ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಹೋರಾಟ ಅನಿವಾರ್ಯ: ಜಸ್ಟಿಸ್ ಸಂತೋಷ್ ಹೆಗ್ಡೆ
- 11 Jan 2024 , 7:04 PM
- Belagavi
- 123
ಬೆಳಗಾವಿ :ನಿರುದ್ಯೋಗ ಸೇರಿದಂತೆ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಅನಿವಾರ್ಯ, ಅದಕ್ಕಾಗಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಿ. ಆಡಳಿತದಲ್ಲಿರುವವರ ದುರಾಸೆಯಿಂದ ಸಮಸ್ಯೆಗಳು ತಲೆದೋರುತ್ತಿವೆ. ಅಭಿವೃದ್ಧಿ ಶೂನ್ಯವಾಗಿದೆ, ದುರಾಸೆ ಮಾತ್ರ ಹೆಚ್ಚುತ್ತಿದೆ. 50ರ ದಶಕದಿಂದ ಇಲ್ಲಿಯವರೆಗೂ ಸಾವಿರಾರು, ಲಕ್ಷಾಂತರ ಕೋಟಿ ರೂಪಾಯಿಗಳ ಹಗರಣಗಳೇ ಬಯಲಿಗೆ ಬರುತ್ತಿವೆ. ಈ ಹಗರಣಗಳ ಕಾರಣದಿಂದಲೇ ಅಭಿವೃಧ್ಧಿ ಸಾಧ್ಯವಾಗುವುದಿಲ್ಲ. ನಿರುದ್ಯೋಗ ಹೆಚ್ಚಿದಂತೆ ಜನರಲ್ಲಿ ಆಕ್ರೋಶ ಹೆಚ್ಚಿ, ಅವರು ಬೀದಿಗೆ ಬಂದರೆ ಅದರ ಪರಿಣಾಮ ಆಳ್ವಿಕರ ಮೇಲೆ ಭೀಕರವಾಗಿರುತ್ತದೆ. ನ್ಯಾಯವಾದ ಹಕ್ಕುಗಳನ್ನು ಪಡೆಯಲು ಪ್ರತಿಭಟನೆ ಮಾಡಬೇಕು. ಗುರಿಮುಟ್ಟುವವರೆಗೆ ನಿಮ್ಮ ಹೋರಾಟ ಮುಂದುವರೆಸಿ ಎಂದರು. ” ಎಂದು ಸುಪ್ರಿಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಮಾಜಿ ಲೋಕಾಯುಕ್ತರಾದ ಜಸ್ಟಿಸ್ ಸಂತೋಷ್ ಹೆಗ್ಡೆಯವರು ಹೇಳಿದರು.
ಅಖಿಲ ಭಾರತ ನಿರುದ್ಯೋಗಿ ಯುವಜನರ ಹೋರಾಟ ಸಮಿತಿ-ಕರ್ನಾಟಕ(ಎಐಯುವೈಎಸ್‌ಸಿ)ದಿಂದ ಇಂದು ಬೆಂಗಳೂರಿನ ಸ್ಕೌಟ್ಸ್ ಆಂಡ್ ಗೈಡ್ಸ್ ಕಛೇರಿ ಆವರಣದಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಿರುದ್ಯೋಗಿ ಯುವಜನರ ರಾಜ್ಯ ಮಟ್ಟದ ಸಮಾವೇಶವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಮುಂದುವರೆದು ಮಾತನಾಡಿದ ಶ್ರೀ ಸಂತೋಷ್ ಹೆಗ್ಡೆಯವರು “ನಮ್ಮ ಜನ ಪ್ರತಿನಿಧಿಗಳಿಗೆ ಇಂದು ಜನರ ನೈಜ ಸಮಸ್ಯೆಗಳ ಬಿಸಿ ತಟ್ಟಲು ಪ್ರತಿಭಟನೆ ಅವಶ್ಯವಾಗಿದೆ. ಅಧಿಕಾರಿದಲ್ಲಿರುವವರೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವುದು, ಬೇಲಿಯೇ ಎದ್ದು ಹೊಲ ಮೇಯ್ದಂತಾಗುತ್ತಿದೆ. ಆದ್ದರಿಂದ ಎಲ್ಲ ಸಮಸ್ಯೆಗಳ ವಿರುದ್ಧ ಹೋರಾಟ ಅನಿವಾರ್ಯ. ನಿಮ್ಮ ಹೋರಾಟದ ಜೊತೆ ನಾನೂ ಇದ್ದೇನೆ. ಹೋರಾಟವನ್ನು ಮುಂದುವರೆಸಿ.” ಎಂದು ಕರೆ ನೀಡಿದರು.
ಎಐಡಿವೈಓನ ಅಖಿಲ ಭಾರತ ಉಪಾಧ್ಯಕ್ಷರಾದ ಡಾ. ಜಿ. ಎಸ್. ಕುಮಾರ್ ಅವರು ಮಾತನಾಡಿ “ಆಳ್ವಿಕರ ದುರಾಸೆಗೆ ಮುಖ್ಯ ಕಾರಣ ಇಂದಿನ ಶೋಷಣಾಯುಕ್ತ ಬಂಡವಾಳಶಾಹಿ ವ್ಯವಸ್ಥೆಯಾಗಿದೆ. ಇಂದು ನಮ್ಮ ಎಲ್ಲ ಸರ್ಕಾರಗಳು ಬಂಡವಾಳಿಗರ ಪರವಾಗಿ ಆಳ್ವಿಕೆ ನಡೆಸುತ್ತಿದ್ದಾರೆ. ಕೆಲವೇ ಬಂಡವಾಳಗಾರರ ಹಿತಕ್ಕಾಗಿ 99 ಪ್ರತಿಶತ ದುಡಿಯುವ ಜನರ ಅವಶ್ಯಕತೆಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಈ ಶೋಷಕ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸದ ಹೊರತು ನಿರುದ್ಯೋಗ ಸೇರಿದಂತೆ ಎಲ್ಲಾ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಸಿಗದು. ಆದ್ದರಿಂದ ಇಂದಿನ ಯುವಜನತೆಗೆ ಸಮಸ್ಯೆಗಳ ವಿರುದ್ಧದ ಹೋರಾಟಕ್ಕೆ ಸರಿಯಾದ ಉನ್ನತ ರಾಜಕೀಯ ಪ್ರಜ್ಞೆಯ ಅವಶ್ಯಕತೆ ಇದೆ. ನಮ್ಮ ಸ್ವಾತಂತ್ರö್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿಗಳಾದ ಭಗತ್‌ಸಿಂಗ್, ನೇತಾಜಿಯವರು ಕೂಡಾ ಸಮಾಜದ ಮೂಲಭೂತ ಬದಲಾವಣೆಯನ್ನು ಬಯಸಿದ್ದರು. ತಮ್ಮ ಹೋರಾಟವನ್ನು ಆ ದಿಕ್ಕಿನಲ್ಲಿ ನಡೆಸಿದ್ದರು.
ಆ ಕ್ರಾಂತಿಕಾರಿಗಳು ನಮಗೆ ಆದರ್ಶವಾಗಬೇಕು. ಆ ಸ್ಫೂರ್ತಿಯೊಂದಿಗೆ ನಿರುದ್ಯೋಗದ ವಿರುದ್ಧ ರಾಜ್ಯದಲ್ಲಿ ಸಮರಶೀಲ ಹೋರಾಟವನ್ನು ಬೆಳೆಸಬೇಕಿದೆ. ರಾಜ್ಯದಲ್ಲಿ ಖಾಲಿಯಿರುವ 2.5ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಸಮರೋಪಾದಿಯಲ್ಲಿ, ಪಾರದರ್ಶಕವಾಗಿ ಭರ್ತಿಮಾಡಿಕೊಳ್ಳಲು ಆಗ್ರಹಿಸಬೇಕು” ಎಂದು ಕರೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ಲೇಖಕರಾದ ಶ್ರೀ ಮಂಗ್ಳೂರ ವಿಜಯ ಅವರು ಮಾತನಾಡಿ “ದುಡಿಯುವರಿಗೆ ಕೆಲಸ ಕೊಡುವುದು ಸರ್ಕಾರದ ಕೆಲಸ. ನಾವು ಶ್ರಮಕ್ಕೆ ತಕ್ಕ ಪ್ರತಿಫಲ ಬಯಸುವುದು ನಮ್ಮ ಹಕ್ಕು. ಉದ್ಯೋಗ ನೀಡದೇ ಸರ್ಕಾರಗಳು ಉಡಾಫೆಯಿಂದ ಉತ್ತರ ನೀಡುತ್ತಿವೆ. ಉದ್ಯೋಗ ನೀಡಿ ಇಲ್ಲವೇ ಜೈಲಿಗೆ ಕಳಿಸಿ ಎಂದು ಯುವಕರು ನಿರ್ಣಾಯಕವಾದ ಹೋರಾಟಕ್ಕೆ ಧುಮುಕಬೇಕಾಗಿದೆ.
ಮಾನವನಿಂದ ಮಾನವನ ಶೋಷಣೆಗೆ ಆಸ್ಪದವೇ ಇರದಂತಹ ಸಮಾಜವಾದಿ ಸಮಾಜದ ಸ್ಥಾಪನೆ ಯುವಜನ ಚಳುವಳಿಯ ಗುರಿಯಾಗಬೇಕು” ಎಂದು ಹೇಳಿದರು.
ಭಾಷಣಕಾರರಾಗಿ ಆಗಮಿಸಿದ್ದ ಎಐಯುವೈಎಸ್‌ಸಿಯ ಅಖಿಲ ಭಾರತ ಅಧ್ಯಕ್ಷರಾದ ಇ.ವಿ. ಪ್ರಕಾಶ್ ಅವರು ಮಾತನಾಡಿ “ಎಐಯುವೈಎಸ್‌ಸಿ ಇಂದು ದೇಶದಾದ್ಯಂತ ನಿರುದ್ಯೋಗದ ವಿರುದ್ಧ ಬಲಿಷ್ಠ ಹೋರಾಟವನ್ನು ಕಟ್ಟುತ್ತಿದೆ. ಇಂದು ಯುವಜನರನ್ನು ಬೇರೆಬೇರೆ ವ್ಯಸನಗಳಿಗೆ ತಳ್ಳಲಾಗುತ್ತಿದೆ. ದೇಶದ ಆರ್ಥಿಕ ನೀತಿಗಳು ಬಂಡವಾಳಗಾರರ ಪರವಾಗಿದ್ದು ಖಾಸಗೀಕರಣ ನೀತಿಗಳನ್ನು ವೇಗವಾಗಿ ಜಾರಿಗೊಳಿಸಲಾಗುತ್ತಿದೆ. ಉದ್ಯೋಗಗಳನ್ನು ನಾಶಪಡಿಸಲಾಗುತ್ತಿದೆ.
ಆದ್ದರಿಂದ ನಮ್ಮ ಉದ್ಯೋಗದ ಹಕ್ಕಿಗಾಗಿ ಸಮರಶೀಲ ಹೋರಾಟವನ್ನು ಸರಿಯಾದ ವೈಚಾರಿಕತೆಯೊಂದಿಗೆ ಕಟ್ಟೋಣ” ಎಂದು ಹೇಳಿದರು.
ಎಐಡಿವೈಓನ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಸಿದ್ಧಲಿಂಗ ಬಾಗೇವಾಡಿ, ಎಐಯುವೈಎಸ್‌ಸಿಯ ರಾಜ್ಯಾಧ್ಯಕ್ಷರಾದ ಶ್ರೀ ವಿಜಯ್‌ಕುಮಾರ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಎಐಯುವೈಎಸ್‌ಸಿನ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಚನ್ನಬಸವ ಜಾನೇಕಲ್‌ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನಂತರ ಪೊಲೀಸ್ ನೇಮಕಾತಿ ಸೇರಿದಂತೆ ಎಲ್ಲ ಹುದ್ದೆಗಳ ಗರಿಷ್ಠ ವಯೋಮಿತಿಯನ್ನು ಹೆಚ್ಚಿಸಲು ಆಗ್ರಹಿಸಿ, ನೇಮಕಾತಿಯಲ್ಲಿನ ಭ್ರಷ್ಟಾಚಾರ ವಿರೋಧಿಸಿ, ಉದ್ಯೋಗಖಾತ್ರಿ ಯೋಜನೆಯನ್ನು ಬಲಪಡಿಸಲು ಆಗ್ರಹಿಸಿ, ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಹಾಗೂ ಫುಡ್ ಡೆಲಿವರಿ ಪಾರ್ಟ್ನರ್ಸ್ನಂತಹ ಕೆಲಸಗಳನ್ನು ಮಾಡುತ್ತಿರುವ ಗಿಗ್ ಎಕಾನಮಿ ವರ್ಕರ್ಸ್ ಸಮಸ್ಯೆ ಕುರಿತ ಗೊತ್ತುವಳಿ ಸೇರಿದಂತೆ ಐದು ಗೊತ್ತುವಳಿಗಳನ್ನು ಮಂಡಿಸಿ, ಚರ್ಚಿಸಿ ಅಂಗೀಕರಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಉದ್ಯೋಗಾಕಾಂಕ್ಷಿ ಪ್ರತಿನಿಧಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.