ರಸ್ತೆ ದುರಸ್ತಿ ನೆಪದಲ್ಲಿ ಅಗೆದ ರಸ್ತೆ ಕ್ಯಾರೆ ಅನ್ನದ ಅಧಿಕಾರಿಗಳು
- Shivaraj Bandigi
- 15 Jan 2024 , 2:41 AM
- Belagavi
- 171
ಬೈಲಹೊಂಗಲ : ತಾಲೂಕಿನ ಮೇಕಲಮರಡಿ ಗ್ರಾಮದಿಂದ ವಣ್ಣೂರ ಗ್ರಾಮವನ್ನು ಸಂಪರ್ಕಿಸುವ ರಸ್ತೆಯನ್ನು ದುರಸ್ತಿ ನೆಪದಲ್ಲಿ ಅಗೆದು ಕಾಮಗಾರಿ ಕೈಗೊಂಡಿದ್ದು ರಸ್ತೆಯಲ್ಲಿ ಕೇವಲ ಜಲ್ಲಿಕಲ್ಲು ಹಾಕಿ ಬಿಡಲಾಗಿದೆ ಇದರಿಂದ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ.

ಕಳೆದ ಮೂರು ವರ್ಷಗಳಿಂದ ಯಾವುದೇ ದುರಸ್ತಿ ಕಾಣದೇ ತೆಗ್ಗು ದಿನ್ನೆಗಳಿಂದ ಕೂಡಿದ್ದ ಈ ರಸ್ತೆಗೆ ದುರಸ್ತಿ ಭಾಗ್ಯ ಸಿಕ್ಕಿತಾದರೂ ಗುತ್ತಿಗೆದಾರನ ಸಮಯೋಚಿತ ಕಾಮಗಾರಿ ಇಲ್ಲಿ ನಡೆಯುತ್ತಿಲ್ಲವೆಂದು ಗ್ರಾಮಸ್ಥರು ದೂರುತ್ತಿದ್ದಾರೆ. ಅಲ್ಲದೆ ಬೆಳಗಾವಿ- ಬಾಗಲಕೋಟೆ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಈ ರಸ್ತೆ ಕಾಮಗಾರಿ ನಡೆಯುತ್ತಿದ್ದ ಸುಮಾರು 8 ಕಿ.ಮೀ ರಸ್ತೆಯನ್ನು ಸಂಪೂರ್ಣವಾಗಿ ಅಗೆಯಲಾಗಿದೆ.

ಅರ್ಧದಷ್ಟು ರಸ್ತೆಯನ್ನು ಅಗೆದು ಕೇವಲ ಕಲ್ಲುಗಳನ್ನು ಹಾಕಿದ್ದರೆ ಇನ್ನರ್ಧದಷ್ಟು ರಸ್ತೆ ದೊಡ್ಡ ದೊಡ್ಡ ಕಲ್ಲುಗಳನ್ನು ಹಾಕಲಾಗಿದೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ಬೃಹತ ಗಾತ್ರದ ವಾಹನಗಳಿಂದ ದೂಳಿನ ಅಭಿಷೇಕ ಆಗುವದರ ಜೊತೆಗೆ ಕಲ್ಲಿನರಸ್ತೆಯ ಮೇಲೆ ಸುಮಾರು 8 ಕಿ.ಮೀ ಸಾಗಬೇಕಾದರೆ ಅರ್ಧ ಗಂಟೆ ಸಮಯ ಬೇಕಾಗುತ್ತಿದೆ. ರಸ್ತೆಗೆ ಸುರಿದ ಕಲ್ಲುಗಳನ್ನು ಸಮಾನಾಂತರ ಮಾಡುವ ಗೋಜಿಗೂ ಹೋಗದ ಗುತ್ತಿಗೆದಾರನಿಗೆ ವಾಹನ ಸವಾರರು, ಪಾದಚಾರಿಗಳು ಹಿಡಿಶಾಪ ಹಾಕುವಂತಾಗಿದೆ.
ಈ ರಸ್ತೆಯು ಬೈಲಹೊಂಗಲ ಮತ್ತು ಗೋಕಾಕ ನಗರವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದು, ಸಾಕಷ್ಟು ಜನ ಈ ರಸ್ತೆಯನ್ನೆ ಅವಲಂಬಿಸಿದ್ದಾರೆ ಅಲ್ಲದೆ ರಸ್ತೆಯ ಅಕ್ಕಪಕ್ಕದಲ್ಲಿ ಜಮೀನುಗಳಿದ್ದು ದನಕರುಗಳಿಗೂ ಸಹ ಈ ರಸ್ತೆಯಲ್ಲಿ ಸಂಚರಿಸಲು ಅಯೋಗ್ಯವಾಗಿದೆ.










