
ಎಚ್ಚರಿಕೆ: ಪಿಎಂ ಕುಸುಮ್ ಯೋಜನೆಯಡಿ ಹೆಚ್ಚಾದ್ ಸೈಬರ್ ವಂಚನೆ
ಬೆಂಗಳೂರು: ತಂತ್ರಜ್ಞಾನ ಮುಂದುವರಿಯುತ್ತಾ ಇದ್ದಂತೆ ಸೈಬರ್ ವಂಚನೆಯೂ ಹೆಚ್ಚುತ್ತಿದೆ. ಇದರಿಂದ ನಾನಾ ಕ್ಷೇತ್ರಗಳಲ್ಲಿ ಸಾವಿರಾರು ಜನರು ತಮ್ಮ ಹಣ ಕಳೆದುಕೊಳ್ಳುತ್ತಿದ್ದು, ಈಗ ರೈತರೂ ಈ ವಂಚನೆಗೆ ಗುರಿಯಾಗುತ್ತಿದ್ದಾರೆ. ಸೈಬರ್ ಅಪರಾಧಿಗಳು ಪಿಎಂ ಕುಸುಮ್ ಯೋಜನೆ ಹೆಸರಿನಲ್ಲಿ ರೈತರನ್ನು ಟಾರ್ಗೆಟ್ ಮಾಡುತ್ತಿದ್ದಾರೆ.

ಪಿಎಂ ಕುಸುಮ್ ಯೋಜನೆ ಅಡಿಯಲ್ಲಿ ರೈತರಿಗೆ ಸೌರ ಪಂಪ್ ಸೆಟ್‌ಗಳನ್ನು ನೀಡಲಾಗುತ್ತಿದ್ದು, ರೈತರು ಈ ಯೋಜನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಹಾಕುತ್ತಿದ್ದಾರೆ.

ಈ ಸಂದರ್ಭವನ್ನು ಬಳಸಿಕೊಂಡು ಸೈಬರ್ ಕಳ್ಳರು ಕರ್ನಾಟಕ ನವೀಕರಿಸಬಹುದಾದ ಇಂಧನ ಮತ್ತು ಅಭಿವೃದ್ಧಿ ಲಿಮಿಟೆಡ್ (ಕೆಆರ್‌ಇಡಿಎಲ್) ಅಧಿಕಾರಿಗಳೆಂದು ತಮ್ಮನ್ನು ಪರಿಚಯಿಸಿ ರೈತರಿಗೆ ಕರೆ ಮಾಡುತ್ತಿದ್ದಾರೆ. ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ ಹಣ ಪಾವತಿಸಲು ಒತ್ತಾಯಿಸುತ್ತಿದ್ದಾರೆ. ಫೇಸ್ಬುಕ್ ಹಾಗೂ ಯೂಟ್ಯೂಬ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವಿಡಿಯೋಗಳನ್ನು ಹರಿ ಬಿಡುತ್ತಿದ್ದಾರೆ.
ಇದನ್ನು ನಂಬಿದ ರೈತರು ಲಕ್ಷಾಂತರ ರೂ. ಕಳೆದುಕೊಳ್ಳುತ್ತಿದ್ದಾರೆ. ಕೆಆರ್‌ಇಡಿಎಲ್ ರೈತರಲ್ಲಿ ಜಾಗೃತಿ ಮೂಡಿಸಿ, ಈ ವಂಚನೆಗಳ ಬಲೆಗೆ ಬೀಳದಂತೆ ಎಚ್ಚರಿಕೆ ನೀಡುತ್ತಿದೆ.
ಕೆಆರ್‌ಇಡಿಎಲ್ ಲೋಗೋದ ದುರ್ಬಳಕೆ
ಸೈಬರ್ ಕಳ್ಳರು ಕೆಆರ್‌ಇಡಿಎಲ್ ಲೋಗೋ ಬಳಸಿಕೊಂಡು ನಕಲಿ ವೆಬ್‌ಸೈಟ್‌ಗಳನ್ನು ರಚಿಸಿ, ರೈತರೊಂದಿಗೆ ನೇರ ಸಂಪರ್ಕ ಮಾಡಿಕೊಂಡು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.
ರಾಯಚೂರಿನ ರೈತರೊಬ್ಬರು ಈ ವಂಚನೆಗೆ ಬಲಿಯಾಗಿದ್ದು, ₹25,000 ಕಳೆದುಕೊಂಡಿದ್ದಾರೆ. ಈ ರೀತಿಯ ಘಟನೆಗಳು ಸರ್ಕಾರದ ಯೋಜನೆಗಳ ಹೆಸರಿನಲ್ಲಿ ರೈತರಿಗೆ ಮೋಸ ನಡೆಯುತ್ತಿರುವುದನ್ನು ತೋರಿಸುತ್ತವೆ.
ವಂಚನೆ ಹೇಗೆ ನಡೆಯುತ್ತದೆ?:
1.ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಪ್ರಚಾರ:
ಸೈಬರ್ ವಂಚಕರು ಮೊದಲು ಫೇಸ್ಬುಕ್ ಅಥವಾ ಯೂಟ್ಯೂಬ್‌ನಲ್ಲಿ ಸುಳ್ಳು ವಿಡಿಯೋವನ್ನು ಹರಿಬಿಡುತ್ತಾರೆ. ಈ ವೀಡಿಯೋದಲ್ಲಿ ₹5.50 ಲಕ್ಷ ಮೌಲ್ಯದ ಸೋಲಾರ್ ಪಂಪ್‌ಸೆಟ್‌ಗೆ ₹2 ಲಕ್ಷ ಸಬ್ಸಿಡಿ ನೀಡಲಾಗುತ್ತಿದೆ ಎಂದು ಘೋಷಿಸುತ್ತಾರೆ. ಜೊತೆಗೆ ಕರೆ ಮಾಡಲು ಒಂದು ನಂಬರ್ ನೀಡುತ್ತಾರೆ.
2.ಕರೆಮಾಡಿದ ರೈತರಿಗೆ ಸುಳ್ಳು ಮಾಹಿತಿಯೊಂದಿಗೆ ವಂಚನೆ:
ಈ ಜಾಹೀರಾತು ನೋಡಿ ಸಂಪರ್ಕಿಸಿರುವ ರೈತರಿಗೆ ವಂಚಕರು “ನಾನು 15 ವರ್ಷಗಳಿಂದ ಈ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇನೆ” ಎಂದು ಹೇಳುತ್ತಾ, ಯೋಜನೆಯ ಬಗ್ಗೆ ನಂಬಿಸುವ ಮಾಹಿತಿಯನ್ನು ನೀಡುತ್ತಾರೆ.
3.ವೈಯಕ್ತಿಕ ಮಾಹಿತಿ ಕಳಿಸುವಂತೆ ಒತ್ತಾಯ:
ರೈತರ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಖಾತೆ ವಿವರ, ಹಾಗೂ ಫೋಟೋಗಳನ್ನು ವಾಟ್ಸಾಪ್ ಮೂಲಕ ಕಳುಹಿಸಿಕೊಳ್ಳುತ್ತಾರೆ.
4.ಹಣ ಪಾವತಿಸಲು ಒತ್ತಾಯ:
ರಿಜಿಸ್ಟ್ರೇಶನ್ ಶುಲ್ಕ,ಜಿಎಸ್‌ಟಿ ಚಾರ್ಜ್,ಸಾರಿಗೆವೆಚ್ಚ ಎಂಬ ನೆಪಗಳಲ್ಲಿ ರೈತರಿಂದ ಹಣ ಪಾವತಿಸಲು ಒತ್ತಾಯಿಸುತ್ತಾರೆ. ನಂಬಿರುವ ರೈತರು ವಂಚಕರ ನೀಡಿದ ನಂಬರ್‌ಗೆ ಡಿಜಿಟಲ್ ಪಾವತಿ ಮಾಡುತ್ತಾರೆ.
5.ಮತ್ತೆ ಮತ್ತೆ ಹಣ ಕೇಳುವುದು:ಮೊದಲ ಪಾವತಿಯ ನಂತರ, ಮತ್ತಷ್ಟು ನೆಪಗಳನ್ನು ನೀಡಿ ಮತ್ತೆ ಹಣ ಕೇಳಲು ಆರಂಭಿಸುತ್ತಾರೆ. ಈ ರೀತಿಯಾಗಿ ವಂಚನೆ ಮುಂದುವರಿಸುತ್ತಾರೆ.
ರೈತರು ಪಿಎಂ ಕುಸುಮ್ ಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ಮಾತ್ರ ಅಧಿಕೃತ ವೆಬ್‌ಸೈಟ್‌ನಲ್ಲಿ ಪಡೆಯಬೇಕು. ಇಂತಹ ಸುಳ್ಳು ಪ್ರಯತ್ನಗಳಿಗೆ ಬಲಿಯಾಗಬಾರದು.
ರುದ್ರಪ್ಪಯ್ಯ, ಮ್ಯಾನೇಜಿಂಗ್ ಡೈರೆಕ್ಟರ್, ಕೆಆರ್‌ಇಡಿಎಲ್
ರೈತರು ಈ ಕಾರಣಕ್ಕಾಗಿ ಎಚ್ಚರಿಕೆಯಿಂದಿರಬೇಕು:
ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ಅಧಿಕೃತ ವೆಬ್‌ಸೈಟ್‌ಗಳನ್ನು ಮಾತ್ರ ಬಳಸಬೇಕು.
ವೈಯಕ್ತಿಕ ಅಥವಾ ಆರ್ಥಿಕ ವಿವರಗಳನ್ನು ಫೋನ್ ಅಥವಾ ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಬಾರದು.
ಅನುಮಾನಾಸ್ಪದ ಕರೆ, ಸಂದೇಶ, ಅಥವಾ ವೆಬ್‌ಸೈಟ್‌ಗಳನ್ನು ತಕ್ಷಣವೇ ಅಧಿಕಾರಿಗಳಿಗೆ ವರದಿ ಮಾಡಬೇಕು.