ಬಿಜೆಪಿಯಲ್ಲಿ ಲಿಂಗಾಯತರಿಗೆ ಬೆಲೆ ಇದೆಯೇ ಪ್ರಶ್ನಿಸಿಕೊಳ್ಳಿ: ಟೋಪಣ್ಣವರ
- 14 Jan 2024 , 9:28 PM
- Belagavi
- 160
ಬೆಳಗಾವಿ :ಬೆಳಗಾವಿಯ ಉತ್ತರ ಮತ್ತು ದಕ್ಷಿಣ ಮತಕ್ಷೇತ್ರದಲ್ಲಿರುವ ಬಿಜೆಪಿಯ ಲಿಂಗಾಯತ ಕಾರ್ಯಕರ್ತರಿಗೆ ಹಾಗೂ ಆಕಾಂಕ್ಷಿಗಳಿಗೆ ಬಿಜೆಪಿಯಲ್ಲಿ ತಮ್ಮ ಪರಿಸ್ಥಿತಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಪರಿಸ್ಥಿತಿ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ತಿಳಿಯುತ್ತಿದೆ ಎಂದು ಆಮ್ ಆದ್ಮಿ ಮುಖಂಡ ರಾಜಕುಮಾರ ಟೋಪಣ್ಣವರ ಪ್ರಶ್ನಿಸಿದ್ದಾರೆ.

ಸ್ಥಳೀಯ ಶಾಸಕರು, ಆರ್‌ಎಸ್‌ಎಸ್ ನಾಯಕತ್ವ ಎಷ್ಟು ಗೌರವ ಕೊಟ್ಟಿದೆ ಎನ್ನುವುದನ್ನು ಇವತ್ತಿನ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಫಲಿತಾಂಶವೇ ಸಾಕ್ಷಿಯಾಗಿದೆ. ಬಿಜೆಪಿಯಲ್ಲಿರುವ ಲಿಂಗಾಯತ ಕಾರ್ಯಕರ್ತರು ಯಡಿಯೂರಪ್ಪ ಸಿಎಂ ಆಗಬೇಕು. ಬೇರೆಯವರು ಸಿಎಂ ಆಗಬೇಕು ಎಂದು ಚುನಾವಣೆಯಲ್ಲಿ ಅವರ ಬೆಂಬಲಿಸುವ ಬದಲು, ನೀವು ಜನರ ಪರವಾಗಿದ್ದರೇ ದಕ್ಷಿಣ ಮತಕ್ಷೇತ್ರದ ಬಿಜೆಪಿ ಲಿಂಗಾಯತ ಕಾರ್ಯಕರ್ತರು ನನಗೆ ಹೇಳುವ ಅವಶ್ಯಕತೆ ಇಲ್ಲ. ನಿಮಗೆ ಹೋರಾಟ ಮಾಡುವ ಶಕ್ತಿ ಇದ್ದರೇ, ನಿಮ್ಮ ನಾಯಕರಿಗೆ ಸವಾಲ್ ಹಾಕಿ ಎಂದರು.
ಬೆಳಗಾವಿ ಜನರು ಅರ್ಥ ಮಾಡಿಕೊಳ್ಳಬೇಕು. ನರೇಂದ್ರ ಮೋದಿ ಅವರು ಬಂದು ಬೆಳಗಾವಿ ದಕ್ಷಿಣ ಹಾಗೂ ಉತ್ತರ ಮತಕ್ಷೇತ್ರದ ವಿಧಾನಸಭೆ ಚುನಾವಣೆಗೆ ಬಂದು ಸ್ಪರ್ಧೆ ನಡೆಸುವುದಿಲ್ಲ. ಲಿಂಗಾಯತರು ಎಚ್ಚೆತ್ತುಕೊಂಡು ಸ್ಥಳೀಯ ಶಾಸಕರ ಮಾತನ್ನು ಕೇಳದೆ ನೇರವಾಗಿ ಲಿಂಗಾಯತ ನಾಯಕರಿಗೆ ಪ್ರಶ್ನೆ ಮಾಡಿ ಎಂದು ಹೇಳಿದರು.
ಬೆಳಗಾವಿ ಮಹಾನಗರ ಪಾಲಿಕೆಗೆ 21ನೇ ಅವಧಿಗೆ ನೂತನವಾಗಿ ಆಯ್ಕೆಯಾದ ಮೇಯರ್ ಹಾಗೂ ಉಪಮೇಯರ್ ಅಭಿನಂದನೆ ಸಲ್ಲಿಸುತ್ತೇವೆ, ಬೆಳಗಾವಿ ನಗರದ ಹಿತದೃಷ್ಠಿಯಿಂದ ಕೆಲಸ ಮಾಡಿ. ಬುಡಾ ಅಧ್ಯಕ್ಷರು ಸ್ಥಳೀಯ ಶಾಸಕರ ಮಾತು ಕೇಳಿ ರಬ್ಬರ್ ಸ್ಟಾö್ಯಂಪ್ ಆಗಿದ್ದಾರೋ ಹಾಗೆ ಆಗುವುದು ಬೇಡ. ಜನರ ಹಿತ ಕಾಯುವ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸ ಮಾಡಿ ಎಂದರು.
ಮರಾಠಾ ಸಮುದಾಯಕ್ಕೆ ದಕ್ಷಿಣ ಮತಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿರುವ ದಬ್ಬಾಳಿಕೆ, ದರ್ಪ ಮಾಡಿದ ಪರಿಣಾಮ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮೇಯರ್, ಉಪಮೇಯರ್ ಸ್ಥಾನ ನೀಡಿದ್ದಾರೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಮರಾಠಿ ಭಾಷಿಕ ಜನರಿಗೆ ಅನ್ಯಾಯ ಮಾಡಿರುವ ಪಶ್ಚಾತಾಪ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಮುಂಬರುವ ಚುನಾವಣೆಯಲ್ಲಿ ಸೋಲು ಭೀತಿಯಿಂದ ಪಾಲಿಕೆಯಲ್ಲಿ ಮೇಯರ್, ಉಪಮೇಯರ್ ಸ್ಥಾನ ಮರಾಠಿಗರಿಗೆ ನೀಡಿ ಮರಾಠಾ ಸಮಾಜದ ಜನರ ಮೂಗಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಮರಾಠಾ ಸಮುದಾಯದ ಜನರಿಗೆ ತೊಂದರೆ ಕೊಡುವುದು, ಅವರ ಜಮೀನು ಕಸೆದುಕೊಳ್ಳುವುದು, ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ಈಗ ನಾಟಕ ಮಾಡುವುದು ಸಾಮಾನ್ಯವಾಗಿದೆ. ಈ ಭಾಗದಲ್ಲಿ ಮರಾಠಾ ಸಮಾಜದ ಹೆಚ್ಚಿನ ಜನಸಂಖ್ಯೆ ಇದೆ. ಮರಾಠಿಗರ ಮೇಲೆ ಪ್ರೀತಿ ಇದ್ದರೇ, ದಕ್ಷಿಣ ಮತಕ್ಷೇತ್ರದಲ್ಲಿ ಬಿಜೆಪಿಯಿಂದ ಮರಾಠಾ ಸಮಾಜ ಮುಖಂಡನಿಗೆ ಟಿಕೆಟ್ ನೀಡಿ ಅವರನ್ನು ಗೆಲ್ಲಿಸಿಕೊಂಡು ಬರಲಿ ಎಂದು ಪ್ರಕಟಣೆಯಲ್ಲಿ ಸವಾಲ್ ಹಾಕಿದರು.











