ಅಂತರ್ ರಾಜ್ಯ ಗಡಿ ಚೆಕ್ ಪೋಸ್ಟ್ ಗಳಿಗೆ ಜಿಲ್ಲಾಧಿಕಾರಿ ಭೇಟಿ
- 15 Jan 2024 , 12:24 AM
- Belagavi
- 117
ಬೆಳಗಾವಿ :ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನೆರೆಯ ರಾಜ್ಯದಿಂದ ಆಗಮಿಸುವ ಪ್ರಯಾಣಿಕರಿಗೆ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಅಂತರ್ ರಾಜ್ಯ ಗಡಿ ಚೆಕ್ ಪೋಸ್ಟ್ ಗಳಲ್ಲಿ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಸೂಚನೆ ನೀಡಿದ್ದಾರೆ.
ಕೊಗನೊಳ್ಳಿ ಸೇರಿದಂತೆ ಜಿಲ್ಲೆಯ ವಿವಿಧ ಕಡೆಯ ಅಂತರ್ ರಾಜ್ಯ ಗಡಿ ಚೆಕ್ ಪೋಸ್ಟ್ ಗಳಿಗೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಈ ಸೂಚನೆ ನೀಡಿದರು.
ಜಿಲ್ಲೆಯ ಮೂಲಕ ರಾಜ್ಯವನ್ನು ಪ್ರವೇಶಿಸುವವರು ಕಡ್ಡಾಯವಾಗಿ 72 ಗಂಟೆಗಳ ಪೂರ್ವದ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿಯನ್ನು ಹೊಂದಿರಬೇಕು. ಈ ರೀತಿಯ ವರದಿಯನ್ನು ಹೊಂದಿರದ ಪ್ರಯಾಣಿಕರಿಗೆ ಪ್ರವೇಶಕ್ಕೆ ಅವಕಾಶವನ್ನು ನೀಡಬಾರದು ಎಂದು ತಿಳಿಸಿದರು.
ತುರ್ತು ಕೆಲಸಗಳು ಮತ್ತಿತರ ಕಾರಣಕ್ಕೆ ನೆರೆಯ ರಾಜ್ಯಕ್ಕೆ ತೆರಳಿರುವ ರಾಜ್ಯದ ಗಡಿಭಾಗದ ಜನರು ಒಂದು ವೇಳೆ ಆರ್‌ಟಿಪಿಸಿಆರ್ ವರದಿ ಹೊಂದಿರದಿದ್ದರೆ ಅಂತಹವರಿಗೆ ಗಡಿ ಚೆಕ್ ಪೋಸ್ಟ್ ಗಳಲ್ಲಿ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್(ರ್ಯಾಟ್) ಮಾಡಿಸಿದ ಬಳಿಕವೇ ಜಿಲ್ಲೆಯ ಪ್ರವೇಶಕ್ಕೆ ಅನುಮತಿಯನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಕೋವಿಡ್ ಹಾಗೂ ಓಮಿಕ್ರಾನ್ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಸರಕಾರದ ಮಾರ್ಗಸೂಚಿಯ ಪ್ರಕಾರವೇ ಅಂತರ್ ರಾಜ್ಯ ಪ್ರಯಾಣಿಕರ ಪ್ರವೇಶಕ್ಕೆ ಅವಕಾಶ ನೀಡಬೇಕು.
ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ ನಿಯೋಜಿಸಲಾಗಿರುವ ಕಂದಾಯ, ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ತಂಡಗಳು ಜಾಗ್ರತೆಯಿಂದ ಕಾರ್ಯನಿರ್ವಹಿಸಬೇಕು. ಸರಕಾರದ ಮಾರ್ಗಸೂಚಿ ಪ್ರಕಾರ ಪ್ರಯಾಣಿಕರ ತಪಾಸಣೆ ನಡೆಸಬೇಕು. ಇದಕ್ಕೆ ಸಂಬಂಧಿಸಿದಂತೆ ನಿಗದಿತ ನಮೂನೆಯಲ್ಲಿ ಸೂಕ್ತ ದಾಖಲೆಗಳನ್ನು ಕೂಡ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.
ಕರ್ನಾಟಕ - ಮಹಾರಾಷ್ಟ್ರ ರಾಜ್ಯದ ಗಡಿಭಾಗದಲ್ಲಿರುವ ಕೊಗನೊಳ್ಳಿ ಚೆಕ್ ಪೋಸ್ಟ್, ಕಾಗವಾಡ ಚೆಕ್ ಪೋಸ್ಟ್, ನಿಪ್ಪಾಣಿ ಶಹರದ ಚೆಕ್ ಪೋಸ್ಟ್, ಮಂಗಸೂಳಿ ಮತ್ತು ಅಥಣಿ ತಾಲ್ಲೂಕಿನ ಬಳ್ಳಿಗೇರಿ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಅಂರ್ ರಾಜ್ಯ ಪ್ರಯಾಣಿಕರ ತಪಾಸಣಾ ಪ್ರಕ್ರಿಯೆಯನ್ನು ಖುದ್ದಾಗಿ ಪರಿಶೀಲಿಸಿದರು.
ಸರಕಾರದ ಮಾರ್ಗಸೂಚಿಗಳನ್ನು ಪ್ರಯಾಣಿಕರಿಗೆ ಮನದಟ್ಟು ಮಾಡುವ ಮೂಲಕ ತಪಾಸಣೆಯನ್ನು ಕಟ್ಟುನಿಟ್ಟಾಗಿ ಮಾಡಬೇಕು ಎಂದು ತಿಳಿಸಿದರು. ನಿಪ್ಪಾಣಿ, ಕಾಗವಾಡ, ಅಥಣಿ ಸೇರಿದಂತೆ ಆಯಾ ತಾಲ್ಲೂಕುಗಳ ತಹಶೀಲ್ದಾರರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.