ನಮಗೂ ರಾಜಕೀಯವಾಗಿ ಪ್ರತಿರೋಧ ನೀಡಲು ಗೊತ್ತಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ
- shivaraj B
- 11 Jul 2024 , 1:56 PM
- Mysuru
- 432
ಮೈಸೂರು : ಬಿಜೆಪಿಯವರು ರಾಜಕೀಯವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆ ಮಾತ್ರ ರಾಜಕೀಯ ಮಾಡಲು ಬರುತ್ತದೆಯೇ? ನಮಗೂ ರಾಜಕೀಯವಾಗಿ ಪ್ರತಿರೋಧ ನೀಡಲು ತಿಳಿದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಮೂಡಾ ಹಗರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿ.ವೈ.ವಿಜಯೇಂದ್ರ ಅವರು ಮೈಸೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುತ್ತಿರುವ ಬಗ್ಗೆ ಮೇಲಿನಂತೆ ಪ್ರತಿಕ್ರಿಯೆ ನೀಡಿದ ಅವರು ಜೆ.ಪಿ. ನಡ್ಡಾ ಅವರ ಅಧ್ಯಕ್ಷತೆಯಲ್ಲಿಯೇ ಪ್ರತಿಭಟನೆ ಮಾಡಲಿ. ಮೂಡಾ ಬಗ್ಗೆ ತನಿಖೆ ಈಗಾಗಲೇ ನಡೆಯುತ್ತಿದೆ ಎಂದರು.
ಕಾನೂನುಬಾಹಿರ ಎಂದಾದರೆ ದಾಖಲೆ ನೀಡಲಿ
ಬದಲಿ ನಿವೇಶನ ನೀಡಿರುವುದು ಕಾನೂನುಬದ್ಧವಾಗಿದೆ ಎನ್ನುವುದು ನಮ್ಮ ವಾದ. ಅವರು ಕಾನೂನುಬಾಹಿರವಾಗಿದೆ ಎಂದು ಹೇಳುತ್ತಾರೆ. ಹಾಗಿದ್ದರೆ ತೋರಿಸಲಿ ಎಂದು ಹೇಳಿದರು.
ಅಕ್ರಮವೇನಾಗಿದೆ
ಜಿಲ್ಲಾಧಿಕಾರಿಗಳು 2005 ರಲ್ಲಿ ಭೂ ಪರಿವರ್ತನೆ ಮಾಡಿದ್ದು ನಿವೇಶನ ಮಾಡುವ ಮುನ್ನ ಜಮೀನು ಕೃಷಿ ಭೂಮಿಯೇ. ಮಲ್ಲಿಕಾರ್ಜುನ ಸ್ವಾಮಿ ನನ್ನ ಭಾವಮೈದುನ. 2010 ರಲ್ಲಿ ದಾನಪತ್ರ ಕೊಟ್ಟಿದ್ದಾರೆ. ಇದರಲ್ಲಿ ಅಕ್ರಮವೇನಾಗಿದೆ ಎಂದರು.
ಮೂಡಾ ಸದಸ್ಯರೆಲ್ಲಾ ಏನು ಮಾಡುತ್ತಿದ್ದರು
ಕೃಷಿ ಭೂಮಿ ಎಂದು ಕೊಟ್ಟಿದ್ದರೂ ಕೂಡ ತಪ್ಪೇನು ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, 2014 ರಲ್ಲಿ ಮೂಡಾ ಜಮೀನು ಅಲ್ಲದೆ ಹೋದರೂ ಕೂಡ ನಿವೇಶನ ಮಾಡಿ ಹಂಚಿದ್ದಾರೆ. ಅದಕ್ಕೆ ನಾವು ಸುಮ್ಮನೆ ಬಿಡಬೇಕಾ. ಬದಲಿ ನಿವೇಶನ ಕೇಳಿದ್ದು ಇಂಥ ಜಾಗದಲ್ಲಿಯೇ ನಿವೇಶನ ಕೊಡಿ ಎಂದು ನಾವು ಕೇಳಿಲ್ಲ. ಆಗ ಮೂಡಾ ಸದಸ್ಯರೆಲ್ಲಾ ಏನು ಮಾಡುತ್ತಿದ್ದರು. ಬಿಜೆಪಿ ಸರ್ಕಾರವೇ ಇತ್ತು ಆಗ. ಕಾನೂನು ಪ್ರಕಾರ ನಮಗೆ ಬೇರೆ ಜಮೀನು ಕೊಡಬೇಕು. ಇದೇ ರೀತಿಯಲ್ಲಿ ಸುಂದರಮ್ಮ ಪ್ರಕರಣದಲ್ಲಿ ಅವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಉಚ್ಚ ನ್ಯಾಯಾಲಯ ಅಷ್ಟು ಜಾಗವನ್ನೂ ಕೊಡಲು ಆದೇಶಿಸಿ ಒಂದು ಲಕ್ಷ ರೂಪಾಯಿ ದಂಡವನ್ನೂ ಮೂಡಾಗೆ ಹಾಕಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೂಡಾ ತಪ್ಪು ಮಾಡಿದ್ದರೆ ಯಾರು ಜವಾಬ್ದಾರರು. ಸಿದ್ದರಾಮಯ್ಯ ಜವಾಬ್ದಾರರೇ? ಒಂದು ವೇಳೆ ಇದನ್ನು ರದ್ದು ಮಾಡಿದರೆ. ಭೂಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ನೀಡಬೇಕಲ್ಲವೇ. ಅದರ ಪ್ರಕಾರ 57 ಕೋಟಿಯಾದರೆ ಬಡ್ಡಿ ಸೇರಿಸಿ 62 ಕೋಟಿಯಾಗುತ್ತದೆ. ಮೂಡಾದವರು 62 ಕೋಟಿ ಕೊಡಬೇಕಾಗುತ್ತದೆ ಎಂದರು. 2021ರಲ್ಲಿ ನಾನು ವಿರೋಧ ಪಕ್ಷದ ನಾಯಕ ಇದ್ದೆ. ಆಗ ನಾನು ಹೇಳಿದ್ದನ್ನು ಕೇಳಿ ಮಾಡುತ್ತಿದ್ದರೆ ಎಂದು ಪ್ರಶ್ನಿಸಿದರು.










