ನೆರೆ ಸಂತ್ರಸ್ತರೊಂದಿಗೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು, ಸರಕಾರಕ್ಕೆ ಎಚ್ಚರಿಕೆ

ಅಥಣಿ : ತಾಲೂಕಿನ ಕೃಷ್ಣಾ ನದಿ ನೆರೆ ಸಂತ್ರಸ್ತರಿಗೆ ಇದೇ ಡಿ.19ರ ಒಳಗಾಗಿ ಹಕ್ಕುಪತ್ರ ನೀಡದಿದ್ದರೆ ನೆರೆ ಸಂತ್ರಸ್ತರೊಂದಿಗೆ ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವದು ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಸರಕಾರಕ್ಕೆ ಎಚ್ಚರಿಕೆ ನೀಡಿದರು.

promotions

ವರದಿಗೆ ಸ್ಪಂದಿಸಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ವಾಸವಿರುವ ನಾಗನೂರ ಪಿ.ಕೆ ಗ್ರಾಮದ 53 ಕುಟುಂಬಗಳಿಗೆ ಇಂದು ಸಂಜೆ ಆಹಾರ ಕಿಟ್ ವಿತರಿಸಿ ಮಾತನಾಡುತ್ತಾ ಕಳೆದ 18 ವರ್ಷಗಳಿಂದ ಮನೆ ಕಳೆದುಕೊಂಡು ನಿರ್ಗತಿಕರಾಗಿ ರಡ್ಡೇರಹಟ್ಟಿ ಗ್ರಾಮದಲ್ಲಿ ತಾತ್ಕಾಲಿಕ ಶೆಡ್ ಹೊಡೆದು ವಾಸವಿರುವ ಸಂತ್ರಸ್ತರಿಗೆ ಹಕ್ಕು ಪತ್ರ ವಿತರಣೆ ಮಾಡಿಲ್ಲ, ಮಳೆ ಬಂತೆಂದರೆ ಮಡ್ಡಿ ಬಸವಣ್ಣ ದೇವರ ಸಮುದಾಯ ಭವನದಲ್ಲಿ ಇವರ ವಾಸ ಅನಿವಾರ್ಯವಾಗಿದೆ.

promotions
ಪಡಿತರ ಆಹಾರ ತರಲು ರಡ್ಡೇರಹಟ್ಟಿಯಿಂದ ನಾಗನೂರ ಪಿ.ಕೆ ಗ್ರಾಮಕ್ಕೆ ಸುಮಾರು 5 ಕಿಮೀ ದೂರ ಪ್ರಯಾಣಿಸಬೇಕು. 15 ವರ್ಷಗಳ ಕಾಲ ಶಾಸಕರಾಗಿ ಮಂತ್ರಿಗಳಾಗಿ ಉಪಮುಖ್ಯಮಂತ್ರಿ ಹುದ್ಧೆ ಅಲಂಕರಿಸಿದ ಲಕ್ಷ್ಮಣ ಸವದಿಯವರ ಸ್ವಗ್ರಾಮದ ಸಂತ್ರಸ್ತರ ಗತಿ ಈ ರೀತಿಯಾದರೆ ಉಳಿದವರ ಪಾಡೇನು? ಶಾಸಕ ಮಹೇಶ ಕುಮಠಳ್ಳಿ ಸಾವಿರಾರು ಕೋಟಿ ಅನುದಾನ ತಂದಿರುವದಾಗಿ ಹೇಳುತ್ತಿದ್ದು, ಅದು ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.

ಇದೇ 19 ರೊಳಗೆ ನೆರೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡಿ ಮನೆ ನಿರ್ಮಿಸಿಕೊಡಬೇಕು ಇಲ್ಲದಿದ್ದರೆ, ನಾಗನೂರ.ಪಿ.ಕೆ ಗ್ರಾಮದಿಂದ ಬೆಳಗಾವಿ ಸುವರ್ಣಸೌದವರೆಗೆ ಸಂತ್ರರೊಂದಿಗೆ ಪಾದಯಾತ್ರೆ ಕೈಗೊಳ್ಳಲಾಗುವದು ಎಂದರು.

ಜಿಲ್ಲಾ ಕಾಂಗ್ರೆಸ್ ಕಿಸಾನ್ ಫಟಕದ ಅಧ್ಯಕ್ಷ ಶಿವು ಗುಡ್ಡಾಪುರ ಮಾತನಾಡಿ, ಮನೆಗೆದ್ದು ಮಾರುಗೆದ್ದ ಎಂಬ ನಾಣ್ಣುಡಿ ಇದೆ ಸ್ವಂತ ಊರಿನ ಜನರಿಗೆ ನ್ಯಾಯ ಒದಗಿಸುವಲ್ಲಿ ಲಕ್ಷ್ಮಣ ಸವದಿ ವಿಫಲರಾಗಿದ್ದು ಅವರಲ್ಲಿ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ ಎಂದರು.

ಈ ವೇಳೆ ಮುಖಂಡರಾದ ಸುನೀಲ ಸಂಕ, ಸಿದ್ಧಾರ್ಥ ಶಿಂಗೆ, ರಾವಸಾಬ ಐಹೊಳೆ, ಶ್ರೀಕಾಂತ ಪೂಜಾರಿ, ಭೀಮಪ್ಪ ಯಕ್ಕುಂಡಿ, ರಮೇಶ ಪವಾರ, ಬಸವರಾಜ ಬುಟಾಳಿ, ಶಂಕರ ಮಗದುಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
 

Read More Articles