ರಷ್ಯಾ, ಉಕ್ರೇನ್ ಕಾಳಗ ಮೂರನೇ ಮಹಾಯುದ್ದದ ಮುನ್ಸೂಚನೆಯೇ..?

  • 15 Jan 2024 , 2:49 AM
  • world
  • 71
ಕೊನೆಗೂ ನಮ್ಮ ಕಣ್ಣ ಮುಂದೆಯೇ ‌ಯುದ್ದವೊಂದು ಪ್ರಾರಂಭವಾಗಿಯೇ ಹೋಯಿತು.

Your Image Ad

ಕಾರಣಗಳೇನು ಇದ್ದೇ ಇರುತ್ತದೆ ಎಲ್ಲದಕ್ಕೂ ಆದರೆ ಪರಿಣಾಮಗಳು ಮಾತ್ರ ಭಯಂಕರ.

Your Image Ad

ಯುದ್ದವೆಂಬುದು ಒಂದು ವಿಡಿಯೋ ಗೇಮ್ ಅಲ್ಲ ಅಥವಾ ಧಾರವಾಹಿ - ಚಲನಚಿತ್ರವಲ್ಲ. ಅದೊಂದು ಭೂಮಂಡಲದ ಮಾನವಕುಲದ ಪ್ರಕೃತಿಯ ಮೇಲಿನ ಬಹುದೊಡ್ಡ ಹಲ್ಲೆ.

ಗೆದ್ದವನು ಸೋತ - ಸೋತವನು ಸತ್ತ ಎಂಬುದು ಯುದ್ದದ ವಿಷಯದಲ್ಲಿ ಅಕ್ಷರಶಃ ಸತ್ಯ.

ಇದನ್ನು ನೋಡುತ್ತಿದ್ದರೆ, ಇನ್ನಷ್ಟು ಕಾಲ ಇಡೀ ವಿಶ್ವದಾದ್ಯಂತ ಕೊರೋನಾ ವೈರಸ್ ಹಾವಳಿ ಮುಂದುವರೆದರೆ ಉತ್ತಮ ಎಂದೆನಿಸುತ್ತದೆಯಲ್ಲವೇ.....!!!!

ರಷ್ಯಾ ಉಕ್ರೇನ್ ಅಮೆರಿಕಾದ ಯುದ್ದ ದಾಹಗಳು ಮೂರನೇ ಮಹಾಯುದ್ಧದ ಕಾರ್ಮೋಡಗಳನ್ನು ಸೃಷ್ಟಿಮಾಡುತ್ತಿದ್ದರೆ ಇಲ್ಲಿ ಕರ್ನಾಟಕದಲ್ಲಿ ಸ್ಥಳೀಯವಾಗಿ ಹಿಜಾಬ್ ಕೇಸರಿ ಶಿವಮೊಗ್ಗದ ಯುವಕನ ಕೊಲೆ ಇದೆಲ್ಲಕ್ಕಿಂತ ಕೋವಿಡ್ ಹಾವಳಿಯೇ ಸಹನೀಯ ಎನಿಸುವುದಿಲ್ಲವೇ.

ಮೇಲ್ನೋಟಕ್ಕೆ ರಷ್ಯಾದ ಆಕ್ರಮಣ ಎನಿಸಿದರೂ ಇಲ್ಲಿ ಅಮೆರಿಕ ನೇತೃತ್ವದ ನ್ಯಾಟೊದ ಕಿತಾಪತಿಯೂ ಇದೆ. ಈ ಎಲ್ಲಾ ನಾಯಕರ ಕ್ರೌರ್ಯದ ಮನಸ್ಥಿತಿಯನ್ನು ಸಹ ಗುರುತಿಸಬಹುದು.

ಈ ಘಟನೆಗಳು ಮೂರನೇ ಮಹಾಯುದ್ಧದ ಮುನ್ಸೂಚನೆ ಎಂದು ಭಾವಿಸಬಹುದೇ.

ನಿಶ್ಚಿತವಾಗಿ ಹೀಗೆ ಎಂದು ಊಹಿಸುವುದು ಕಷ್ಟ. ಆದರೆ ಒಂದು ವೇಳೆ ಯುದ್ಧ ದೀರ್ಘಕಾಲ ಮುಂದುವರೆದರೆ ಮೂರನೇ ಮಹಾಯುದ್ಧ ಸಂಭವಿಸುವ ಸಾಧ್ಯತೆ ಇದೆ. ಏಕೆಂದರೆ ರಷ್ಯಾದ ಅಧ್ಯಕ್ಷನ ಈ ಹೇಳಿಕೆ ತುಂಬಾ ಅಪಾಯಕಾರಿ ಎನಿಸುತ್ತಿದೆ. " ಒಂದು ವೇಳೆ ನ್ಯಾಟೊ ನಮ್ಮ ಮೇಲೆ ದಾಳಿ ಮಾಡಿದರೆ ಮಾನವ ಇತಿಹಾಸ ಹಿಂದೆಂದೂ ಕಂಡಿರದ ದುರಂತಕ್ಕೆ ಸಾಕ್ಷಿಯಾಗಬೇಕಾಗುತ್ತದೆ " ಅಂದರೆ ಆತನ ಮಾತಿನ ಅರ್ಥ ಆಟಂ ಮತ್ತು ಹೈಡ್ರೋಜನ್ ಬಾಂಬುಗಳನ್ನು ಉಪಯೋಗಿಸಬೇಕಾಗುತ್ತದೆ ಎಂಬ ಬೆದರಿಕೆ.

ತಿನ್ನಲು ಗತಿ ಇಲ್ಲದೆ ಮನುಷ್ಯ ಮಾರಾಟವಾಗುತ್ತಿದ್ದ ಕಾಲದಿಂದ ಇಷ್ಟೆಲ್ಲಾ ಅತ್ಯುತ್ತಮ ಸೌಕರ್ಯ ಪಡೆದ ನಂತರ ಅದನ್ನು ಅನುಭವಿಸಿಕೊಂಡು ಸುಖ ಪಡುವುದನ್ನು ಬಿಟ್ಟು ಬಾಂಬುಗಳ ದಾಳಿಗೆ ಲಕ್ಷಾಂತರ ಜನರ ಸಾಯುವುದೇ ಒಂದು ವಿಜಯೋತ್ಸವ ಎಂಬ ವಿಕೃತ ಮನಸ್ಥಿತಿಗೆ ಮನುಷ್ಯ ತಲುಪಿರುವುದೇ ಅವನ ‌ಅಯೋಗ್ಯತನದ ಪರಮಾವಧಿ.....

ಪ್ರಾಕೃತಿಕ ವಿಕೋಪಗಳನ್ನು ಹೇಗೋ‌ ಸಹಿಸಿಕೊಳ್ಳಬಹುದು. ಅದು ಅನಿವಾರ್ಯ ಸಹ. ಆದರೆ ಈ ದುರಹಂಕಾರದ ನಡೆಗಳನ್ನು ಹೇಗೆ ಸಹಿಸುವುದು.

ಇತ್ತೀಚೆಗಷ್ಟೇ ನಾನು ಬರೆದ ಲೇಖನದಲ್ಲಿ ಹೇಳಿದಂತೆ, ವಿಶ್ವದ ಎಲ್ಲಾ ಜನಸಾಮಾನ್ಯರು ಒಕ್ಕೊರಲಿನಿಂದ ಈ ಯುದ್ದೋನ್ಮಾದಿ ನಾಯಕರ ವಿರುದ್ಧ ಮತ್ತು ಶಾಂತಿಯ ಪರವಾಗಿ ಧ್ವನಿ ಎತ್ತಲೇಬೇಕು. ಇಲ್ಲದಿದ್ದರೆ ಈಗ ನಾವುಗಳು ಮೌನವಾಗಿ ಇದನ್ನು ಸಹಿಸಿದರೆ ಮುಂದೆ ಬಹುದೊಡ್ಡ ಬೆಲೆ ತೆರಬೇಕಾಗುತ್ತದೆ. ಪ್ರಕೃತಿಯ ನಾಶದ. ಜೊತೆಗೆ ಅನ್ನ ಆಹಾರಗಳಿಗೂ ಪರದಾಡಬೇಕಾಗುತ್ತದೆ.

ಈ ದುಷ್ಟ ನಾಯಕರುಗಳು ಸೈನಿಕರೆಂದರೆ ಸುಫಾರಿ ಹಂತಕರು ( Paid Killers ) ಎಂದು ಭಾವಿಸಿದಂತಿದೆ. ಸೈನಿಕರೆಂದರೆ ಒಂದು ಹೆಣ್ಣು ಜೀವ ಒಂಬತ್ತು ತಿಂಗಳು ‌ಜೀವಕೋಶಗಳ ರಾಶಿಯನ್ನು ಹೊಟ್ಟೆಯಲ್ಲಿ ಬೆಳೆಸಿ ಸೃಷ್ಟಿಸುವ ಜೀವ ಎಂಬುದನ್ನು ಮರೆತಿದ್ದಾರೆ.

ವಿಮಾನಗಳು ಟ್ಯಾಂಕುಗಳು ಬಂದೂಕುಗಳು ಬಾಂಬುಗಳು ನಿರ್ಜೀವ ವಸ್ತುಗಳು. ಅವು ತನ್ನಿಂದ ತಾನೇ ಚಲಿಸುವುದಿಲ್ಲ. ಅದನ್ನು ಅಮಾನವೀಯ ವ್ಯಕ್ತಿಯೊಬ್ಬನ ತೆವಲಿಗಾಗಿ ( ಆತ್ಮರಕ್ಷಣೆಗಾಗಿಯಲ್ಲ ) ಇನ್ನೊಂದು ಮನುಷ್ಯ ಪ್ರಾಣಿ ಮತ್ತೊಂದು ಮನುಷ್ಯನನ್ನು ಹತ್ಯೆ ಮಾಡಲು ಪ್ರೇರೇಪಿಸುವ ಕ್ರಿಯೆಯೇ ಯುದ್ಧ. ಅದರಲ್ಲಿ ಜಯ ಎಲ್ಲಿಯದು - ಎಲ್ಲವೂ ಮರಣವೇ ಎಲ್ಲವೂ ವಿನಾಶವೇ.

ಇನ್ನು ‌ಮುಂದಿನ‌ ದಿನಗಳಲ್ಲಿ ಯುದ್ಧ ಎಂಬ ಪರಿಕಲ್ಪನೆಯನ್ನು ಬದಲಾಯಿಸಬೇಕಾಗಿದೆ. ಒಂದು ವೇಳೆ ಯಾವುದೇ ಕಾರಣದಿಂದ ಯುದ್ಧ ಅನಿವಾರ್ಯವಾದರೆ ಆ ದೇಶದ ಅಧಿಕಾರದ ಮುಖ್ಯಸ್ಥ ಮತ್ತು ಆತನ ಮಂತ್ರಿಮಂಡಲ ಇನ್ನೊಂದು ದೇಶದ ಇದೇ ರೀತಿಯ ವ್ಯವಸ್ಥೆಯೊಂದಿಗೆ ಮಲ್ಲಯುದ್ಧದಲ್ಲಿ ಭಾಗವಹಿಸಿ ಫಲಿತಾಂಶ ನಿರ್ಧರಿಸಲಿ. ಆಗ ಯುದ್ದ ಎಂಬುದಕ್ಕೆ ಒಂದು ಅರ್ಥ ಸಿಗುತ್ತದೆ ಮತ್ತು ಅಪಾರ ಹಣ ಮತ್ತು ಅಸಂಖ್ಯಾತ ಅಮಾಯಕ ಜನರ ಮಾರಣಹೋಮ ನಿಲ್ಲುತ್ತದೆ. ಇದು ವಿಶ್ವಸಂಸ್ಥೆ ಯೋಚಿಸಲಿ.

ಇಡೀ ವಿಶ್ವದಲ್ಲಿ ಮನುಷ್ಯ ಪ್ರಾಣಿ ತನ್ನ ರಕ್ಷಣೆಯ ಹೆಸರಿನಲ್ಲಿ, ಇನ್ನೊಬ್ಬರ ವಿನಾಶದ ನೆಪದಲ್ಲಿ, ಆಡಳಿತದ ಬಲಿಷ್ಠತೆಯ ಪ್ರತಿಷ್ಠೆಗಾಗಿ ಪ್ರಕೃತಿಯ ಮತ್ತು ತನ್ನ ದುಡಿಮೆಯ ಅಪಾರ ಹಣವನ್ನು ಮತ್ತು ಶ್ರಮವನ್ನು ತನ್ನ ವಿನಾಶದ ಮಾರ್ಗವಾದ ಯುದ್ದಕ್ಕಾಗಿ ವ್ಯಯಿಸುತ್ತಾನೆಂದರೆ ಅವನಿಗಿಂತ ಮೂರ್ಖ ಇನ್ನೊಬ್ಬನಿಲ್ಲ. ಹೇಳಿಕೊಳ್ಳುವುದು ಮಾತ್ರ ಜೀವರಾಶಿಗಳಲ್ಲಿ ಮನುಷ್ಯನೇ ಅತ್ಯಂತ ಬುದ್ದಿವಂತ ಪ್ರಾಣಿ ಎಂದು.

ಇದೀಗ ಭಾರತದಂಥ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳು ಮತ್ತೆ ಅಲಿಪ್ತ ನೀತಿಯನ್ನು ಮುನ್ನಲೆಗೆ ತಂದು ವಿಶ್ವದ ಬಹುತೇಕ ಎಲ್ಲಾ ದೇಶಗಳನ್ನು ಒಳಗೊಂಡ ಒಂದು ಸಂಘಟನೆ ರೂಪಿಸಿ ಯುದ್ಧಗಳನ್ನು ತಡೆಯುವ ಪ್ರಯತ್ನ ಮಾಡಬೇಕು. ಈಗಾಗಲೇ ಇರುವ ವಿಶ್ವಸಂಸ್ಥೆ ಮತ್ತು ಅದನ್ನು ನಿಯಂತ್ರಿಸುತ್ತಿರುವ ಅದೇ ಯುದ್ದೋತ್ಸಾಹಿ ದೇಶಗಳಿಗೆ ಪರ್ಯಾಯ ವ್ಯವಸ್ಥೆ ರೂಪಿಸಬೇಕು.

ಹಲ್ಲಿಲ್ಲದ ಹಾವಿನಂತಾಗಿರುವ ನಿಷ್ಪ್ರಯೋಜಕ ವಿಶ್ವಸಂಸ್ಥೆಯಿಂದ ಯಾವುದೇ ಹೆಚ್ಚಿನ ಪ್ರಯೋಜನ ಅಗುತ್ತಿಲ್ಲ.

ಈ ನಿಟ್ಟಿನಲ್ಲಿ ವಿಶ್ವದ ಸಾಮಾನ್ಯ ಜನ ಧ್ವನಿ ಎತ್ತುವ ದಿನಗಳು ಶೀಘ್ರದಲ್ಲೇ ಬರಲಿ ಎಂದು ಆಶಿಸುತ್ತಾ.


ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ, ವಿವೇಕಾನಂದ ಹೆಚ್ ಕೆ

Read More Articles