ನಮ್ಮ ಮೋದಿಗೆ ನಮ್ಮದೇ ಅಭ್ಯರ್ಥಿ ! ಮಹಾಂತೇಶ ವಕ್ಕುಂದ
- shivaraj bandigi
- 28 Mar 2024 , 2:31 PM
- Belagavi
- 827
ಬೆಳಗಾವಿ : ಇದು ಬೆಳಗಾವಿಗರ ಸ್ವಾಭಿಮಾನದ ಹೋರಾಟ.


ಮೋದಿ ಹಾಗೂ ಬಿಜೆಪಿ ಬೆಂಬಲಿಸುವ ಬೆಳಗಾವಿ ಮತದಾರರ ಮೇಲೆ ಹೊರಗಿನ ಅವಕಾಶವಾದಿಗಳನ್ನು ಒತ್ತಾಯ ಪೂರ್ವಕವಾಗಿ ಹೇರಿ ನಮ್ಮತನವನ್ನು ಬಲಿ ಕೊಡುತ್ತಿರುವವರ ವಿರುದ್ಧ ಹೋರಾಟ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾಂತೇಶ ವಕ್ಕುಂದ ಆಕ್ರೋಶ ಹೊರಹಾಕಿದರು.
ಅವರು ಮಾಧ್ಯಮದೊಂದಿಗೆ ಮಾತನಾಡಿ, ಬೆಳಗಾವಿ ಜಿಲ್ಲೆ ಮೋದಿಯವರ ಹೆಸರು ಹೇಳಿಕೊಂಡು ಬೇಕಾ ಬಿಟ್ಟಿಯಾಗಿ ಬಂದು ಉಂಡು ಹೋಗುವ ಧರ್ಮಛತ್ರವಲ್ಲ, ಇದೊಂದು ಸ್ವಾತಂತ್ರ್ಯ ಹೋರಾಟಗಾರರು ಹುಟ್ಟಿದ ಸ್ವಾಭಿಮಾನದ ನೆಲ. ಆ ಸ್ವಾಭಿಮಾನಕ್ಕೆ ಧಕ್ಕೆ ಎಂದೂ ಬರಕೂಡದು ಎಂದರು.
ಬಿಜೆಪಿಯ ಬೆಂಬಲಿಗರಾಗಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದ ನಮ್ಮ ಮೇಲೆ, ಈ ಕ್ಷೇತ್ರದ ಜನರ ಮೇಲೆ, ನಮ್ಮ ವಿಶ್ವಾಸ ಮುರಿದು ಬಿಜೆಪಿಯಿಂದ ಎಲ್ಲ ಅಧಿಕಾರ ಅನುಭವಿಸಿದ ಮೇಲೂ ಕೇವಲ ತನ್ನ ಸ್ವಾರ್ಥಕ್ಕಾಗಿ ಪಕ್ಷ ತೊರೆದು, ಮೋದಿಯವರನ್ನೇ ಹೀಯಾಳಿಸಿ, ಕೊನೆಗೆ ಒಬ್ಬ ಕಾರ್ಯಕರ್ತನ ವಿರುದ್ಧ ಸೋತು, ಈಗ ಬಿಜೆಪಿಗೆ ಮರಳಿ ಬೆಳಗಾವಿ ರಾಜಕಾರಣದಲ್ಲೂ ಕೈಯಾಡಿಸಿ ಎಲ್ಲವೂ ನಮಗೆ ಇರಲಿ ಎಂದು ಬಯಸಿ ಬರುತ್ತಿರುವ ಸ್ವಾರ್ಥಿಗಳನ್ನು ರತ್ನಗಂಬಳಿ ಹಾಕಿ ಸ್ವಾಗತಿಸಬೇಕೆ ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಬನ್ನಿ ಈ ಅನ್ಯಾಯದ ವಿರುದ್ಧ ತೊಡೆತಟ್ಟೋಣ ಎಂದು ಕರೆ ನೀಡಿದ ಅವರು, ಸಮಾನ ಮನಸ್ಕರು, ನಮ್ಮ ಬೆಂಬಲಿಗರು, ಸ್ಥಳೀಯ ನಾಯಕತ್ವ ಬಯಸಿ ಸ್ವಾಭಿಮಾನಕ್ಕೆ ಧಕ್ಕೆಯಾಗಿರುವ ಬೆಳಗಾವಿಯ ಎಲ್ಲ ಮೋದಿ ಮತದಾರರು ಇದೇ ಶನಿವಾರ ಬೆಳಗಾವಿಯಲ್ಲಿ ಸೇರೋಣ. ಗಟ್ಟಿಯಾದ ನಿರ್ಧಾರ ಮಾಡಿ ನಮ್ಮೂರಿನ ನ್ಯಾಯಕ್ಕಾಗಿ ನಾವೇ ಅಖಾಡಕ್ಕಿಳಿಯೋಣ ಎಂದರಲ್ಲದೆ ನಮ್ಮ ಮೋದಿಗೆ ನಮ್ಮದೇ ಅಭ್ಯರ್ಥಿ ಎಂದು ಘೋಷಿಸಿದರು.










