ಎಲ್ಲವೂ ದುಡ್ಡಿನಿಂದ ಅಳಿವುದಲ್ಲ.. ಆತ್ಮಾವಲೋಕನ ವ್ಯವಹಾರಿಕವಲ್ಲ

ಆತ್ಮಸಾಕ್ಷಿ - ಆತ್ಮವಿಮರ್ಶೆ - ಆತ್ಮಾವಲೋಕನ - ಎಂದರೆ ಏನು ? ಅದಕ್ಕಿರುವ ಮಾನದಂಡಗಳೇನು ? ಅದನ್ನು ಸಾಧಿಸುವುದು ಹೇಗೆ ? ಅದಕ್ಕಾಗಿ ಅಧ್ಯಯನ ಚಿಂತನೆ ಜ್ಞಾನದ ಅವಶ್ಯಕತೆ ಇದೆಯೇ ?.

promotions

" ಎದೆಯ ದನಿಗೂ ಮಿಗಿಲಾದ ಶಾಸ್ತ್ರವಿವುದೇ " ಎಂದು ಕುವೆಂಪು ಅವರು, " ನಿನ್ನೊಂದಿಗೆ ನೀನು ಸದಾ ಮಾತನಾಡಿಕೋ " ಎಂದು ಸ್ವಾಮಿ ವಿವೇಕಾನಂದರು ಹೀಗೆ ವಿಶ್ವದ ಶ್ರೇಷ್ಠ ಚಿಂತಕರು ಆತ್ಮಾವಲೋಕನದ ಬಗ್ಗೆ ಸಾಕಷ್ಟು ಹೇಳಿದ್ದಾರೆ. ಬಹುಶಃ ನಾವೆಲ್ಲರೂ ಸರಿಯಾದ ಆತ್ನವಿಮರ್ಶೆ ಮಾಡಿಕೊಂಡು ಬದುಕು ರೂಪಿಸಿಕೊಂಡರೆ ಅಥವಾ ನಮ್ಮ ನಮ್ಮ ನಡವಳಿಕೆ ನಿಯಂತ್ರಿಸಿಕೊಂಡರೆ ನಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜೀವನ ಒಂದಷ್ಟು ಸಹನೀಯ ಆಗುವ ಎಲ್ಲಾ ಸಾಧ್ಯತೆಗಳು ಇದೆ.

promotions

ಹುಟ್ಟಿನಿಂದ ಸಾಯುವವರೆಗಿನ ಸಮಯವನ್ನೇ ಎಲ್ಲಾ ಜೀವರಾಶಿಗಳ ಬದುಕು ಅಥವಾ ಜೀವನ ಎಂದು ಸಹಜವಾಗಿ ಕರೆಯಲಾಗುತ್ತದೆ. ಈ ಅವಧಿಯಲ್ಲಿ ನಮ್ಮ ಬದುಕನ್ನು ಸುಖಮಯ ಅಥವಾ ಸಾರ್ಥಕ ಅಥವಾ ಹೆಚ್ಚು ನೆಮ್ಮದಿಯಿಂದ ಇರಲು ಅನುಸರಿಸಬೇಕಾದ ಹಲವಾರು ಮಾರ್ಗಗಳಲ್ಲಿ ಆತ್ಮವಿಮರ್ಶೆ ಸಹ ಮುಖ್ಯವಾದುದು.

promotions

ಆತ್ಮಾವಲೋಕನ ವ್ಯಾವಹಾರಿಕವಲ್ಲ, ಆಧ್ಯಾತ್ಮಿಕವಲ್ಲ, ವಿಜ್ಞಾನವೂ ಅಲ್ಲ ಅದು ಅತ್ಯಂತ ಸ್ವಾಭಾವಿಕ ಆಂತರ್ಯದ ಸ್ವಚ್ಛ ಮತ್ತು ಸ್ಪಟಿಕದಷ್ಟು ಶುಧ್ಧವಾದ ಒಂದು ಶೋಧನಾ ಕ್ರಿಯೆ. ಅದನ್ನು ಯಾವುದೇ ಜಾತಿ ಧರ್ಮ ಪ್ರದೇಶ ಮುಂತಾದ ಕಟ್ಟುಪಾಡುಗಳಿಗೆ ಒಳಪಡಿಸದೆ ಸೃಷ್ಟಿಯ ಮೂಲದಿಂದ ಪ್ರಾರಂಭಿಸಿಬೇಕು. ಆಗ ಅದಕ್ಕೆ ವಿಶಾಲ ವ್ಯಾಪ್ತಿ ದೊರೆಯುತ್ತದೆ ಮತ್ತು ಉತ್ತಮ ಫಲಿತಾಂಶ ಸಹ ನಿರೀಕ್ಷಿಸಬಹುದು.

ಸೃಷ್ಟಿಯ ಅಗಾಧತೆಯಲ್ಲಿ ನಾನು ಯಾರು, ನನ್ನ ಅಸ್ತಿತ್ವ ಏನು, ನನ್ನ ಮಹತ್ವ ಏನು, ನಾನಿರುವುದು ಎಲ್ಲಿ, ನನ್ನ ಸಂಬಂಧಗಳು ಯಾವುವು, ನನ್ನ ಸಮಾಜ ಯಾವುದು, ನನ್ನ ಮೇಲಿನ ನಿಯಂತ್ರಣ ವ್ಯವಸ್ಥೆ ಏನು, ನನಗಿರುವ ಅಧಿಕಾರ ಮತ್ತು ಸ್ವಾತಂತ್ರ್ಯ ಏನು, ನನ್ನ ಸುತ್ತಮುತ್ತಲಿನ ಜನರ ಸ್ವಭಾವ ಏನು, ನನ್ನ ಆಯಸ್ಸಿನ ಅಂದಾಜು ಏನು, ದೇಹ ಮತ್ತು ಮನಸ್ಸಿನ ಬೇಕು ಬೇಡಗಳು ಏನು, ಅದನ್ನು ಪೂರೈಸಿಕೊಳ್ಳುವ ದಾರಿಗಳು ಯಾವುವು, ಅದಕ್ಕೆ ಇರುವ ಅಡ್ಡಿ ಆತಂಕಗಳು ಏನು, ಭೌತಿಕ ಮತ್ತು ಅಭೌತಿಕ, ನೈತಿಕ ಮತ್ತು ಅನೈತಿಕ ವಿಷಯಗಳನ್ನು ಸಮಾಜ ಹೇಗೆ ವಿಂಗಡಿಸಿದೆ, ನನ್ನ ದೇಹ ಮತ್ತು ಮನಸ್ಸಿನ ಸಾಮರ್ಥ್ಯ ಏನು ಹೀಗೆ ಈಗಿನ ಪರಿಸ್ಥಿತಿಯಲ್ಲಿ ಸಾಧ್ಯವಿರುವ ಮತ್ತು ಅರಿವಿರುವ ಎಲ್ಲವನ್ನೂ ಸಂಪೂರ್ಣ ನಮ್ಮ ತಿಳಿವಳಿಕೆಯ ಮಿತಿಯಲ್ಲಿ ವಿಮರ್ಶೆಗೆ ಒಳಪಡಿಸಿಕೊಳ್ಳಬೇಕು.

ಆಗ ನಮಗೆ ಅರ್ಥವಾಗುವ ನಮ್ಮ ಗ್ರಹಿಕೆಗೆ ಸಿಗುವ ನಾನು ಎನ್ನುವ ವ್ಯಕ್ತಿತ್ವವನ್ನು ಬದುಕಿಗೆ ಅಳವಡಿಸಿಕೊಳ್ಳುವ ಕ್ರಿಯೆಯೇ ಆತ್ಮಾವಲೋಕನ.

ಇಲ್ಲಿ ಮತ್ತೊಂದು ಮೆಟ್ಟಿಲು ಹತ್ತಬೇಕಾಗುತ್ತದೆ. ಬದುಕೆಂದರೆ ಏನು. ನಾನು ಬದುಕುತ್ತಿರುವ ಸಮಾಜದಲ್ಲಿ ಬದುಕಿನ ಅರ್ಥವೇನು ? ಅದರ ಉದ್ದೇಶ - ಗುರಿ ಏನು ? ಬದುಕಿನ ಸಾರ್ಥಕತೆ ಹೇಗೆ ? ನನ್ನ ಕ್ರಿಯೆ - ಪ್ರತಿಕ್ರಿಯೆಗಳು ಹೇಗಿರಬೇಕು ? ಸೋಲು ಗೆಲುವುಗಳನ್ನು ಹೇಗೆ ಸ್ವೀಕರಿಸಬೇಕು. ಸಾವು ನೋವುಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ? ಯಶಸ್ಸು ಎಂದರೇನು ? ಯಾವುದು ಯಶಸ್ಸು ? ಸಮಾಜ ಯಾರನ್ನು ಗೌರವಿಸುತ್ತದೆ, ಯಾರನ್ನು ತಿರಸ್ಕರಿಸುತ್ತದೆ, ಯಾರನ್ನು ದ್ವೇಷಿಸುತ್ತದೆ ?

ಹೀಗೆ ಸಾಗುವ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಸಾಗುವುದೇ ಆತ್ಮವಿಮರ್ಶೆ.

ಹಾಗಾದರೆ ಆತ್ಮಾವಲೋಕನ ಇಷ್ಟೊಂದು ಕಠಿಣವೇ ? ಗೊಂದಲವೇ ಎಂದು ಅನಿಸಬಹುದು. ಇಲ್ಲ ಆತ್ಮವಿಮರ್ಶೆ ಶರಣಾಗತಿಯಲ್ಲ, ಮಹತ್ವಾಕಾಂಕ್ಷೆಯಲ್ಲ, ಅದು ಸಹಜ ಸ್ವಾಭಾವಿಕ ಅವಲೋಕನ. ನಮ್ಮ ‌ಬದುಕಿನ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವ ಒಂದು ಪ್ರಯತ್ನ. ಇದು ಇಲ್ಲದಿದ್ದರೂ ಬದುಕು ಸಾಗುತ್ತಲೇ ಇರುತ್ತದೆ. ಆದರೆ ‌ಆತ್ಮಾವಲೋಕನದಿಂದ ನಮ್ಮ ನೋವುಗಳು ಸಂಕಷ್ಟಗಳು ಕಡಿಮೆಯಾಗಿ ಬದುಕು ಭಾರವಾಗುವುದಿಲ್ಲ. ಉದ್ದೇಶಿತ ಗುರಿಗಳನ್ನು ತಲುಪಲು ಸುಲಭವಾಗುತ್ತದೆ. ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಯುತ್ತದೆ.

ಬಹುಮುಖ್ಯವಾಗಿ ಹೊರಗಿನ ಯಾರೋ ವ್ಯಕ್ತಿಗಳು ಅಥವಾ ಶಕ್ತಿಗಳು ಅಥವಾ ಸಿದ್ದಾಂತಗಳು ನಮ್ಮ ಮೇಲೆ ಕೆಟ್ಟ ಪ್ರಭಾವ ಬೀರಿ ( ಒಳ್ಳೆಯ ಪ್ರಭಾವ ಸ್ವೀಕಾರಾರ್ಹ ) ಅವುಗಳು ನಮ್ಮನ್ನು ನಿಯಂತ್ರಿಸುವ ಅಪಾಯದಿಂದ ನಮ್ಮನ್ನು ರಕ್ಷಿಸಿ ನಮ್ಮದೇ ಸ್ವಂತ ಯೋಚನಾ ಶಕ್ತಿಯಲ್ಲಿ ಬದುಕನ್ನು ರೂಪಿಸಿಕೊಳ್ಳಲು ಆತ್ಮಾವಲೋಕನ ಅತ್ಯವಶ್ಯಕವಾಗಿದೆ.

ಇದಕ್ಕಾಗಿ ನೀವು ಬಹುದೊಡ್ಡ ಅಧ್ಯಯನ ಮಾಡಬೇಕಾಗಿಲ್ಲ, ಶ್ರಮ ಪಡಬೇಕಾಗಿಲ್ಲ, ದೀರ್ಘ ಸಮಯ ವ್ಯರ್ಥಮಾಡಬೇಕಾಗಿಲ್ಲ, ಹಣ ಖರ್ಚು ಮಾಡಬೇಕಾಗಿಲ್ಲ, ಇನ್ನೊಬ್ಬರ ಮೇಲೆ ಅವಲಂಬಿತರಾಗಬೇಕಿಲ್ಲ.‌ ಕೇವಲ ಒಂದು ಪ್ರಶಾಂತ ಸ್ಥಳದಲ್ಲಿ ಸಮಯವಾದಾಗ ಒಂದಷ್ಟು ಏಕಾಗ್ರತೆಯಿಂದ ನೀವಿರುವ ಹಂತದಲ್ಲೇ ಸ್ವಲ್ಪ ಯೋಚಿಸಿದರೆ ಸಾಕು ಮತ್ತು ಇದನ್ನು ‌ಆಗಾಗ ಮಾಡುತ್ತಲೇ ಇರಬೇಕು.

ಆಗ ಖಂಡಿತ ನೀವು ಯಾವುದೇ ಕ್ಷೇತ್ರದಲ್ಲಿ ಇದ್ದರೂ ನಿಮ್ಮ ಜೀವನಮಟ್ಟ ಸುಧಾರಿಸುವ, ಸ್ವಲ್ಪ ಮಟ್ಟಿಗೆ ಏನನ್ನಾದರೂ ಸಾಧಿಸುವ ಅಥವಾ ಕನಿಷ್ಠ ನಿಮ್ಮ ಕಷ್ಟಗಳು ಮಾನಸಿಕವಾಗಿ ಕಡಿಮೆಯಾಗುವ ಎಲ್ಲಾ ಸಾಧ್ಯತೆ ಇದೆ.

ಯಾರೋ ಆಧ್ಯಾತ್ಮಿಕ ಗುರುಗಳು ಅಥವಾ ಕಾರ್ಪೊರೇಟ್ ಸಂಸ್ಥೆಗಳು ನಡೆಸುವ ವ್ಯಕ್ತಿತ್ವ ವಿಕಸನ ಶಿಬಿರಗಳು ಅಥವಾ ಧಾರ್ಮಿಕ ಆರ್ಥಿಕ ಶೈಕ್ಷಣಿಕ ದಲ್ಲಾಳಿಗಳ ಕೃತಕವಾದ ಮತ್ತು ಹಣ ನೀಡಿ ಪಡೆಯಬೇಕಾದ ಸಲಹೆ ಪರಿಹಾರಗಳಿಗಿಂತ ನಿಮ್ಮ ಅರಿವಿನ ಮಿತಿಯ ನಿಮ್ಮದೇ ಸ್ವಂತ ಆತ್ಮಾವಲೋಕನದಿಂದ ಸಿಗಬಹುದಾದ ಬದುಕಿನ ಹೊಳಹುಗಳು ಹೆಚ್ಚು ಅರ್ಥಪೂರ್ಣ, ಪರಿಣಾಮಕಾರಿ ಮತ್ತು ಸ್ವಾಭಾವಿಕ.

ಸಾಧ್ಯವಾದರೆ ದಯವಿಟ್ಟು ಆತ್ಮವಿಶ್ವಾಸದಿಂದ ಪ್ರಯತ್ನಿಸಿ. ಇಲ್ಲಿ ಕಳೆದುಕೊಳ್ಳುವುದು ಏನೂ ಇಲ್ಲ. ಎಲ್ಲವೂ ಪಡೆದುಕೊಳ್ಳವುದೇ ಆಗಿರುತ್ತದೆ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.

Read More Articles