ಪೊಲೀಸರು ನಾಸೀರ್ ಹುಸೇನ್ ನ್ನು ಬಂಧಿಸಬೇಕು : ವಿಜಯೇಂದ್ರ
- shivaraj bandigi
- 5 Mar 2024 , 10:51 AM
- Belagavi
- 444
ಬೆಳಗಾವಿ

ವಿಧಾನ ಸೌಧದ ಒಳಗಡೆ ಕೆಲ ದೇಶ ದ್ರೋಹಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿದ ನಂತರ ಬಿಜೆಪಿ ಪ್ರತಿಭಟನೆ ಮಾಡಿದ ಬಳಿಕ ದೇಶ ದ್ರೋಹಿಗಳನ್ನು ಬಂಧಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಮಂಗಳವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪಾಕ್ ಪರ ಘೋಷಣೆ ಕೂಗಿರುವ ಎಫ್ ಎಸ್ ಎಲ್ ವರದಿಯನ್ನು ರಾಜ್ಯ ಸರಕಾರ ಇಲ್ಲಿಯವರೆಗೂ ಬಹಿರಂಗ ಪಡಿಸಿಲ್ಲ. ಖಾಸಗಿ ಎಫ್ ಎಸ್ ಎಲ್ ವರದಿ ಬಹಿರಂಗಗೊಳ್ಳದಿದ್ದರೆ, ದೇಶ ದ್ರೋಹಿಗಳನ್ನು ಬಂಧಿಸಲು ರಾಜ್ಯ ಸರಕಾರ ಮೀನಾಮೇಷ ಏಣಿಸುತ್ತಿತ್ತು ಎಂದು ಹರಿಹಾಯ್ದರು.
ಯಾವ ಕಾರಣದಿಂದ ರಾಜ್ಯ ಸರಕಾರ ಎಫ್ ಎಸ್ ಎಲ್ ವರದಿ ಬಹಿರಂಗಗೊಳಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಸರಕಾರವೇ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಪಾಕ್ ಪರ ಘೋಷಣೆ ಕೂಗಿದ ಪಾತ್ರಧಾರಿ, ಸೂತ್ರಧಾರ ಯಾರು ಎಂದು ಪ್ರಶ್ನಿಸಿದ ಅವರು, ಪ್ರಮುಖವಾಗಿ ರಾಜ್ಯಸಭಾ ಸದಸ್ಯ ನಾಸೀರ ಹುಸೇನ್ ಅವರ ಹೆಸರನ್ನೇ ಪೊಲೀಸರು ಕೈ ಬಿಟ್ಟಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ನಾಸೀರ ಹುಸೇನ್ ಅವರನ್ನು ಕೂಡ ಅಪರಾಧಿಯನ್ನಾಗಿ ಪೊಲೀಸರು ಪರಿಗಣಿಸಿ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸಭಾ ಸದಸ್ಯರಾದವರು ದೇಶದ, ಸಂವಿಧಾನವನ್ನು ಎತ್ತಿ ಹಿಡಿಯುತ್ತೇವೆ ಎಂದು ಪ್ರಮಾಣ ವಚನ ಮಾಡುತ್ತಾರೆ. ನಾಸೀರ ಹುಸೇನ್ ರಾಜ್ಯಸಭಾ ಸದಸ್ಯರಾಗಿ ನೇಮಕವಾದ ಬಳಿಕ ಅವರ ಬೆಂಬಲಿಗರು ಪಾಕ್ ಪರ ಘೋಷಣೆ ಕೂಗಿದರೂ ನಾಸೀರ್ ಮೇಲೆ ಕ್ರಮ ಕೈಗೊಂಡಿಲ್ಲ. ತನಿಖೆ ಸಂಪೂರ್ಣವಾಗಿ ಮುಗಿಯುವವರೆಯೆ ನಾಸೀರ್ ಪ್ರಮಾಣ ವಚನ ತೆಗೆದುಕೊಳ್ಳಬಾರದು ಎಂದು ಉಪರಾಷ್ಟ್ರ ಪತಿಗಳಿಗೆ ಪತ್ರ ಬರೆಯಲಾಗುವುದು ಎಂದರು.
ಕಾಂಗ್ರೆಸ್ ನಾಯಕರು ದೇಶ ಪ್ರೇಮಿಗಳಾಗಿದ್ದರೆ ಈ ಪ್ರಕರಣ ಗಂಭೀರವಾಗಿ ತೆಗೆದುಕೊಂಡು ಆರೋಪಿಗಳಿಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದ ಆಗ್ರಹಿಸಿದ ಅವರು, ಪೊಲೀಸ್ ಅಧಿಕಾರಿಗಳ ಮೇಲೆ ಸರಕಾರ ಒತ್ತಡ ಹಾಕುವುದು ಸರಿಯಲ್ಲ ಎಂದರು.










