ಕುಷ್ಠರೋಗ ನಿರ್ಮೂಲನೆಗೆ ಶ್ರಮಿಸಿ : ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಕರೆ
- 15 Jan 2024 , 12:22 AM
- Belagavi
- 227
ಬೆಳಗಾವಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದೊಂದಿಗೆ ಕುಷ್ಠಮುಕ್ತ ಭಾರತದ ಕಡೆಗೆ ಎಂಬ ಘೋಷಣೊಂದಿಗೆ ಹೆಚ್ಚು ಹೆಚ್ಚು ಜನರಿಗೆ ಕುಷ್ಠರೋಗದ ಬಗ್ಗೆ ಅರಿವುವನ್ನು ಮೂಡಿಸಬೇಕು. ಇದಲ್ಲದೇ ರೋಗ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಲಾದ “ಕುಷ್ಠರೋಗ ವಿರೋಧಿ ದಿನ” ನಿಮಿತ್ಯವಾಗಿ ಜನವರಿ 30 ರಿಂದ ಫೆಬ್ರವರಿ 13ರ ವರೆಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದೊಂದಿಗೆ ಕುಷ್ಠಮುಕ್ತ ಭಾರತದ ಕಡೆಗೆ ಎಂಬ ಘೋಷಣೆಯೊಂದಿಗೆ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ -2022 ಜಿಲ್ಲಾ ಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಭಿತ್ತಿ ಪತ್ರಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಈಗಾಗಲೇ ಪೊಲೀಯೋ ಮುಕ್ತ ಭಾರತ ಮಾಡಿದ್ದೇವೆ. ಅದೇ ರೀತಿ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಿ ಔಷಧಿಗಳನ್ನು ಕೊಟ್ಟರೆ, ಸಂಪೂರ್ಣವಾಗಿ ಬೆಳಗಾವಿ ಜಿಲ್ಲೆಯಲ್ಲಿ ಕೂಡ ಕುಷ್ಠರೋಗವನ್ನು ಸಂಪೂರ್ಣ ನಿವಾರಣೆ ಮಾಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಹಳಷ್ಟು ಒಳ್ಳೆಯ ಕೆಲಸ ಮಾಡುತ್ತಿದೆ. ಈಗಾಗಲೇ ಇಡೀ ರಾಜ್ಯದಲ್ಲಿ ಶೇ.100 ರಷ್ಟು ಲಸಿಕೆ ನೀಡಿದೆ ಮತ್ತು ಶೇ. 88 ರಷ್ಟು ಎರಡನೆ ಡೋಸ್ ನೀಡಿದೆ. ಆಶಾ ಕಾರ್ಯಕರ್ಯರು ಹಾಗೂ ವೈದ್ಯರು ಕೂಡಿಕೊಂಡು ಮುತವರ್ಜಿ ವಹಿಸಿ ಕೆಲಸ ಮಾಡಿದಾಗ ಎಲ್ಲರ ಆರೋಗ್ಯ ಕಾಪಾಡುವುದು ಸಾಧ್ಯ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಚಾಂದನಿ ದೇವಡಿ ಅವರು, "ಕುಷ್ಠರೋಗ ಒಂದು ಪ್ರಾಚೀನ ಕಾಲದ ರೋಗವಾಗಿದೆ. ಚಿಕಿತ್ಸೆ ಪಡೆಯದ ಕುಷ್ಠರೋಗಿಯು ಕೆಮ್ಮಿದಾಗ, ಸೀನಿದಾಗ ರೋಗಾಣುಗಳು ಗಾಳಿಯಲ್ಲಿ ಪಸರಿಸಿ ಉಸಿರಾಟದ ಮುಖಾಂತರ ಬೇರೆ ವ್ಯಕ್ತಿಯ ದೇಹದಲ್ಲಿ ಪ್ರವೇಶಿಸಿ ಆ ವ್ಯಕ್ತಿಯ ರೋಗನಿರೋಧಕ ಶಕ್ತಿ ಕಡಿಮೆಯಾದಾಗ ಅವನಿಗೂ ಕುಷ್ಠರೋಗ ಬರುತ್ತದೆ" ಎಂದು ಹೇಳಿದರು.
ರೋಗಿಗಳಲ್ಲಿ ಪಾದಗಳ ದೌರ್ಬಲ್ಯ, ಬೆರಳುಗಳ ದೌರ್ಬಲ್ಯ, ಕಣ್ಣು ಮುಚ್ಚುವಲ್ಲಿ ತೊಂದರೆ, ದೇಹದ ಮೇಲೆ ಸ್ಪರ್ಶಜ್ಞಾನವಿಲ್ಲದ ಮಚ್ಚೆಗಳು, ತ್ವಚೆಯ ಮೇಲೆ ಕೆಂಪಾದ ಬಾವು, ನೋವಿನಿಂದ ಕೂಡಿದ ಹಗ್ಗದ ಹಾಗೆ ಊದಿಕೊಂಡ ನರಗಳು ಇವುಗಳಲ್ಲಿ ಯಾವುದೇ ಚಿಹ್ನೆಗಳು ಕಂಡುಬಂದಲ್ಲಿ ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳಿ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆ ಉಚಿತವಾಗಿ ಲಭ್ಯವಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಶಿಕಾಂತ ಮುನ್ಯಾಳ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ.ಮಹೇಶ ಕಿವಡಸಣ್ಣನವರ, ಎ.ಡಿ.ಎಲ್.ಓ ಭರತ್ ಎಚ್.ಬಿ., ಕುಷ್ಟರೋಗ ಆಸ್ಪತ್ರೆ ಡಾ. ಸುರೇಶ ವರ್ಗಿಸ, ಪ್ರೊಗ್ರಾಮ್ ಮ್ಯಾನೇಜರ್ ಹರ್ಷಾ ಗುಡಸಲಮನಿ, ಟಿಎಚ್‍ಓ ಡಾ. ಉದಯ ಕುಡಚಿ ಮತ್ತಿತರರು ಉಪಸ್ಥಿತರಿದ್ದರು.
ಹಿರಿಯ ಆರೋಗ್ಯ ನಿರಿಕ್ಷಣಾಧಿಕಾರಿ ಸಿ.ಜಿ.ಅಗ್ನಿಹೋತ್ರಿ ಅವರು ನಿರೂಪಿಸಿದರು. ಟಿ.ಎಚ್.ಓ ಶಿವಾನಂದ ಮಾಸ್ತಿಹಳ್ಳಿ ವಂದಿಸಿದರು. ಸರಿತಾ ಸಾಣಿಕೊಪ್ಪ ಹಾಗೂ ಆಶಾ ಕಾರ್ಯಕರ್ತರು ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಕುಷ್ಠರೋಗ ಕುರಿತು ಜಾಗೃತಿ ಮೂಡಿಸುವ ಪ್ರಚಾರಸಾಮಗ್ರಿಗಳನ್ನು ಬಿಡುಗಡೆಗೊಳಿಸಿದರು.