ಜೀವನ ಬೆಳಗಲು ಕಣ್ಣು ಅತೀ ಮುಖ್ಯ: ಮಹಾಂತ ಶೆಟ್ಟಿ
- 15 Jan 2024 , 12:22 AM
- Belagavi
- 214
ಬೆಳಗಾವಿ: ಅಂಧರ ಬಾಳಿಗೆ ಬೆಳಕಾಗುವ ಕಣ್ಣುಗಳನ್ನು ಮರಣಾನಂತರ ಸುಡುವದಾಗಲೀ ಅಥವಾ ಮಣ್ಣಿನಲ್ಲಿ ಉಳುವದಾಗಲೀ ಮಾಡದೇ ಅವುಗಳನ್ನು ದಾನ ಮಾಡಬೇಕು. ಹಲವಾರು ಜನರು ವಿವಿಧ ಅಂಗಾಂಗಗಳ ಕಸಿಗಾಗಿ ಕಾಯ್ದು ಕುಳಿತಿದ್ದಾರೆ. ಮಾನವನ ಅಂಗಾಂಗಗಳ ಅವಶ್ಯಕತೆ ಭಾರತದಲ್ಲಿ ಬಹಳಷ್ಟಿದೆ. ಅದರಲ್ಲೂ ಮುಖ್ಯವಾಗಿ ಜೀವನ ಬೆಳಗಲು ಕಣ್ಣು ಅತೀ ಮುಖ್ಯ ಎಂದು ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚರ‍್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ ಹೇಳಿದರು.

ಕಾಹೆರನ ಜೆಎನ್ ವೈದ್ಯಕೀಯ ಮಹಾವಿದ್ಯಾಲಯ, ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ನೇತ್ರದಾನ ಜಾಗೃತಿ ಸಮಾರಮಭವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಇದರ ಜಾಗೃತಿ ಅತ್ಯಂತ ಕಡಿಮೆ. ಭಾರತದಲ್ಲಿ ಸುಮಾರು 12 ಮಿಲಿಯನ್ ಅಂಧರಿದ್ದು, ಅವರಲ್ಲಿ ಶೇ. 60ರಷ್ಟು ಮಕ್ಕಳಿದ್ದಾರೆ. ಪ್ರತಿ ವರ್ಷ 30 ಸಾವಿರಕ್ಕೂ ಅಧಿಕ ಜನ ಹೊಸದಾಗಿ ಸೇರ್ಪಡೆಗೊಳ್ಳುತ್ತಿದ್ದಾರೆ. ಕೇವಲ 1 ಮಿಲಿಯನ್ ಜನ ಮಾತ್ರ ನೇತ್ರದಾನ ಮಾಡುತ್ತಿದ್ದಾರೆ. ಅದು ಭಾರತದಲ್ಲಿ ವರ್ಷಕ್ಕೆ ಕೇವಲ 8 ಸಾವಿರ ಜನಕ್ಕೆ ಮಾತ್ರ ಕಣ್ಣುಗುಡ್ಡೆ ಕಸಿ ಮಾಡಲಾಗುತ್ತಿದೆ.

ಆದ್ದರಿಂದ ಎಲ್ಲರ ಬಾಳಿಗೆ ಬೆಳಕಾಗಲು ಕಣ್ಣುಗಳನ್ನು ದಾನ ಮಾಡಿ ಇಬ್ಬರ ಅಂಧರಿಗೆ ಬೆಳಕು ನೀಡುವಂತೆ ಮನವಿ ಮಾಡಿಕೊಂಡಿದರು.
ಡಾ. ಪ್ರೀತಿ ಕೋರೆ ಅವರು ಮಾತನಾಡಿ, ನೇತ್ರದಾನದ ಕುರಿತು ಸಾರ್ವಜನಿಕರಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಪರಿಣಾಮಕಾರಿಯಾದ ಜಾಗೃತಿಯನ್ನು ಮೂಡಿಸಬೇಕು. ಕೋವಿಡ್ ನಂತರ ಅಂಗಾಂಗ ದಾನ ನಿಂತು ಹೋಗಿದೆ. ಆದರೆ ಈಗ ನಿಧಾನವಾಗಿ ಹೆಚ್ಚಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಕೇವಲ 18359 ಕಣ್ಣುಗುಡ್ಡೆಗಳನ್ನು ಮಾತ್ರ ಸಂಗ್ರಹಿಸಲಾಗಿದೆ. ಇದು ನಿರಂತರವಾಗಿ ನಡೆಯಬೇಕು.
ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಎಲ್ಲರೂ ಕೈ ಜೋಡಿಸಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಡಾ. ಶಿವಾನಂದ ಬುಬನಾಳೆ ಮಾತನಾಡಿ, ಕೇವಲ ಒಂದೇ ವಾರದಲ್ಲಿ ಸುಮಾರು 32 ಜನರು ತಮ್ಮ ಕಣ್ಣುಗಳನ್ನು ದಾನ ಮಾಡಲು ಪ್ರತಿಜ್ಞೆ ಮಾಡಿದ್ದಾರೆ ಎಂದು ತಿಳಿಸಿದರು. ಡಾ ಎಸ್ ಬಿ ಪಾಟೀಲ, ಡಾ. ಭಾಗ್ಯಜ್ಯೋತಿ, ಡಾ ಸ್ಮಿತಾ, ಡಾ. ಅರವಿಂದ ತೆನಗಿ, ಡಾ. ಚೇತನಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.










