ರಾಜ್ಯದಲ್ಲಿ ಪ್ರಪ್ರಥಮವಾಗಿ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿಯಿಂದ ಮದ್ಯಸಾರ/ಇಥನಾಲ್ ಸ್ನಾತಕೋತ್ತರ ಕೋರ್ಸ್ ಪ್ರಾರಂಭ

ಬೆಳಗಾವಿ :ರಾಜ್ಯದಲ್ಲಿ‌ ಇಥನಾಲ್ ಉತ್ಪಾದನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳಿಗೆ ಪೂರಕವಾಗಿ ಶೈಕ್ಷಣಿಕ ಬಲವನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಬೆಳಗಾವಿಯ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಎಂ.ಎಸ್ಸಿ. (ಮದ್ಯಸಾರ ತಂತ್ರಜ್ಞಾನ) ಸ್ನಾತಕೋತ್ತರ ಕೋರ್ಸನ್ನು ಮಾನ್ಯ ಸಕ್ಕರೆ ಸಚಿವರಾದ ಶ್ರೀ ಶಂಕರ ಬಿ. ಪಾಟೀಲ ಮುನೇನಕೊಪ್ಪ ಅವರಿಂದು ಉದ್ಘಾಟಿಸಿದರು.

promotions

2022-23 ನೇ ಶೈಕ್ಷಣಿಕ ಸಾಲಿನಿಂದ 20 ವಿದ್ಯಾರ್ಥಿಗಳ ಪ್ರವೇಶಾತಿಯೊಂದಿಗೆ ಸದರಿ ಕೋರ್ಸನ್ನು ಪ್ರಾರಂಭಿಸಲಾಗಿದ್ದು, ಈಗಾಗಲೇ ಈ ಕೋರ್ಸಿಗೆ 14 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿರುತ್ತಾರೆ.

promotions

“ಈ ಕೋರ್ಸ್ ನಿಂದ ಇಥನಾಲ್ ಉತ್ಪಾದಿಸುವ ಘಟಕಗಳಿಗೆ ತಾಂತ್ರಿಕ ಕೌಶಲವುಳ್ಳ ಮಾನವ ಸಂಪನ್ಮೂಲಗಳನ್ನು ಪೂರೈಸಲು ಸಾಧ್ಯವಿದೆ. ಇದರ ಜೊತೆಗೆ ಇಥನಾಲ್ ಉತ್ಪಾದನೆಯಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಹಲವಾರು ಸಂಶೋಧನಾ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅವಶ್ಯವಿರುವ ಮಾನವ ಸಂಪನ್ಮೂಲಗಳನ್ನು ಸೃಷ್ಟಿಸಲು ಸಾಧ್ಯವಿದೆ” ಎಂದು ಸಚಿವರು ತಿಳಿಸಿದರು.

"ಇಥನಾಲ್ ಘಟಕಕ್ಕೆ ಅವಶ್ಯವಿರುವ ಸಂಶೋಧನೆ, ಅಭಿವೃದ್ಧಿ ಹಾಗೂ ಇತರ ತಾಂತ್ರಿಕ ವ್ಯವಸ್ಥೆಯನ್ನು ಕಲ್ಪಿಸುವುದು ಅವಶ್ಯವಿದೆ.‌ ಈ ಹಿನ್ನೆಲೆಯಲ್ಲಿ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿಯ ಆಡಳಿತ ಮಂಡಳಿ ಸಭೆಯಲ್ಲಿ ಎಂ.ಎಸ್ಸಿ. (ಮದ್ಯಸಾರ ತಂತ್ರಜ್ಞಾನ) ಸ್ನಾತಕೋತ್ತರ ಕೋರ್ಸನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ಇದರ ಸಂಯೋಜನೆಯಲ್ಲಿ ಪ್ರಾರಂಭಿಸಲು ತೀರ್ಮಾನಿಸಿ, ಸದರಿ ಕೋರ್ಸನ್ನು ಕಾರ್ಯಗತಗೊಳಿಸಲು ಅವಶ್ಯವಿರುವ ವಿಷಯ ಪಟ್ಟಿ, ಸರ್ಕಾರದ ಅನುಮತಿ, ವಿಶ್ವವಿದ್ಯಾಲಯದಲ್ಲಿರುವ ನಿಯಮಗಳನ್ನು ಪಾಲಿಸಿ ಸಂಯೋಜನಾ/ ಅನುಮತಿಯನ್ನು ಕೂಡಾ ಪಡೆಯಲಾಗಿದೆ. 

ಇನ್ನು ಮುಂದೆ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿಯಿಂದ ಮದ್ಯಸಾರ ಘಟಕಗಳನ್ನು ಹೊಂದಿರುವ ಸಕ್ಕರೆ ಉದ್ದಿಮೆಗೆ ಹಾಗೂ ಇತರರಿಗೆ ಅವಶ್ಯವಿರುವ ಸೇವೆಯನ್ನು ಒದಗಿಸಲು ಸಾಧ್ಯವಾಗಲಿದೆ ಎಂದು ಸಚಿವರು ತಿಳಿಸಿದರು.

ಕಬ್ಬು ಅಭಿವೃದ್ಧಿ ಆಯುಕ್ತರು ಹಾಗೂ ಸಕ್ಕರೆ ನಿರ್ದೇಶಕರಾದ ಶ್ರೀ ಶಿವಾನಂದ ಕಲಕೇರಿ, ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಅಶೋಕ ಪಾಟೀಲ್, ಆಡಳಿತ ಮಂಡಳಿ ಸದಸ್ಯರಾದ ಶ್ರೀ ವೆಂಕಟೇಶ ಬಿದರಿ, ಶ್ರೀ ಅಜೀತ ದೇಸಾಯಿ, ಶ್ರೀ ರಮೇಶ ಪಟ್ಟಣ, ಶ್ರೀ ಮಲ್ಲಿಕಾರ್ಜುನ ಹೆಗ್ಗಳಗಿ, ಇತ್ಯಾದಿ ಹಾಗೂ ಸಂಸ್ಥೆಯ ನಿರ್ದೇಶಕರಾದ ಡಾ|| ಆರ್. ಬಿ. ಖಾಂಡಗಾವೆ ಹಾಗೂ ಇತರರು ಉಪಸ್ಥಿತರಿದ್ದರು.

Read More Articles