ಸುಳೆಭಾವಿ ಎರಡೂ ಕೊಲೆ ಪ್ರಕರಣ: ಆರು ಜನರನ್ನು ವಶಕ್ಕೆ ಪಡೆದ ಪೊಲೀಸರು

ಬೆಳಗಾವಿ :ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ನಡೆದ ಎರಡೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಎಂ.ಬಿ. ಬೋರಲಿಂಗಯ್ಯ ತಿಳಿಸಿದರು.

promotions

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುವಾರ ತಡ ರಾತ್ರಿ 6 ರಿಂದ 7 ಜನರ ತಂಡದಿಂದ ಇಬ್ಬರ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.ನಾನು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಳಗಾವಿ ಗ್ರಾಮೀಣ ಎಸಿಪಿ ಗಿರೀಶ್, ಮಾರಿಹಾಳ ಸಿಪಿಐ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದರು.

promotions

ಮಾರಕಾಸ್ತ್ರಗಳಿಂದ ಕೊಚ್ಚಿ ಪ್ರಕಾಶ್ ಪಾಟೀಲ್,‌ ಮಹೇಶ್ ಮುರಾರಿ ಹತ್ಯೆಗೈಯ್ಯಲಾಗಿದೆ. ಸದ್ಯಕ್ಕೆ ಆರು ಜನರನ್ನು ವಶಕ್ಕೆ ಪಡೆದು ತನಿಖೆ ಮಾಡಲಾಗುತ್ತಿದೆ. ವಶಕ್ಕೆ ಪಡೆದವರು ಅದೇ ಊರಿನವರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದ ಅವರು, ಅಷ್ಟೇ ಅಲ್ಲದೇ ಕೆಲವರು ದೂರ ಸಂಬಂಧಿಗಳು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದರು.

ವೈಯಕ್ತಿಕ ದ್ವೇಷಗಳಿಂದ ಗಲಾಟೆ ನಡೆದಿದೆ ಎಂದು ಗೊತ್ತಾಗಿದೆ. ಎರಡು ಮೂರು ದಿನಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿತ್ತು. ವಶಕ್ಕೆ ಪಡೆದ ಆರೋಪಿಗಳು 20 ರಿಂದ 25 ವರ್ಷದ ವಯಸ್ಸಿನವರಾಗಿದ್ದಾರೆ. ಎಲ್ಲರೂ ಎರಡು ಮೂರು ವರ್ಷಗಳಿಂದ ಜೊತೆಯಲ್ಲಿ ಓಡಾಡಿಕೊಂಡಿದ್ದ ಅವರು, ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರು, ಕೆಲವರು ಬೆಳಗಾವಿಯಲ್ಲಿ ರೂಮ್ ಮಾಡಿ ವಾಸವಿದ್ದರು ಎಂದರು.

ವೈಲೆಂಟ್ ಆಗಿರುವ ರೀಲ್ಸ್ ಮಾಡುತ್ತಿದ್ದರು ಎಂಬ ಮಾಹಿತಿ ಇದ್ದು ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಕೊಲೆಯಾದ ಮಹೇಶ್ ಮುರಾರಿ 2019ರಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯಾಗಿದ್ದ. ಕೊಲೆಗೂ ಮುನ್ನ ಕಾರದ ಪುಡಿ ಎರಚಿದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು‌ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು

. ಗುರುವಾರ ರಾತ್ರಿ 8.45 ರಿಂದ 9 ಗಂಟೆ ಮಧ್ಯೆ ಈ ಘಟನೆ ನಡೆದಿದ್ದು ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಲಾಗುತ್ತಿದೆ. ಕೊಲೆಯಾದ ಮಹೇಶ್ ಮುರಾರಿ ಗೋಕಾಕ್‌ನ ಟೈಗರ್ ಗ್ಯಾಂಗ್ ಜೊತೆ ಲಿಂಕ್ ಇದ್ದ ಬಗ್ಗೆ ತನಿಖೆಯೂ ನಡೆಯುತ್ತಿದೆ. ವಶಕ್ಕೆ ಪಡೆದ ಓರ್ವನನ್ನು ಪ್ರಕಾಶ್ ಪಾಟೀಲ್ ಹೆದರಿಸಿದ್ದ ಎಂಬ ಮಾಹಿತಿ ಇದೆ. ಪ್ರಕರಣದ ತನಿಖೆ ಮುಂದುವರಿಯುತ್ತಿದೆ ಎಂದು ಸ್ಪಷ್ಟಪಡಿಸಿದರು.

Read More Articles