ಬೆಳಗಾವಿ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ - ಚೆಕ್ ಪೋಸ್ಟ್ ಗಳಲ್ಲಿ ಬಿಗಿ ಕ್ರಮ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಳಗಾವಿ: ಕಳೆದ ಒಂದು ವಾರದಲ್ಲಿ ಕರೋನಾ, ಒಮಿಕ್ರಾನ್ ಕೇಸ್ ಹೆಚ್ಚಾಗ್ತಿದೆ. ಮಹಾರಾಷ್ಟ್ರ ಅದರಲ್ಲಿಯೂ ಮುಂಬೈಯಲ್ಲಿ ಪ್ರಕರಣಗಳು ಹೆಚ್ಚುತ್ತಿದೆ. ಮುಂಬೈ ಮತ್ತು ಕರ್ನಾಟಕದ ವಹಿವಾಟು ಜಾಸ್ತಿಯಿರುವ ಕಾರಣ ಗಡಿಜಿಲ್ಲೆಗಳಲ್ಲಿ ಹೆಚ್ಚಿನ ಕಟ್ಟೆಚ್ಚರವನ್ನು ವಹಿಸಲು ಈಗಾಗಲೇ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Your Image Ad

ಎರಡು ಡೋಸ್ ಕಡ್ಡಾಯ ಲಸಿಕೆ ಹಾಗೂ ಆರ್ ಟಿಪಿಸಿಆರ್ ಪರೀಕ್ಷೆಯ ಪ್ರಮಾಣಪತ್ರ ಕಡ್ಡಾಯವಾಗಿ ಹೊಂದಿದವರಿಗೆ ಪ್ರವೇಶಕ್ಕೆ ಅನುಮತಿಸಲಾಗುವುದು. ಬೆಳಗಾವಿ ಚೆಕ್ ಪೋಸ್ಟ್ ಜೊತೆಗೆ ಅಕ್ಕಪಕ್ಕದ ಚೆಕ್ ಪೋಸ್ಟ್ಗಳನ್ನೂ ಬಿಗಿಗೊಳಿಸಲು ಸೂಚನೆ ನೀಡಲಾಗಿದೆ. ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ವಿಜಯಪುರ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಸುಮಾರು 11 ಚೆಕ್ ಪೋಸ್ಟ್ ಗಳನ್ನು ಮಾಡಲಾಗಿದೆ. ಬೆಳಗಾವಿಯಲ್ಲೂ ಚೆಕ್ ಪೋಸ್ಟ್ ಗಳನ್ನು ಮಾಡಲಾಗುವುದು. ಪ್ರಯಾಣಿಕರಿಗೆ ಸಣ್ಣಪ್ರಮಾಣದ ತೊಂದರೆಯಾದರೂ ಬೆಳಗಾವಿ ಜನರ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ತಿಳಿಸಿದರು.

Your Image Ad

ಲಸಿಕಾ ಅಭಿಯಾನ
ಜನವರಿ 3 ರಿಂದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

Your Image Ad

ಲಸಿಕಾಕರಣ ಕಾರ್ಯಕ್ರಮವನ್ನು ಯೋಜನಾಬದ್ಧವಾಗಿ ಶಿಸ್ತಿನಿಂದ ಕಾರ್ಯಗತಗೊಳಿಸಲು ಸೂಚನೆ ನೀಡಲಾಗಿದೆ. ಮಕ್ಕಳನ್ನು ಸುರಕ್ಷಾ ಚಕ್ರದೊಳಗೆ ತರುವ ಮಾನ್ಯ ಪ್ರಧಾನಮಂತ್ರಿಗಳ ಆಶಯದ ಈ ಕಾರ್ಯಕ್ರಮಕ್ಕೆ ಜನವರಿ 3 ರಂದು ಚಾಲನೆ ನೀಡಲಾಗುವುದು. ಜನವರಿ 10 ರಂದು ಕೊ -ಮಾರ್ಬಿಡಿಟಿ ಇರುವ ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟಿರುವ ವ್ಯಕ್ತಿಗಳಿಗೆ ಲಸಿಕಾಕರಣವನ್ನು ಮಾಡಲಾಗುವುದು ಎಂದು ತಿಳಿಸಿದರು.

ಕರೋನಾ ಎದುರಿಸಲು ಸಕಲ ಸಿದ್ಧತೆ: ಕರೋನಾ ವನ್ನು ನಿರ್ಬಂಧಿಸುವ ಜೊತೆಗೆ ಕರೋನಾವನ್ನು ಎದುರಿಸಲು ಸಿದ್ಧತೆಯನ್ನು ಮಾಡಿಕೊಳ್ಳಬೇಕಿದೆ. ಕಳೆದ ಬಾರಿ ಸಂಭವಿಸಿದ ಆಕ್ಸಿಜನ್ ಕೊರತೆಯನ್ನು ನೀಗಿಸಲು ಸಂಬಂಧಪಟ್ಟ ಆಕ್ಸಿಜನ್ ಸರಬರಾಜು ಕಂಪನಿಗಳೊಂದಿಗೆ ಸಂಯೋಜಿಸಿ ಸಮರ್ಪಕ ಆಕ್ಸಿಜನ್ ಪೂರೈಕೆಗೆ ಕ್ರಮ ವಹಿಸಲಾಗಿದೆ. ಜಿಲ್ಲಾ ಹಾಗು ತಾಲ್ಲೂಕು ಮಟ್ಟದಲ್ಲಿರುವ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲು ಮತ್ತು ಹೆಚ್ಚುವರಿ ಬೆಡ್, 4000 ಐಸಿಯುಗಳನ್ನು ಇಡೀ ರಾಜ್ಯದಲ್ಲಿ ಸಿದ್ಧಪಡಿಸಲು ಕ್ರಮ ವಹಿಸಲಾಗಿದೆ. ಸಮರ್ಪಕ ಔಷಧಿಪೂರೈಕೆಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ನೈಟ್ ಕರ್ಫ್ಯೂ ವಿಸ್ತರಣೆ ಬಗ್ಗೆ ಚರ್ಚಿಸಿ ತೀರ್ಮಾನ : ನೈಟ್ ಕರ್ಫ್ಯೂ ವಿಸ್ತರಣೆ ಬಗ್ಗೆ ಚರ್ಚಸಿ ತೀರ್ಮಾನ ಕೈಗೊಳ್ಳಲಾಗುವುದು. ಕರೋನಾ ಸ್ಥಿತಿಗತಿ, ಬೆಂಗಳೂರು ನಗರದಲ್ಲಿ ಕರೋನಾ ಬೆಳವಣಿಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಜನ ಮಾರ್ಗಸೂಚಿಗಳನ್ನು ಪಾಲಿಸದೇ ನಿರ್ಲಕ್ಷ್ಯ ವಹಿಸಿದರೆ ಲಾಕ್ ಡೌನ್ ಘೋಷಿಸುವ ಸಾಧ್ಯತೆಯ ಬಗ್ಗೆ ಪ್ರತಿಕ್ರಿಯಿಸಿ ಸರ್ಕಾರದ ನಿಲುವು ಬಹಳ ಸ್ಪಷ್ಟವಾಗಿದ್ದು, ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಜನರು ಇದನ್ನು ಕಡ್ಡಾಯವಾಗಿ ಪಾಲಿಸಿ ಸಹಕರಿಸುವ ಮೂಲಕ ಲಾಕ್ ಡೌನ್ ಹೇರುವ ಅನಿವಾರ್ಯ ಪರಿಸ್ಥಿತಿಯನ್ನು ಸೃಷ್ಟಿಸಬಾರದು. ಸಧ್ಯದಲ್ಲಿಯೇ ಕರೋನಾ ಸ್ಥಿತಿಗತಿಯನ್ನು ಪರಿಶೀಲಿಸಿ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

Read More Articles