ಹಿರಿಯ ಸಾಹಿತಿ ಆನಂದ ಹಣಮಂತಗಡ ಇನ್ನಿಲ್ಲ
- shivaraj bandigi
- 19 Jan 2024 , 6:25 PM
- Belagavi
- 488
ಬೈಲಹೊಂಗಲ : ಪಟ್ಟಣದ ಹೊಸೂರ ರಸ್ತೆಯ ನಿವಾಸಿ, ಹಿರಿಯ ಸಾಹಿತಿ, ಶಿಕ್ಷಣ, ಸಮಾಜ ಚಿಂತಕ ಆನಂದ ನರಸಿಂಹ ಹಣಮಂತಗಡ (೭೫) ಶುಕ್ರವಾರ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗ ಅಗಲಿದ್ದಾರೆ.

ಕನ್ನಡ ನಾಡಿನ ಸಾಹಿತ್ಯ ಲೋಕಕ್ಕೆ ತಮ್ಮದೆಯಾದ ಬರವಣಿಗೆ ಮೂಲಕ ಅಮೂಲ್ಯ ಕೊಡುಗೆ ನೀಡಿದ ಕೀರ್ತಿ ಸಾಹಿತಿ ಆನಂದ ಹಣಮಂತಗಡ ಅವರಿಗೆ ಸಲ್ಲುತ್ತದೆ. ಹಲವಾರು ಕೃತಿ, ಕಾದಂಬರಿ, ಕಥೆಗಳು ಸೇರಿದಂತೆ ನೂರಕ್ಕೂ ಹೆಚ್ಚು ಪುಸ್ತಕ ಬರೆದಿದ್ದಾರೆ. ಅತ್ಯುತ್ತಮ ಸಂಘಟಕರು, ಅಂಕಣ ಬರಹಗಾರರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷರಾಗಿದ್ದ ಇವರು ಹಲವಾರು ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ಹಣಮಂತಗಡ ಅವರು, ಮೇಧಾವಿ ಕವಿ, ಸಾಹಿತಿಗಳಾಗಿದ್ದರು. ಬೈಲಹೊಂಗಲ ನಾಡಿನ ಪ್ರತಿಷ್ಠಿತ ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿಯಿಂದ ಏರ್ಪಡಿಸಿದ್ಧ ರಾಜ್ಯಮಟ್ಟದ ಸಮ್ಮೇಳನದ ಅಧ್ಯಕ್ಷತೆಯನ್ನು ಆನಂದ ಹಣಮಂತಗಡ ವಹಿಸಿಕೊಂಡಿದ್ದರು. ನ್ಯಾಯಮೂರ್ತಿ ಸಂತೋಷ ಹೆಗಡೆ ಹಾಗೂ ನಾಡಿನ ಹೆಸರಾಂತ ಗಣ್ಯರು ಆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಆನoದ ಹಣಮಂತಗಡ ಅವರು ರಚಿಸಿದ ಕೃತಿಗಳು:
ಚಿತ್ತ ಚಿತ್ತಾರ ಕವನ ಸಂಕಲನ, ರೈತ ಧ್ವನಿ-೧ ಸಾಲಮನ್ನಾ ಪ್ರಶ್ನೆಯ ಪೂರ್ತಿ ವಿವರಗಳು, ರೈತ ಧ್ವನಿ-೨ ನಮ್ಮ ರೈತರ ಸಮಸ್ಯೆಗಳ ವಾಸ್ತವಾಂಶಗಳು, ರೈತ ಧ್ವನಿ-೩ ಸಾಲ ಮನ್ನಾಯೋಜನೆ, ವಿವರಣೆ ಟೀಕೆ ಟಿಪ್ಪಣೆ, ಕತ್ತಲು ಕರಗುವ ಸಮಯ
ಕವನಗಳು, ಗ್ರಾಮೀಣ ಜೀವನಾವಶ್ಯಕತೆಗಳ ಸಮೀಕ್ಷೆ ಹಾಗೂ ವರದಿ (ಗೆಳೆಯರ ಜೊತೆಗೆ),ಒಂದು ಗ್ರಾಮವಿಕಾಸದ ಮಾದರಿ ಅಣ್ಣಾ ಹಜಾರೆಯವರ ಕುರಿತು ಕಿರುಪುಸ್ತಕ, ಓದಲು ಕಲಿಯಿರಿ, ಕನ್ನಡ ಅಕ್ಷರ ಓದಲು ಕಲಿಸುವ ನೂತನ ವಿಧಾನ
ಜೀವ ವೈವಿಧ್ಯ ರಕ್ಷಣೆ, ಜೀವ ವೈವಿಧ್ಯ ಕುರಿತು ಸಮಗ್ರ ವಿವರಗಳು, ನಮ್ಮ ಬೆಳಕಿನಲ್ಲಿ ನಮ್ಮ ಬದುಕು, ಜೆ.ಕೃಷ್ಣಮೂರ್ತಿಯವರ ಬೋಧನೆಗಳ ಅಧ್ಯಯನ, ಹೆಜ್ಜೆ ಮೂಡದ ಹಾದಿಯಲ್ಲಿ, ಜೆ.ಕೃಷ್ಣಮೂರ್ತಿಯವರ ಬೊಧನೆಗಳ ಅಧ್ಯಯನ, ಕುಡಿತದಿಂದ ಬಿಡುಗಡೆ, ವ್ಯಸನಮುಕ್ತಿಗೆ ಪ್ರೇರಣಾತ್ಮಕ ಪುಸ್ತಕ, ತೆರೆದ ಬಾಗಿಲು, ಎಚ್.ಆಯ್.ವಿ.ಬಾಧಿತರಿಗೆ ವೀಣಾಧರಿಯವರ ವಿಧಾನದ ಬಾಗಿಲು, ಬನ್ನಿ ಇಂಗ್ಲೀಷನಲ್ಲಿ ಮಾತನಾಡೋಣ, ಇಪ್ಪತೈದು ವಾಕ ರಚನಾ ಮಾದರಿಗಳು, ಇಂಗ್ಲಿಷನಲ್ಲಿ ಮಾತನಾಡಲು ಕಲಿಯಿರಿ, ಕೀರ್ತಿಶೇಷ ಹ.ರಾ.ಕುಲಕರ್ಣಿ ನೇಗಿನಹಾಳ ಅವರ ಜ್ಞಾನ ಮಂಜರಿಯ ಸಂಗ್ರಹ ವ ಸಂಪಾದನೆ ಹೀಗೆ ಹತ್ತುಹಲವು ಕೃತಿಗಳನ್ನು, ಪುಸ್ತಕಗಳನ್ನು ಬರೆದಿದ್ದಾರೆ.
ತುಂಬಲಾರದ ನಷ್ಟ:
ನಾಡಿನ ಸಾಹಿತ್ಯ ಕ್ಷೇತ್ರದಲ್ಲಿ ಇವರ ಸೇವೆ ಅನನ್ಯವಾದುದು. ಇವರ ನಿಧನ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವೆಂದು ಮೂರುಸಾವಿರ ಮಠದ ಪ್ರಭುನೀಲಕಂಠ ಮಹಾಸ್ವಾಮೀಜಿ, ದೇವಿ ಆರಾಧಕ ಡಾ.ಮಹಾಂತೇಶ ಶಾಸ್ತ್ರೀ ಆರಾದ್ರಿಮಠ,, ಮಾಜಿ ಸಚಿವ ಶಿವಾನಂದ ಕೌಜಲಗಿ, ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಕೆಎಲ್‌ಇ ನಿರ್ದೇಶಕ ಡಾ.ವ್ಹಿ.ಎಸ್.ಸಾಧುನವರ, ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ತಾಲೂಕಾಧ್ಯಕ್ಷ ಎನ್.ಆರ್.ಠಕ್ಕಾಯಿ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಪುರಸಭೆ ಮಾಜಿ ಅಧ್ಯಕ್ಷ ಬಿ.ಎಂ.ಕುಡಸೋಮಣ್ಣವರ, ಕಲಾವಿದ ಸಿ.ಕೆ.ಮೆಕ್ಕೇದ, ಮಹಾಂತೇಶ ತುರಮರಿ, ಚಂದ್ರಯ್ಯ ಯರಗಟ್ಟಿಮಠ, ಮಡಿವಾಳಪ್ಪ ಹೋಟಿ, ಮೋಹನ ಪಾಟೀಲ, ಚಂದ್ರಶೇಖರ ಕೊಪ್ಪದ, ಸಾಹಿತಿಗಳಾದ ಈರಯ್ಯ ಕಿಲ್ಲೇದಾರ, ಅನ್ನಪೂರ್ಣಾ ಕನೋಜ, ಬಸವರಾಜ ಪುರಾಣಿಕಮಠ, ಸಂಗಮೇಶ ಕುಲಕರ್ಣಿ, ಶ್ರೀಶೈಲ ಹೆಬ್ಬಳಿ, ಮಲ್ಲಿಕಾರ್ಜುನ ಛಬ್ಬಿ ಹಾಗೂ ನಾಡಿನ ಸಾಹಿತಿಗಳು, ಕವಿಗಳು, ಜನಪ್ರತಿನಿಧಿಗಳು, ಸಮಾಜ ಚಿಂತಕರು, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ವಿವಿಧ ಕನ್ನಡಪರ ಸಂಘಟನೆಗಳು, ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ, ಕ್ರೀಡಾ ಮತ್ತು ಕಲಾವೇದಿಕೆ ಸೇರಿದಂತೆ ಹಲವಾರು ಸಂಘ, ಸಂಸ್ಥೆಗಳವರು ಸಂತಾಪ ಸೂಚಿಸಿದ್ದಾರೆ.
ವರದಿ: ರವಿಕಿರಣ್ ಯಾತಗೇರಿ










