ಪ್ರೀತಿ-ಶಿವಭಕ್ತಿಗೆ ಗಡಿ ಇರುವುದಿಲ್ಲ ನಟ ಕೋಲ್ಹೆ
- 15 Jan 2024 , 1:44 AM
- Belagavi
- 158
ಬೆಳಗಾವಿ: ಕರ್ನಾಟಕ ಹಾಗೂ ಮಹಾರಾಷ್ಟ್ರ ತಾಯಿ-ಚಿಕ್ಕಮ್ಮ ಇದ್ದಂತೆ. ಈ ಪ್ರದೇಶದಲ್ಲಿ ಇರುವ ಪ್ರತಿಯೊಬ್ಬರಿಗೆ ತಾಯಿ ಪ್ರೀತಿ ಇದ್ದಷ್ಟು ಚಿಕ್ಕಮ್ಮನ ಪ್ರೀತಿಯೂ ಸಿಗುತ್ತದೆ ಎಂದು ಖ್ಯಾತ ನಟ, ಮಹಾರಾಷ್ಟ್ರ ಸಂಸದ ಡಾ. ಅಮೋಲ್ ಕೋಲ್ಹೆ ಹೇಳಿದರು.
ಯಮಕನಮರಡಿ ಮತಕ್ಷೇತ್ರದ ಕಡೋಲಿ ಗ್ರಾಮದಲ್ಲಿ ಬಹುಜನ ಸಮಾಜ, ಕಡೋಲಿಯ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ಹಾಗೂ ಕಡೋಲಿ ಗ್ರಾಮ ಪಂಚಾಯತ್ ವತಿಯಿಂದ ಹಮ್ಮಿಕೊಂಡಿದ್ದ ಸ್ವರಾಜ ಸಂಕಲ್ಪ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರೀತಿ ಹಾಗೂ ಶಿವಭಕ್ತಿಗೆ ಗಡಿ ಇರುವುದಿಲ್ಲ. ಇಂಥ ಒಂದು ಬಾಂಧವ್ಯ, ಅನ್ಯೋನ್ಯತೆಯ ಪ್ರದೇಶ ಇದು. ಇವು ಗಡಿ ಮೀರಿ ವ್ಯಾಪಿಸಿಕೊಂಡಿವೆ. ಈ ಎರಡೂ ರಾಜ್ಯಗಳು ರಾಷ್ಟ್ರದ ಪ್ರತೀಕ. ಮಾತೃಭಾಷೆಯ ಅಭಿಮಾನ ಇರಬೇಕು. ಅದು ಅತಿರೇಕಕ್ಕೆ ಹೋಗಬಾರದು. ಎಲ್ಲರೂ ಪ್ರೀತಿ ಸಹಬಾಳ್ವೆಯಿಂದ ಭಾಷೆಯನ್ನು ಗೌರವಿಸಬೇಕು ಮತ್ತು ಪ್ರೀತಿಸಬೇಕೆಂದು ಸಲಹೆ ನೀಡಿದರು.
ಮಾತೃಭಾಷೆಯ ಮೇಲೆ ಪ್ರತಿಯೊಬ್ಬರಿಗೆ ಅಭಿಮಾನ ಹಾಗೂ ಪ್ರೀತಿ ಇರಬೇಕು. ಆದರೆ ಅನ್ಯ ಭಾಷೆಯನ್ನು ದ್ವೇಷಿಸುವ ಮನಸ್ಥಿತಿ ಇರಬಾರದು. ಜಾತಿ ಮತ್ತು ಧರ್ಮ ಎರಡೂ ಕಲ್ಲುಗಳಿದ್ದಂತೆ. ಈ ಕಲ್ಲಿನಿಂದ ಗೋಡೆ ಕಟ್ಟಿದರೆ ಪರಸ್ಪರ ಮನುಷ್ಯ ಪ್ರತೇಕವಾಗುತ್ತಾನೆ. ಇದೇ ಕಲ್ಲಿನಿಂದ ಸೇತುವೆ ನಿರ್ಮಿಸಿದರೆ ಪರಸ್ಪರರು ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಈ ಕಲ್ಲುಗಳನ್ನು ಯುವಕರು ಕೈ ಯಲ್ಲಿ ಕೊಟ್ಟು ಬೇರೆಯವರು ತಲೆ ಒಡೆಯಲು ಹೇಳಿ ದ್ವೇಷ ಭಾವನೆ ಹುಟ್ಟಿಸಿ ಪ್ರಚೋದಿಸುವ ಮನಸ್ಥಿತಿಯವರೂ ಇದ್ದಾರೆ. ಆದರೆ ಈ ಕಲ್ಲುಗಳನ್ನು ಮೂರ್ತಿಯಾಗಿ ಪರಿವರ್ತಿಸುವ ಮನಸ್ಥಿತಿ ನಮ್ಮದಾಗಬೇಕೆಂದು ಹೇಳಿದರು.
ನಾವೇಲ್ಲರೂ ದೇಶ ಮೊದಲು ಎಂಬ ಭಾವನೆಯಿಂದ ಇದ್ದೇವೆ. ಭಾರತೀಯ ಕ್ರಿಕೆಟ್ ತಂಡದಲ್ಲಿ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿ.ಎಸ್. ಲಕ್ಷ್ಮಣ್, ಮಹಮದ್ ಶಮ್ಮಿ ಹೀಗೆ ಅನೇಕ ಕ್ರೀಡಾಪಟುಗಳು ಆಡುವಾಗ ಅವರನ್ನು ನಾವು ಯಾವಾಗಲೂ ಒಂದು ರಾಜ್ಯ ಜಾತಿಗೆ ಸೀಮಿತಗೊಳಿಸುವುದಿಲ್ಲ. ಅವರ ಆಟವನ್ನು ಮೆಚ್ಚಿ, ಪ್ರತಿಯೊಬ್ಬ ಭಾರತೀಯರು ಹುರಿದುಂಬಿಸುತ್ತಾರೆ. ನಾವೆಲ್ಲರೂ ಭಾರತೀಯ ಎಂಬ ಭಾವನೆ ಇರುತ್ತದೆ. ಜಾತಿ, ಧರ್ಮ,ಭಾಷೆ ಹೆಸರಿನಲ್ಲಿ ಪ್ರತೇಕವಾಗುವ ಬದಲು ರಾಷ್ಟ ಮೊದಲು ಎಂಬ ಮನಸ್ಥಿತಿ ನಮ್ಮದಾಗಬೇಕು ಎಂದು ಕರೆ ನೀಡಿದರು.
ಛತ್ರಪತಿ ಶಿವಾಜಿ ಮಹಾರಾಜರನ್ನು 350 ವರ್ಷಗಳ ನಂತರವೂ ನಾವು ನೆನಪಿಸಿಕೊಳ್ಳುತ್ತೇವೆ. ಇನ್ನೂ ಅವರು ಜೀವಂತವಾಗಿ ಉಳಿದುಕೊಂಡಿದ್ದಾರೆ. ಜಗತ್ತಿನ ಯಾವ ಪ್ರದೇಶದಲ್ಲಿಯೂ ಶಿವಾಜಿ ಮಹಾರಾಜರಂತೆ ಪರಾಕ್ರಮಿ, ಧೈರ್ಯ ಶಾಲಿ ರಾಜನಿಲ್ಲ. ರಾಜನಾಗಿ ಜನಸಿಲ್ಲ. ಅವರು ಯಾರ ಬೆನ್ನಿಗೆ ಚೂರಿಹಾಕಿ ಸಾಮ್ರಾಜ ಕಟ್ಟಲಿಲ್ಲ. ರಾಜನಾಗಿ ಮೆರೆದು ಹಿಂದವಿ ಸ್ವಾರಾಜ ಸಂಕಲ್ಪ ಮಾಡಿದ ಮಹರಾಜ ನಮ್ಮ ಛತ್ರಪತಿ ಶಿವಾಜಿ ಮಹಾರಾಜರು. ದೇವರು ಇದ್ದಾನೋ ಇಲ್ಲವೋ ಗೊತ್ತಿಲ್ಲ. ಆದರೆ ಶಿವಾಜಿ ಮಹಾರಾರಲ್ಲಿಯ ಮಾನವೀಯತೆಯ ಕಾರ್ಯದಿಂದ ಅವರು ನಮ್ಮಲ್ಲಿ ದೇವರಾಗಿ ಉಳಿದುಕೊಂಡಿದ್ದಾರೆ. ಜಾತಿ, ಧರ್ಮ, ಭಾಷೆಕ್ಕಿಂತ ಅವರ ಕಾರ್ಯದಿಂದ ಅಜರಾಮರಾಗಿದ್ದಾರೆ ಎಂದು ಹೇಳಿದರು.
ಮನುಷ್ಯನಿಗಾಗಿ ಧರ್ಮ ಇಲ್ಲ. ಧರ್ಮಕ್ಕಗಿ ಮನುಷ್ಯ ಇದ್ದಾನೆ. ಮಾನವೀತೆಯ ಆಧಾರದ ಮೇಲೆ ಬದುಕಬೇಕು. ರಾಷ್ಟ್ರ ಜೀವಂತವಾಗಿದ್ದರೆ ನಾವೆಲ್ಲರೂ ಇರಲು ಸಾಧ್ಯ. ಮಣ್ಣು ಮಾತೆಯನ್ನು ಪ್ರೀತಿಸಬೇಕು. ಪ್ರಚೋದನೆ ಮಾಡುವುದುಕ್ಕಿಂತ ಬಾಂಧವ್ಯ, ಸೌಹಾರ್ದತೆ ಬೆಳೆಸಬೇಕು ಎಂದರು.
ಕಸಾಬಾ ನೂಲ ರಾಮನಾಥ ಗಿರಿ ಸಮಾಧಿ ಮಠದ ಶ್ರೀ ಭಗವಾನ್ ಗಿರಿ ಮಹರಾಜ ಮಾತನಾಡಿ, ತಾಯಿ ಜೀಜಾಮಾತಾ ಆಶೀರ್ವಾದದಿಂದ ಛತ್ರಪತಿ ಶಿವಾಜಿ ಮಹಾರಾಜರು ಹಿಂದವಿ ಸ್ವರಾಜ ಸ್ಥಾಪಿಸಿದರು. ಶಿವಾಜಿ ಮಹಾರಾಜರ ಧೈರ್ಯ, ಸ್ಥೈರ್ಯ ನಾವೆಲ್ಲರೂ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ದುರದುಂಡೀಶ್ವರ ವಿರಕ್ತಮಠದ ಶ್ರೀ ಗುರುಬಸವಲಿಂ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಭಾರತದಲ್ಲಿ ನಾವೆಲ್ಲ ಜನಿಸಿದ್ದೇ ಸುದೈವ. ಅನೇಕ ಧರ್ಮ, ಜಾತಿಗಳಿದ್ದರೂ ಅನ್ಯೋನ್ಯತೆಯಿಂದ ಬದುಕುತ್ತಿರುವುದು ಹೆಮ್ಮೆಯ ವಿಷಯ. ಭಾರತೀಯರಾದ ನಾವು ಧರ್ಮ ಸಹಿಷ್ಣುಗಳು. ಬದುಕಿನಲ್ಲಿ ನಾವೇನೂ ಗಳಿಸಿದರೂ ನಮ್ಮೊಂದಿಗೆ ಇರುವುದು ಧರ್ಮ ಮಾತ್ರ ಎಂದ ಅವರು, ಈ ಭಾಗದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವ ಶಾಸಕ ಸತೀಶ್ ಜಾರಕಿಹೊಳಿ ಹಾಗೂ ತಂದೆಯಂತೆಯ ಸಾಮಾಜಿಕ ಕಾರ್ಯದಲ್ಲಿ ತೊಡಗಿದ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡಿ ಎಂದು ಕರೆ ನೀಡಿದರು.
ಇದೇ ವೇಳೆ ಖ್ಯಾತ ನಟ, ಮಹಾರಾಷ್ಟ್ರ ಸಂಸದ ಡಾ. ಅಮೋಲ್ ಕೋಲ್ಹೆಅವರು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ, ಎಪಿಎಂಸಿ ಮಾಜಿ ಅಧ್ಯಕ್ಷ ಆನಂದ ಪಾಟೀಲ್, ಯುವ ಅಘಾಡಿ ಅಧ್ಯಕ್ಷ ಭಾವು ಗಡ್ಕರಿ, ಕಡೋಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ರಾಜು ಮೈನ್ನವರ, ರಾಜು ಮಾಯಣ್ಣಾ, ಮಾಜಿ ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ, ಅಣ್ಣು ಕಟಾಂಬಳೆ, ಮನೋಹರ ಹುಕ್ಕೇರಿಕರ್, ಸಾಗರ ಪಿಂಗಟ್, ನಾಗೇಶ ಪಾಟೀಲ್, ಮಲಗೌಡ ಪಾಟೀಲ್, ಸಂದೀಪ್ ಜಕ್ಕಾಣೆ, ಚಂದ್ರಕಾಂತ ದುಡುಮ್, ಸಿದ್ದರಾಯ ಗವಿ, ವಿಜಯ ಹೊನಮನೆ, ವೀರಭದ್ರ ಮುಂಗಾರಿ, ರಾಮಾ ಕಡೊಲಕರ್ ಸೇರಿದಂತೆ ನೂರಾರು ಮುಖಂಡರು ಸೇರಿದಂತೆ ಯಮಕನಮರಡಿ ಮತಕ್ಷೇತ್ರದ ಸಾವಿಸಾರು ಜನ ಉಪಸ್ಥಿತರಿದ್ದರು.