ಬೆಳಗಾವಿ ಜಿಲ್ಲಾ ವಿಭಜನೆ ಜೇನು ಗೂಡಿಗೆ ಕೈ ಹಾಕುತ್ತಿದ್ದಾರೆ ಸಚಿವೆ ಹೆಬ್ಬಾಳಕರ
- shivaraj B
- 29 Sep 2024 , 11:48 AM
- Belagavi
- 1962
ಬೆಳಗಾವಿ : ಜಿಲ್ಲೆಯ ವಿಭಜನೆಗಾಗಿ 18 ಶಾಸಕರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವದು ಜಿಲ್ಲೆಯಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು, ಇದಕ್ಕೆ ಜನರಿಂದ ತೀವ್ರ ವಿರೋಧವು ವ್ಯಕ್ತವಾಗುತ್ತಿದೆ.

ಬೆಳಗಾವಿ ಜಿಲ್ಲೆಯನ್ನು ವಿಭಜನೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ನೇತೃತ್ವದಲ್ಲಿ 18 ಶಾಸಕರು ಸಹಿ ಹಾಕಿದ ಈ ಮನವಿ, ಬೆಳಗಾವಿಯನ್ನು ವಿಭಜನೆ ಮಾಡುವಂತೆ ಒತ್ತಾಯಿಸಿದೆ. ಆದರೆ, ಈ ನಿರ್ಧಾರಕ್ಕೆ ಜಿಲ್ಲೆಯ ಜನತೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಂವಹನ ಮಾಧ್ಯಮ ಮತ್ತು ಇತರೆ ವೇದಿಕೆಗಳಲ್ಲಿ “ಬೆಳಗಾವಿಯನ್ನು ರಾಜಕೀಯ ಲಾಭಕ್ಕಾಗಿ ಬಳಸುವುದು ನಮಗೆ ಒಪ್ಪಂದವಲ್ಲ. ಬೆಳಗಾವಿ ಹಾಗೂ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿ, ರಾಜಕೀಯ ಉದ್ದೇಶಗಳಿಗಾಗಿ ಜಿಲ್ಲೆಯನ್ನು ವಿಭಜಿಸುವುದು ಸರಿಯಲ್ಲ.” ಎಂದು ಚರ್ಚೆ ಮಾಡುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಜನರು “ಅಖಂಡ ಬೆಳಗಾವಿ”ಯ ಪರವಾಗಿ ನಿಂತು, “ಬೆಳಗಾವಿಯನ್ನು ವಿಭಜಿಸುವ ಬದಲು, ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿ. ಬೆಂಗಳೂರು ನಗರಕ್ಕೆ ಮಾತ್ರ ಸರ್ಕಾರದ ಗಮನ ಹರಿಸುತ್ತಿರುವುದು ಸರಿಯಲ್ಲ. ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೂ ಸಮಾನ ಆದ್ಯತೆ ನೀಡಬೇಕು” ಎಂದು ಒತ್ತಾಯಿಸುತ್ತಿದ್ದಾರೆ.
“ಬೆಳಗಾವಿಯ ಬಗ್ಗೆ ನಿರ್ಲಕ್ಷ್ಯ ಭಾವನೆ ಮುಂದುವರೆದರೆ, ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕೆಂಬುದು ಜನರ ಬೇಡಿಕೆ. ಇದು ಮುಂದುವರಿದರೆ, ರಾಜಕೀಯ ಲಾಭಕ್ಕಾಗಿ ಬೆಂಗಳೂರಿನ ಸುತ್ತಮುತ್ತ ಮಾತ್ರ ಬೆಳವಣಿಗೆ ನಡೆಯಲಿದೆ. ಉಳಿದಂತೆ ಉತ್ತರ ಕರ್ನಾಟಕದ ಭಾಗಗಳು ನಿರ್ಲಕ್ಷ್ಯಗೊಳ್ಳುತ್ತವೆ.
ಸರ್ಕಾರ ಬೆಳಗಾವಿಯನ್ನು ನಿರ್ಲಕ್ಷಿಸಿದರೆ, ನಾವು ಪ್ರತ್ಯೇಕ ‘ಉತ್ತರ ಕರ್ನಾಟಕ’ ರಾಜ್ಯಕ್ಕಾಗಿ ಹೋರಾಟ ಮಾಡಬೇಕಾಗುತ್ತದೆ” ಎಂಬ ಸ್ಪಷ್ಟ ಸಂದೇಶವನ್ನು ರಹವಾನಿಸಿದ್ದಾರೆ.
ಹೆಬ್ಬಾಳಕರರ ನೇತೃತ್ವದಲ್ಲಿ ನಡೆದ 18 ಶಾಸಕರ ಮನವಿ, ಬೆಳಗಾವಿಯ ಜನರಲ್ಲಿ ಅಸಮಾಧಾನ ಮತ್ತು ಆಕ್ರೋಶವನ್ನು ಹೆಚ್ಚಿಸಿದೆ. “ರಾಜಕೀಯ ಲಾಭಕ್ಕಾಗಿ ಬೆಳಗಾವಿಯನ್ನು ವಿಭಜಿಸುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ತೀವ್ರ ಹಾನಿಯಾಗುತ್ತದೆ,” ಎಂದು ಜನರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಅಭಿವೃದ್ಧಿ ಮಾಡಬೇಕಾದರೆ, ಕರ್ನಾಟಕದ ಎಲ್ಲಾ ಭಾಗಗಳಿಗೆ ಸಮಾನವಾದ ಪ್ರಾಮುಖ್ಯತೆ ನೀಡಬೇಕು. ಬೆಳಗಾವಿ ಮತ್ತು ಇತರ ಉತ್ತರ ಕರ್ನಾಟಕದ ಜಿಲ್ಲೆಗಳ ನಿರ್ಲಕ್ಷ್ಯ ನಿಲ್ಲಿಸಬೇಕು” ಎಂದು ಜನರು ಒತ್ತಿ ಹೇಳುತ್ತಿದ್ದಾರೆ.
ಅಂದಿನ ಮುಖ್ಯಮಂತ್ರಿ ಜೆ.ಹೆಚ್.ಪಟೇಲ ಸನ್ 1997 ರಲ್ಲಿ ಬೆಳಗಾವಿ ಜಿಲ್ಲೆಯ ವಿಭಜನೆಗೆ ಕೈಹಾಕಿದಾಗ ಬೈಲಹೊಂಗಲ ಭಾಗದ ಜನರು ಅಖಂಡ ಬೆಳಗಾವಿ ಜಿಲ್ಲೆಗೆ ಆಗ್ರಹಿಸಿ ಉಗ್ರ ಹೋರಾಟ ನಡೆಸಿದಾಗ, ಪಟೇಲರು ಯಾವುದೇ ಕಾರಣಕ್ಕೆ ಜಿಲ್ಲೆ ವಿಭಜನೆ ಮಾಡುವುದಿಲ್ಲ ಎಂದು ಪತ್ರ ಬರೆದುಕೊಟ್ಟಿದ್ದರು.
ಆ ಸಂದರ್ಭದಲ್ಲಿ ಆದಂತಹ ಗಲಭೆ, ಹೋರಾಟಗಳನ್ನು ಲಕ್ಷ್ಮೀ ಹೆಬ್ಬಾಳಕರ ಮರೆತಂತಿದೆ. ಮತ್ತೆ ಜಿಲ್ಲಾ ವಿಭಜನೆಗೆ ಮುಂದಾದರೆ ಬೈಲಹೊಂಗಲ ಜನರು ಸುಮ್ಮನಿರುವವರಲ್ಲ. ತಮ್ಮ ರಾಜಕೀಯ ಲಾಭ ಬದಿಗಿಟ್ಟು ಅಖಂಡ ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿ ಇಲ್ಲವಾದಲ್ಲಿ ಉಗ್ರ ಹೋರಾಟದ ಹಿಡಿಯಬೇಕಾದಿತು ಎಂದು ಎಚ್ಚರಿಕೆಯನ್ನು ಸಹ ನೀಡಿದ್ದಾರೆ. “ರಾಜಕೀಯ ಉದ್ದೇಶಗಳಿಗೆ ಬೆಳಗಾವಿಯನ್ನು ಬಳಸಬೇಡಿ” ಎಂಬ ಜನರ ತೀವ್ರ ಅಭಿಪ್ರಾಯಗಳು ಮುನ್ನೆಲೆಗೆ ಬರುತ್ತಿದ್ದು, ಸರ್ಕಾರವು ಈ ವಿರೋಧದ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಇನ್ನೂ ಕಾದು ನೋಡಬೇಕು.
ಒಟ್ಟಾರೆ ಜಿಲ್ಲೆ ವಿಭಜನೆಗೆ ನಿಂತ ಸಚಿವೆ ಹೆಬ್ಬಾಳಕರ ಜೇನು ಗೂಡಿಗೆ ಕೈ ಹಾಕುತ್ತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಜನರ ಆಕ್ರೋಶಕ್ಕೆ ಗುರಿಯಾದರೂ ಅಚ್ಚರಿಯಿಲ್ಲ.
ವರದಿ : ಸಂಪಾದಕೀಯ










