ಬೆಳಗಾವಿಯಲ್ಲಿ ಸಪ್ತ ನದಿಗಳ ಕಲರವ ಜನಜೀವನ ಅಸ್ತವ್ಯಸ್ತ
- shivaraj B
- 27 Jul 2024 , 10:57 PM
- Bailhongal
- 7048
ಬೈಲಹೊಂಗಲ : ಹುಯ್ಯೋ ಮಳೆರಾಯ ಎಂದಾಗ ಹುಯ್ಯಲಿಲ್ಲ, ಸಾಕು ಬಿಡೋ ಎಂದಾಗ ಬಿಡದ ಮಳೆಗೆ ಜಿಲ್ಲೆಯ ಜನರ ಜೀವನ ದುಸ್ತರವಾಗಿದೆ.

ಜಿಲ್ಲೆಯ ಎಲ್ಲ ನದಿಗಳು, ಹಳ್ಳ ಕೊಳಗಳು ತುಂಬಿ ತುಳಕಾಡಿ ಜನರು ಜೀವನ ಮಾಡದಂತೆ ಮಾಡಿವೆ. ಬಹುತೇಕ ಸೇತುವೆಗಳು ಮುಳುಗಿದ್ದು ಸಂಚಾರ ವ್ಯವಸ್ಥೆ ಸಂಪೂರ್ಣ ಸ್ತಬ್ಧವಾಗಿದೆ.

ನದಿತೀರದ ಜನರು ಮನೆಮಠ ಕಳೆದುಕೊಂಡು ಕಾಳಜಿ ಕೇಂದ್ರದತ್ತ ಮುಖ ಮಾಡುತ್ತಿದ್ದಾರೆ. ಜನ,ಜಾನುವಾರುಗಳ ಬದುಕು ಮಹಾಮಳೆಯಲ್ಲಿ ಕೊಚ್ಚಿ ಹೋಗುವಂತೆ ಮಾಡಿದೆ ಈ ಮಳೆ.
ಜಿಲ್ಲೆಯ ಎಲ್ಲ ಜಲಾಶಯಗಳಯ ಭರ್ತಿಯಾಗಿದ್ದು ಕಣ್ಣು ಹಾಸಿದತ್ತ ನೀರೇ ನೀರು. ಹೊಲ,ಗದ್ದೆಗಳಿಗೆ ನುಗ್ಗಿದ ಮಳೆರಾಯನ ನೀರು ಕುಟುಂಬಗಳು ವಾಸವಿರುವ ಮನೆಯನ್ನೂ ಕೂಡಾಬಿಟ್ಟಿಲ್ಲ. ಹಲವು ಕಡೆ ಸಾವು, ನೋವುಗಳು ಸಂಭವಿಸಿದರೂ ಕೂಡ ತೃಪ್ತಿಯಾಗದ ವರುಣದೇವ ಇನ್ನೂ ತನ್ನ ಆರ್ಭಟ ಮುಂದುವರೆಸಿದ್ದಾನೆ.
ಮೂರ್ನಾಲ್ಕು ಜಿಲ್ಲಾ ಕೇಂದ್ರಗಳನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಸೇತುವೆಗಳು, ರಾಷ್ಟ್ರೀಯ ಹೆದ್ದಾರಿಗಳ ಮೇಲೆ ನಿರಂತರವಾಗಿ ಹರಿಯುತ್ತಿರುವ ನೀರಿನಿಂದ ಜನರು ಪರಸ್ಥಳಗಳಿಗೆ ತೆರಳದೆ ಮನೆಯಲ್ಲೇ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಾತಾವರಣಕ್ಕೆ ಹೊಂದಿಕೊಳ್ಳುವ ಜಾಯಮಾನ ಮನುಜ ಕುಲಕ್ಕೆ ಇದ್ದರೂ ಸಹ ಜಾನುವಾರುಗಳ ಪರಿಸ್ಥಿತಿ ಕೇಳೂವವರಾರು ಎಂಬಂತಾಗಿದೆ ಇಂದಿನ ಸ್ಥಿತಿ.
ವರದಿ : ರವಿಕಿರಣ್ ಯಾತಗೇರಿ










