
ಶೀಘ್ರವೇ ಸಿಇಟಿ ಪರೀಕ್ಷೆ ದಿನಾಂಕ ಪ್ರಕಟ, ಹೊಸ ವ್ಯವಸ್ಥೆ ಜಾರಿ
ಬೆಂಗಳೂರು : ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆ ದಿನಾಂಕಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಜತೆಗೆ ಹಾಲಿ ಇರುವ ವ್ಯವಸ್ಥೆಗೆ ಮತ್ತಷ್ಟು ಭದ್ರತಾ ಉಪಕ್ರಮಗಳನ್ನು ಅಳವಡಿಸುವ ಮೂಲಕ ಹೊಸ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಇಟಿ ಅರ್ಜಿ ಭರ್ತಿ ಮಾಡುವುದನ್ನು ಸರಳಗೊಳಿಸಲಾಗುವುದು.

ಗ್ರಾಮೀಣ ಭಾಗದವರು ಸೈಬರ್ ಕೇಂದ್ರಗಳಿಗೆ ಹೋಗದೇ ಮೊಬೈಲ್ ಮೂಲಕವೇ ಸಿಇಟಿ ಅರ್ಜಿ ಭರ್ತಿ ಮಾಡುವ ವ್ಯವಸ್ಥೆ. ಅಕ್ರಮಗಳಿಗೆ ಅವಕಾಶ ಇಲ್ಲದಂತೆ ಭದ್ರತಾ ಕ್ರಮಗಳನ್ನು ಸೇರಿಸಲಾಗುವುದು. ಸದ್ಯದಲ್ಲೇ ಹೊಸ ವ್ಯವಸ್ಥೆಗೆ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು.

ಒಮ್ಮೆ ನೋಂದಣಿ ಮಾಡಿದವರು ವಿವಿಧ ರೀತಿಯ ನೇಮಕಾತಿ ಪರೀಕ್ಷೆಗಳಿಗೆ ಪದೇ ಪದೇ ಅರ್ಜಿ ಭರ್ತಿ ಮಾಡುವ ಅಗತ್ಯ ಇರುವುದಿಲ್ಲ. ನಿರ್ದಿಷ್ಟ ಸಂಖ್ಯೆಯನ್ನು ನಮೂದಿಸುವುದರ ಮೂಲಕ ಪರೀಕ್ಷಾ ಶುಲ್ಕ ಕಟ್ಟಿ ಅರ್ಹತೆಯನ್ನು ಪಡೆಯಬಹುದು. ಇದು ಕೆಇಎ ಮಾಡಿರುವ ವಿನೂತನ ಕ್ರಮ ಎಂದು ಸಚಿವರು ವಿವರಿಸಿದರು. ಕೆಇಎನಲ್ಲಿ ಪ್ರವೇಶ ಮತ್ತು ನೇಮಕಾತಿ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿರುವ ಕಾರಣ ಸರ್ವರ್ ಮೇಲೆ ಒತ್ತಡ ಹೆಚ್ಚಿದೆ.
ಹೀಗಾಗಿ ಪ್ರತ್ಯೇಕವಾದಂತಹ ಸರ್ವರ್ ಹೊಂದುವ ಬಗ್ಗೆಯೂ ಚಿಂತನೆ ನಡೆದಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ನೇಮಕಾತಿ ಮತ್ತು ಪ್ರವೇಶ ಪರೀಕ್ಷೆಗಳ ಪ್ರತ್ಯೇಕ ವಿಭಾಗಗಳನ್ನು ತೆರೆಯುವ ಉದ್ದೆಶವೂ ಇದೆ ಎಂದು ಅವರು ಹೇಳಿದರು.
ಸಿಇಟಿ ಕೈಪಿಡಿ ಬಿಡುಗಡೆ:2025ನೇ ಸಾಲಿನ ಸಿಇಟಿ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡುವ ಸಿಇಟಿ ದಿಕ್ಸೂಚಿ ಕೈಪಿಡಿಯನ್ನೂ ಸಚಿವರು ಬಿಡುಗಡೆ ಮಾಡಿದರು. ಹನ್ನೆರಡು ಪುಟಗಳ ಕೈಪಿಡಿಯನ್ನು ಸರ್ಕಾರಿ, ಅನುದಾನಿತ, ನವೋದಯ ಮತ್ತು ಕೇಂದ್ರೀಯ ವಿದ್ಯಾಲಯಗಳ ಪಿಯುಸಿ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗುವುದು ಎಂದರು.