ತಾವರಗೇರದಲ್ಲಿ ವಿಭಾಗ ಮಟ್ಟದ ವಿದ್ಯಾರ್ಥಿಗಳ ಅಧ್ಯಯನ ಶಿಬಿರ
- shivaraj B
- 31 Jul 2024 , 5:41 PM
- Koppal
- 4697
ಕೊಪ್ಪಳ : ಆ.3, 4, ಮತ್ತು 5ನೇ ತಾರೀಕಿನಂದು ದಲಿತ ಸಂಘರ್ಷ ರಾಜ್ಯ ಸಮಿತಿ ಮತ್ತು ಮಾನವ ಬಂಧುತ್ವ ವೇದಿಕೆ ಸಹಕಾರದೊಂದಿಗೆ ಕುಷ್ಟಗಿ ತಾಲೂಕಿನ ತಾವರಗೇರಿಯಲ್ಲಿ "ಕಲಬುರ್ಗಿ ವಿಭಾಗ ಮಟ್ಟದ ವಿದ್ಯಾರ್ಥಿ ಯುವ ಜನರ ಅಧ್ಯಯನ ಶಿಬಿರ"ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಸಂಘಟಕಿ, ಪತ್ರಕರ್ತೆ ಸಾವಿತ್ರಿ ಮುಜಮದಾರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊಪ್ಪಳ ಜಿಲ್ಲೆಯಿಂದಲೇ ಸುಮಾರು 250ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಇನ್ನುಳಿದ ಜಿಲ್ಲೆಗಳಿಂದ ಅಸಂಖ್ಯಾತ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಕಾರ್ಯಕ್ರಮವನ್ನು 'ಸಂವಾದ ಪತ್ರಿಕೆ' ಸಂಪಾದಕ ಇಂದೂಧರ ಹೊನ್ನಾಪೂರ ಅವರು ಉದ್ಘಾಟಿಸಲಿದ್ದು, ಹೆಚ್.ಎಸ್.ಅಣ್ಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ವಿ.ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡುವರು. ಮಖ್ಯ ಅತಿಥಿಗಳಾಗಿ ಮಾವಳ್ಳಿ ಶಂಕರ್ , ಡಾ.ರಾಮಚಂದ್ರಪ್ಪ, ಗುರುಪ್ರಸಾದ್ ಕೆರಗೋಡು, ಅನಂತ ನಾಯಕ್ ಸೇರಿದಂತೆ ಇತರ ಸಂಘಟನಾ ಮುಖಂಡರು, ಚಿಂತಕರು ಪಾಲ್ಗೊಳ್ಳುವರು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಆನಂದ ಪೂಜಾರ, ಮುದುಕಪ್ಪ ಹೊಸಮನಿ, ದೇವಮ್ಮ ಹುಲಿಹೈದರ್ , ಕೆ.ಅಡಿವೆಪ್ಪ, ಭೀಮಪ್ಪ ದೇವರಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ರವಿಚಂದ್ರ ಬಡಿಗೇರ










