
ಮನ್ನಿಕೇರಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದ ಕೇಂದ್ರ ಸಚಿವರು
- shivaraj bandigi
- 14 Jan 2024 , 11:18 AM
- Belagavi
- 355
ಮೂಡಲಗಿ : ೨೦೨೦-೨೧ ಮತ್ತು ೨೦೨೧-೨೨ರ ಸಾಲಿನಲ್ಲಿ ರಾಷ್ಟçಮಟ್ಟದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅವಿಷ್ಕೃತ ಶೈಕ್ಷಣಿಕ ಚಟುವಟಿಕೆಗಳು ಮತ್ತು ಉತ್ತಮ ಶೈಕ್ಷಣಿಕ ಪ್ರಯೋಗಗಳನ್ನು ಶಾಲಾ ಹಂತದಲ್ಲಿ ಮಾಡಿರುವ ಸಾಧನೆಗಳಿಗಾಗಿ ವಲಯ ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಹಂತದ ಶಿಕ್ಷಣಾಧಿಕಾರಿಗಳಿಗೆ ನೀಡುವ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಮೂಡಲಗಿ ವಲಯ ಪಾತ್ರವಾಗಿದೆ.

ಮಂಗಳವಾರದಂದು ದೆಹಲಿಯ ಡಾ. ಬಿ.ಆರ್. ಅಂಬೇಡ್ಕರ ಅಂತರಾಷ್ಟ್ರೀಯ ಭೀಮ ಭವನದಲ್ಲಿ ಈ ರಾಷ್ಟ್ರೀಯ ಪುರಸ್ಕಾರವನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ ಅವರು ಮೂಡಲಗಿ ಬಿಇಓ ಎ.ಸಿ. ಮನ್ನಿಕೇರಿ ಅವರಿಗೆ ಪ್ರಧಾನ ಮಾಡಿದರು.

ದೇಶ ವ್ಯಾಪ್ತಿಯ ಜಿಲ್ಲಾ ಹಂತದ ಶಿಕ್ಷಣಾಧಿಕಾರಿಗಳು ಮತ್ತು ವಲಯ ಶಿಕ್ಷಣಾಧಿಕಾರಿಗಳಿಗೆ ನೀಡುವ ಪ್ರಶಸ್ತಿ ಇದಾಗಿದ್ದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ೧೦ ಸಾವಿರ ರೂ.ಗಳ ನಗದು ಪುರಸ್ಕಾರವನ್ನು ಈ ಪ್ರಶಸ್ತಿಯು ಹೊಂದಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಹಾಗೂ ಆಡಳಿತ ನೋಡಿಕೊಳ್ಳುತ್ತಿರುವ ರಾಷ್ಟ್ರೀಯ ಸಂಸ್ಥೆಯಾದ ನೀಪಾ ದಿಂದ ನೀಡಲಾಗುತ್ತಿದೆ.
ಕಳೆದ ೧೦ ವರ್ಷಗಳಿಂದ ಶೈಕ್ಷಣಿಕ ಚಟುವಟಿಕೆಗಳನ್ನು ಮುಂದುವರೆಸಿರುವುದು ಮತ್ತು ಸ್ಥಿರತೆಯನ್ನು ಕಾಪಾಡಿಕೊಂಡಿರುವುದಕ್ಕೆ ಈ ಬಾರಿಯೂ ಮತ್ತೇ ಮೂಡಲಗಿ ವಲಯವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಕೇಂದ್ರ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಸಂಜೀವಕುಮಾರ ಸೇರಿದಂತೆ ಹಲವು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎರಡು ದಿನಗಳವರೆಗೆ ನಡೆದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ದೇಶದ ೬೫ ಜನ ಜಿಲ್ಲಾ, ವಲಯ ಶಿಕ್ಷಣಾಧಿಕಾರಿಗಳು ಭಾಗಿಯಾಗಿದ್ದರು. ಇದರಲ್ಲಿ ಕರ್ನಾಟಕದಿಂದ ೬ ಜನರು ಭಾಗಿಯಾಗಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಪ್ರಶಸ್ತಿಯ ಆರಂಭದ ವರ್ಷವೇ ೨೦೧೩-೧೪ ರಲ್ಲಿ ಮೂಡಲಗಿ ಶೈಕ್ಷಣಿಕ ವಲಯವು ಈ ಪ್ರಶಸ್ತಿಗೆ ಪಾತ್ರವಾಗಿದ್ದು, ಅಂದಿನ ಮಾನವ ಅಭಿವೃದ್ಧಿ ಸಚಿವೆ ಸ್ಮೃತಿ ಇರಾಣಿ ಅವರು ಮನ್ನಿಕೇರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದನ್ನು ಸ್ಮರಿಸಬಹುದು.