸಿಕೊಟ್ಟಿರುವುದು ಮಕ್ಕಳು ಕಲಿತು ನಾಳೆ ಅವರ ಪಾಲನೆ ಮಾಡಲಿ ಎಂಬ ಕಾರಣಕ್ಕಲ್ಲ. ಬದಲಾಗಿ ತಾವು ಪಟ್ಟ ಕಷ್ಟ ಮಕ್ಕಳಿಗೆ ಬರಬಾರದು, ಮಕ್ಕಳ ಜೀವನ ಸುಮಧುರವಾಗಿರಬೇಕು ಎಂಬ ಕಾರಣಕ್ಕೆ ಎಂದರು.

ಸರಕಾರ ಎಂದು ಶಿಕ್ಷಣಕ್ಕೆ ನಾನಾ ಸೌಲಭ್ಯಗಳನ್ನು ಒದಗಿಸುತ್ತಿದ್ದು ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದು ಜೀವನದಲ್ಲಿ ಏಳಿಗೆ ಹೊಂದಬೇಕು ಎಂದು ಕಿವಿಮಾತು ಹೇಳಿದರು. ಜೀವನದಲ್ಲಿ ಶಿಸ್ತು, ಸಂಯಮ, ಬದ್ಧತೆಗಳು ಇಲ್ಲದಿದ್ದರೆ ಏನೂ ಪ್ರಯೋಜನವಿಲ್ಲ. ನಮ್ಮ ಬೆಳವಣಿಗೆಗಳು 10 ವರ್ಷದ ನಂತರ ನಾವು ಹಿಂದಿರುಗಿ ನೋಡಿದಾಗ ಹೆಮ್ಮೆ ಪಡುವಂತಿರಬೇಕು. ಇತರರನ್ನು ಮೆಚ್ಚಿಸಲು ಏನನ್ನಾದರೂ ಮಾಡುವ ಬದಲು ನಮ್ಮ ಬಗ್ಗೆ ನಮಗೆ ಹೆಮ್ಮೆ ಹುಟ್ಟುವಂತೆ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಿರ್ಮಲಾ ಬಟ್ಟಲ, ಎಂ.ಎಸ್. ಮಾಳಗೆ, ಸುರೇಶ ಅಳಗುಂಡಿ, ಎಂ.ಎ. ಸವದತ್ತಿ, ಡಾ. ಮೌನೇಶ್ವರ ಬಡಿಗೇರ, ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸರ್ವಸದಸ್ಯರು, ಗ್ರಾಮಸ್ಥರು, ಕಾಲೇಜಿನ ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.










