ನಮ್ಮ ಆಯಾ ದಿನದ ಸಾಧನೆ ಮೆಲುಕು ಹಾಕುತ್ತಾ ಮುನ್ನಡೆಯಬೇಕು ; ಜಿಲ್ಲಾಧಿಕಾರಿ ನಿತೇಶ ಪಾಟೀಲ ಸಲಹೆ
- 15 Jan 2024 , 1:09 AM
- Belagavi
- 122
ಬೆಳಗಾವಿ : ನಾವು ಇಂದೇನು ಮಾಡಿದ್ದೇವೆಎಂಬ ಬಗ್ಗೆ ಆಯಾ ದಿನವೇ ನಮ್ಮ ಸಾಧನೆ ಮೆಲುಕು ಹಾಕುತ್ತಾ ಮುನ್ನಡೆಯಬೇಕು. ಅದರಿಂದ ನಮ್ಮ ಸುಧಾರಣೆ ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ಗಾಣಿಗ ನೌಕರರ ಶಿಕ್ಷಣ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ ಗಾಣಿಗ ಸಮಾಜದ ಪ್ರತಿಭೆಗಳ 15 ನೇ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಉತ್ತಮ ಸಾಧನೆ ಮಾಡುವ ಬಗ್ಗೆ ಆಯಾ ದಿನವೇ ನಮ್ಮಿಂದಾದ ಕೆಲಸಗಳ ಮೆಲುಕು ಹಾಕುತ್ತಿರಬೇಕು. ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು. ನನ್ನಿಂದ ಇಂದು ಏನು ಸಾಧನೆ ಸಾಧ್ಯವಾಯಿತು ಎಂದು ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇದರಿಂದ ಆತ್ಮವಿಶ್ವಾಸ ಗಳಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.
ಜೀವನದಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ. ಸಾಧನೆಯತ್ತ ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಬೇಕು. ಸಾಧನೆಯ ಪಥದಲ್ಲಿ ಮುನ್ನುಗ್ಗಿ ಕೀರ್ತಿವಂತರಾಗಿ ಎಂದು ಹೇಳಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪೋಷಕರು ಪ್ರೇರಣೆ ನೀಡಬೇಕು.ಇದರಿಂದ ಅವರು ಜೀವನದಲ್ಲಿ ಸಾಧನೆ ಮಾಡುತ್ತಾರೆ. ಪೋಷಕರು ಮಕ್ಕಳನ್ನು ಸೀಮಿತ ಕ್ಷೇತ್ರಕ್ಕೆ ಮಾತ್ರ ಅಣಿಗೊಳಿಸದೆ ಇತರ ಕ್ಷೇತ್ರಗಳಲ್ಲೂ ಅವರಿಗಿರುವ ಆಸಕ್ತಿಗೆ ಅನುಗುಣವಾಗಿ ಪ್ರೋತ್ಸಾಹ ನೀಡಬೇಕು. ಯಾವ ಕ್ಷೇತ್ರದಲ್ಲಿ ಅವರಿಗೆ ಆಸಕ್ತಿ ಇರುತ್ತದೋ ಆ ಕ್ಷೇತ್ರದಲ್ಲಿ ಮುನ್ನುಗ್ಗಲು ಪ್ರೇರೇಪಿಸಬೇಕು. ಅಂದಾಗ ಅವರು ಜೀವನದಲ್ಲಿ ಸಾಧನೆ ಮಾಡುತ್ತಾರೆ. ಮಕ್ಕಳಿಗೆ ಉತ್ತಮ ಸಾಧನೆ ಮಾಡುವ ಕೌಶಲ್ಯ ತುಂಬುವ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಪೋಷಕರಿಗೆ ಮಕ್ಕಳ ಬಗ್ಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಎಲ್ಲ ಪೋಷಕರು ಮಕ್ಕಳ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಶ್ರಮ ವಹಿಸಬೇಕು. ಇದರಿಂದ ಮಕ್ಕಳು ಜೀವನದಲ್ಲಿ ತಾವು ಇಟ್ಟುಕೊಂಡ ಗುರಿ ಸಾಧಿಸುವಲ್ಲಿ ಸಹಕಾರಿಯಾಗುತ್ತದೆ. ಮಕ್ಕಳ ಬೆಳವಣಿಗೆಯಲ್ಲಿ ಪ್ರತಿಯೊಬ್ಬ ಪೋಷಕರ ಪಾತ್ರ ಬಹಳ ಪ್ರಧಾನ ಆಗಿರುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ನ್ಯಾಯಾಧೀಶ ಉಲ್ಲಾಸ ಬಾಳೇಕುಂದ್ರಿ ಮಾತನಾಡಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರೊಂದಿಗೆ ನಮ್ಮ ಸಂಬಂಧ ಬಹಳ ಹಳೆಯದು. ಅವರು ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸಲ್ಲಿಸುತ್ತಿರುವ ಸೇವೆ ಮಾದರಿಯಾಗಿದೆ. ಪ್ರತಿಭಾ ಪುರಸ್ಕಾರ ಪಡೆದವರ ಜತೆ ಪುರಸ್ಕಾರ ಪಡೆಯದವರು ಸಹಾ ಯಾವುದೇ ಕಾರಣಕ್ಕೂ ನಿರಾಶರಾಗಬೇಕಿಲ್ಲ. ನಾನು ಕಡಿಮೆ ಅಂಕ ಪಡೆದು ನ್ಯಾಯಾಧೀಶನಾಗಿ ನನ್ನ ಸಾಮರ್ಥ್ಯ ತೋರಿಸಿದ್ದೆ. ನಮ್ಮ ಸಮಾಜದವರೇ ಆಗಿರುವ ಎಸ್.ಜಿ. ಬಾಳೆಕುಂದ್ರಿ ಅವರು ಎರಡನೇ ವಿಶ್ವೇಶ್ವರಯ್ಯ ಎಂದೇ ಪ್ರಸಿದ್ಧಿ ಪಡೆದವರು. ಈ ದಿಕ್ಕಿನಲ್ಲಿ ಅನೇಕರು ಸಾಧನೆ ಮಾಡಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳು ಕ್ರಿಯಾಶೀಲತೆ, ಪ್ರಾಮಾಣಿಕತೆ ಮುಂತಾದ ಅದರ್ಶ ಗುಣಗಳನ್ನು ಬೆಳೆಸಿಕೊಂಡರೆ ಜೀವನದಲ್ಲಿ ಯಾವುದೇ ಸಾಧನೆಯನ್ನು ಸಾಧ್ಯವಾಗಿಸಿಕೊಳ್ಳಬಹುದು ಎಂದು ಹೇಳಿದರು.
ಅಕ್ಷತಾ ನ್ಯಾಮಗೌಡರ ಪ್ರಾರ್ಥಿಸಿದರು. ಮಾರುತಿ ಮೂಡಲಗಿ ಸ್ವಾಗತಿಸಿದರು. ಬಾಲಚಂದ್ರ ಸವಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವರಾಯ ಏಳುಕೋಟಿ ಪರಿಚಯಿಸಿದರು. ಬಸವರಾಜ ನಾರಾಯಣಪುರ ವಂದಿಸಿದರು. ಸುನಿಲ ಹಲವಾಯಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಗಾಣಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.










