ವಿವಿಧ ಬೇಡಿಕೆ ಈಡೇರಿಸುವಂತೆ ಶುಶ್ರೂಷಕ, ಶುಶ್ರೂಕಿಯರ ಪ್ರತಿಭಟನೆ
- 15 Jan 2024 , 12:30 PM
- Belagavi
- 170
ಬೆಳಗಾವಿ :ರಾಜ್ಯದಾದ್ಯಂತ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕ ಹಾಗೂ ಶುಶ್ರೂಷಕಿಯರ ಸೇವೆಯನ್ನು ಖಾಯಂಗೊಳಿಸುವುದು ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಸೇರಿದಂತೆ ಇನ್ನೀತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಶುಶ್ರೂಷಕರು ಹಾಗೂ ಶುಶ್ರೂಷಕಿಯರುಗಳ ಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಸುವರ್ಣ ವಿಧಾನ ಸೌಧದ ಸಮೀಪದಲ್ಲಿ ಬಸ್ತವಾಡ ಗ್ರಾಮದಲ್ಲಿ ಹಾಕಲಾದ ಪ್ರತಿಭಟನಾ ವೇದಿಕೆಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸುವ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ರಾಜ್ಯದಾದ್ಯಂತ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕ ಹಾಗೂ ಶುಶ್ರೂಷಕಿಯರು ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಅತಿ ಕಡಿಮೆ ಸಂಬಳ ಇದೆ. ಸದ್ಯ ₹ ೧೩,೦೦೦ ನಿಗದಪಿಡಿಸಿದ್ದು ಈ ಪೈಕಿ ಕೈಗೆ ಕೇವಲ ₹ ೧೧೦೦೦ ಗಳಿಗೆ ಸಿಗುತ್ತದೆ. ಈ ಅತ್ಯಂತ ಕಡಿಮೆ ವೇತನದಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಇಂದಿನ ದಿನಮಾಗಳಲ್ಲಿ ಇಷ್ಟು ಸಂಬಳದಲ್ಲಿ ಹೇಗೆ ಜೀವನ ನಡೆಸುವುದು. ಕೋವಿಡ್-೧೯ ಸಂದರ್ಭದಲ್ಲಿ ಯಾವುದೇ ಸಮಯದಲ್ಲೂ ಸರ್ಕಾರ ನೀಡಿರುವ ಸಲಹೆ ಸೂಚನೆಗಳನ್ನು ತಪ್ಪದೆ ಪಾಲಿಸಿಕೊಂಡು ಬಂದಿದ್ದೇವೆ. ಜೀವದ ಹಂಗು ತೊರೆದು ಸೇವೆ ಸಲ್ಲಿದ್ದೇವೆ. ನಮ್ಮ ಜೀವನವನ್ನೇ ಕೋಡ್ ರೋಗಿಗಳಿಗೆ ಮುಡಿಪಾಗಿಟ್ಟಿದ್ದೇವೆ.

ಇನ್ನು ಮುಂದೆ ಕೂಡ ಇಲಾಖೆ ಹಾಗೂ ಸರ್ಕಾರದೊಂದಿಗೆ ಎಂತಹ ಕಷ್ಟದ ಸಂದರ್ಭದಲ್ಲೂ ಸೇವೆ ಸಲ್ಲಿಸಲು ಬದ್ಧರಾಗಿದ್ದೇವೆ. ಈ ಸೇವೆ ಬಿಟ್ಟು ಯಾವುದೇ ವೃತ್ತಿ ನಮಗೆ ಬರುವುದಿಲ್ಲ. ಆದ್ದರಿಂದ ನಮ್ಮ ಸೇವೆಯನ್ನು ಖಾಯಂ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ನಮ್ಮ ಸೇವೆಯನ್ನು ಕಾಯಂ ಮಾಡುವವರೆಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.ಈ ವೃತ್ತಿಯನ್ನು ನಂಬಿಕೊಂಡು ನಮ್ಮ ಕುಟುಂಬಗಳನ್ನು ಅತೀ ಕಡಿಮೆ ಸಂಬಳದಲ್ಲಿ ಸರಿದೂರಿಸಿಕೊಂಡು ಬಂದಿರುತ್ತೇವೆ.
ಇಂದಿನ ದಿನಮಾನಗಳಲ್ಲಿ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ, ಮನೆಯಲ್ಲಿರುವ ವಯೋವೃದ್ಧರ ಪಾಲನೆ, ಪೋಷಣೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಮಾಡಿಸುವುದು ಕಷ್ಟಸಾಧ್ಯವಾಗಿದೆ. ರಾಜ್ಯಾದಾದ್ಯಂತ ಕಾಯಂ ಸಿಬ್ಬಂದಿಗಳು ನಿರ್ವಹಿಸಿದಷ್ಟೇ ಕೆಲಸವನ್ನು ಅತೀ ಕಡಿಮೆ ಸಂಬಳದಲ್ಲಿ ನಿರ್ವಹಿಸುತ್ತಾ ಬರಲಾಗುತ್ತಿದೆ. ಆದ್ದರಿಂದ ಸರ್ಕಾರ ಮತ್ತು ಆರೋಗ್ಯ ಇಲಾಖೆಯು ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಶುಶ್ರೂಷಕ ಹಾಗೂ ಶುಶ್ರೂಷಕಿಯರ ಸೇವೆಯನ್ನು ಕಾಯಂ ಮಾಡಬೇಕು. ಕಾಯಂ ಮಾಡುವವರೆಗೆ ಇನ್ನುಳಿದ ಇಲಾಖೆಯಲ್ಲಿರುವ ಪೌರ ಕಾರ್ಮಿಕರು ಮತ್ತು ೧೦೮ ಸಿಬ್ಬಂದಿಗಳಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಮಾಡಿದಂತೆ ತಮಗೂ ನೀಡಬೇಕು. ನಮ್ಮ ಸೇವೆಯನ್ನು ಕಾಯಂ ಮಾಡಿ ನಮ್ಮ ಕುಟುಂಬಗಳಿಗೆ ಸಾಮಾಜಿಕ, ಸೂಕ್ತ ರಕ್ಷಣೆ ನೀಡಿಬೇಕು. ಒಂದು ವೇಳೆ ತಾವುಗಳು ಇದಕ್ಕೆ ಯಾವುದೇ ರೀತಿಯಲ್ಲಿ ಸ್ಪಂದಿಸದೇ ಹೋದಲ್ಲಿ ರಾಜ್ಯದಾದ್ಯಂತ ಕೆಲಸ ನಿರ್ವಹಿಸುತ್ತಿರುವ ಶುಶ್ರೂಷಕ, ಶುಶ್ರೂಷಕಿಯರು ಉಗ್ರ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ.
ನಮ್ಮ ಸೇವೆಯನ್ನು ಕಾಯಂ ಮಾಡಿಕೊಳ್ಳುವವರೆಗೆ ಗುತ್ತಿಗೆ-ಹೊರಗುತ್ತಿಗೆ ಆಧಾರದಲ್ಲಿ ಆಗಲಿ, ನೇರ ನೇಮಕಾತಿ ಆಗಲಿ ಶುಶ್ರೂಷಕ, ಶುಶ್ರೂಷಕಿಯರುಗಳನ್ನು (ಶುಶ್ರೂಷಾಧಿಕಾರಿಗಳು) ನೇಮಿಸಿಕೊಳ್ಳಬಾರದು. ಸದ್ಯ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಶುಶ್ರೂಷಕ, ಶುಶ್ರೂಷಕಿಯರಿಗೆ ಪ್ರತಿ ತಿಂಗಳು ೧ನೇ ತಾರೀಖಿನಂದು ಸಂಬಳ ಪಾವತಿಸಬೇಕು. ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಶುಶ್ರೂಷಾಧಿಕಾರಿಗಳನ್ನು ಕೀಳುಮಟ್ಟದಿಂದ ನೋಡುವ ಪ್ರವೃತ್ತಿಯನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿಗೌರವಾಧ್ಯಕ್ಷ ಪಿ ಎಚ್ ನೀರಲಕೇರಿ, ರೂಪಾದೇವಿ ಬಾಳೆಕುಂದ್ರಿ, ಸುಜಾತಾ ಗಂಡಗೋಲೆ, ಸಾಯಿದಾ ಇನಾಮದಾರ, ಅನಿತಾ, ಶೈಲಾ ಹುಲಕುಂದ, ಮೆಹಬೂಬ್ ಲೋಕಾಪುರಿ, ಪರುವಿನ ಲೋಕಾಪುರಿ ಸೇರಿದಂತೆ ಗದಗ, ಧಾರವಾಡ, ಹಾವೇರಿ, ಬೆಳಗಾವಿ ಜಿಲ್ಲೆಯ ಶುಶ್ರೂಷಕರು ಇದ್ದರು.










