ಸಣ್ಣ ದೇಶದ ಮೇಲೆ ಪೌರುಷ ತೋರುತ್ತಿರುವ ರಷ್ಯಾ

ರಾಕ್ಷಸತ್ವ ಪ್ರದರ್ಶಿಸುತ್ತಿರುವ ರಷ್ಯಾದ ಅಧ್ಯಕ್ಷ Vladimir Putin,

promotions

ದೇಶ ಪ್ರೇಮದ ಭಾವನೆ ಕೆರಳಿಸಿ ಜನರ ರಕ್ತ ಹರಿಸಿ ತಾನು ಹುತಾತ್ಮನಾಗಲು ಪ್ರಯತ್ನಿಸುತ್ತಿರುವ ಕಪಟ ಮುಖವಾಡದ ಉಕ್ರೇನ್ ಅಧ್ಯಕ್ಷ Volodymyr Zelenskyy.

promotions

ಮಹಾಭಾರತದ ಶಕುನಿಯಂತೆ ತನ್ನ ಲಾಭಕ್ಕಾಗಿ ತೋಳದ ರೀತಿಯಲ್ಲಿ ಕಾದು ಕುಳಿತು ಮಜಾ ನೋಡುತ್ತಿರುವ ಅಮೆರಿಕ ‌ನೇತೃತ್ವದ ನ್ಯಾಟೋ ಪಡೆ.

promotions

ಊಹಿಸಲಸಾಧ್ಯವಾದ ಕಾರಣಗಳಿಗಾಗಿ ಅನೇಕ ರೀತಿಯ ತೊಂದರೆಗೊಳಗಾಗಿ ಅಸಹನೀಯ ಆತಂಕದಲ್ಲಿ ನರಳುತ್ತಿರುವ ಉಕ್ರೇನ್ ಜನತೆ.

ಯುದ್ಧ ತಡೆಯಲು ಸಾಧ್ಯವಾಗದೆ, ದೊಡ್ಡದಾಗಿ ಪ್ರತಿಕ್ರಿಯಿಸಲು ಆಗದೆ ಪರೋಕ್ಷವಾಗಿ ಅಸಹಾಯಕತೆಯಿಂದ ಒಳಗೊಳಗೆ ಕೊರಗುತ್ತಿರುವ ಜಗತ್ತಿನ ಅನೇಕ ಶಾಂತಿ ಪ್ರಿಯ ಮನಸ್ಸುಗಳು.

ಹಿಂಸೆ ತಡೆಯಲು ಸಾಧ್ಯವಾಗದೆ ಸ್ವತಃ ಹೆದರಿ ಅಡಗಿ ಕುಳಿತ ದೇವರುಗಳು ಮತ್ತು ಶಾಂತಿ ಸಾಮರಸ್ಯವನ್ನು ಕಾಪಾಡಲು ವಿಫಲವಾದ ಬೃಹತ್ ಗ್ರಂಥಗಳಲ್ಲಿ ಬಂಧಿಯಾದ ಧರ್ಮಗಳು ಹಾಗು ತಮ್ಮ ಮತ್ತು ತಮ್ಮ ದೇಶದ ಜನರನ್ನು ಧರ್ಮದ ಬಂಧನದಲ್ಲಿ ಸಿಲುಕಿಸಿ ಈಗ ಅವರನ್ನು ರಕ್ಷಿಸಲು ಸಾಧ್ಯವಾಗದೆ ಒದ್ದಾಡುತ್ತಿರುವ ಧರ್ಮಾಧಿಕಾರಿಗಳು.

ಈ ಎಲ್ಲಾ ವಿಕೃತ ಮನುಷ್ಯರಿಂದ ಸರಿಪಡಿಸಲಾಗದಷ್ಟು ಹಾನಿಗೊಳಗಾಗಿ ಮೂಕರೋಧನೆ ಅನುಭವಿಸುತ್ತಿರುವ ಭೂತಾಯಿಯ ಒಡಲು.

ಶಿವರಾತ್ರಿಯ ಸಂಭ್ರಮದಲ್ಲಿ ನಾವುಗಳು, ಹಿಜಾಬ್ ತೊಡುವ ಹಠದಲ್ಲಿ ಅವರುಗಳು.

ಈ ಅಬ್ಬರದಲ್ಲಿ ಓಡಿಹೋದ ಕೊರೋನಾ ವೈರಸ್ ಅಥವಾ ನಾಲ್ಕನೇ ಅಲೆಗೆ ಹೊಂಚು ಹಾಕುತ್ತಿರುವ ಕೋವಿಡ್ ‌19.

ಇದನ್ನೆಲ್ಲಾ ನೋಡುತ್ತಿದ್ದರೆ ಮನುಷ್ಯರಿಗೆ ಕೊಬ್ಬು ಜಾಸ್ತಿಯಾಗಿದೆ. ದುಡ್ಡು ಮತ್ತು ಆಧುನಿಕ ತಂತ್ರಜ್ಞಾನ ಅವನ ದುರಹಂಕಾರ ಹೆಚ್ಚಿಸಿದೆ ಎನಿಸುತ್ತಿದೆ.

ಬಾಯಲ್ಲಿ ಹೇಳುವುದು ಮಾತ್ರ ಬುದ್ದ ಬಸವ ಗಾಂಧಿ ಅಂಬೇಡ್ಕರ್ ಅಲ್ಲಾ ಜೀಸಸ್ ರಾಮ ಸೀತೆ ಮಾರ್ಕ್ಸ್ ಟಾಲ್ ಸ್ಟಾಯ್, ಮಾಡುವುದು ಮಾತ್ರ ಹಿಟ್ಲರ್ ಇದಿ ಅಮೀನ್ ತರದವರ ಕೆಲಸಗಳು.

ಅನುಮಾನ ಅಹಂಕಾರ ತುಂಬಿದ ಮನಸ್ಸುಗಳೇ ಆಡಳಿತ ನಡೆಸುತ್ತಿರುವಾಗ - ಸಮಸ್ಯೆಗಳೇ ಅಲ್ಲದ ಸಮಸ್ಯೆಗಳನ್ನು ಸೃಷ್ಟಿ ಮಾಡಿಕೊಂಡಿರುವಾಗ ಇದಕ್ಕೆ ಪರಿಹಾರಗಳೇ ಇರುವುದಿಲ್ಲ. ವಿನಾಶಗಳ ರೂಪದಲ್ಲಿಯೇ ದುರಂತಗಳ ಸರಮಾಲೆಯೇ ಬಹುಶಃ ಇದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳಬಹುದು.

ಇನ್ನೂ ಎಷ್ಟು ಸಾವುಗಳ ನಂತರ ಈ ಯುದ್ಧ ಕೊನೆಗೊಳ್ಳಬಹುದು ಎಂಬುದು ಮಾತ್ರ ಈಗ ಉಳಿದಿರುವ ಕುತೂಹಲ. ಏಕೆಂದರೆ ಉಕ್ರೇನ್ ನ ಎಷ್ಟು ಸೈನಿಕರನ್ನು ಕೊಂದೆ ಎಂದು ಇಂವ, ರಷ್ಯಾದ ಎಷ್ಟು ಸೈನಿಕರನ್ನು ಕೊಂದೆ ಎಂದು ಅಂವ ಬಡಿದಾಡುತ್ತಿರುವಾಗ ವಿಕೃತತೆಯ ಉತ್ತುಂಗದಲ್ಲಿ ನಾಶವೇ ಪರಿಹಾರ.

ಇದರಿಂದಾಗಿ ಕನಿಷ್ಠ ಭಾರತ ‌ಪಾಕಿಸ್ತಾನ ಚೀನಾ ದೇಶಗಳಾದರೂ ಪಾಠ ಕಲಿಯಬಹುದೇ ಅಥವಾ ಮುಂದೊಂದು ದಿನ ಇವುಗಳ ಸಹ ಈ ಯುದ್ದ ದಾಹದ ತೆವಲಿಗೆ ಬಿದ್ದು ನಮ್ಮನ್ನೂ ನಾಶ ಮಾಡಬಹುದೇ ?.

ಸಾಮಾನ್ಯ ಜನ ವಿಶ್ವದಾದ್ಯಂತ ಶಾಂತಿಯ ಪರವಾಗಿ, ಮನುಷ್ಯ ಜನಾಂಗದ ಅಸ್ತಿತ್ವದ ಉಳಿವಿಗಾಗಿ ಧ್ವನಿ ಎತ್ತದಿದ್ದರೆ ಈ‌ ರಾಕ್ಷಸ ಗುಣದ ನಾಯಕರು ನಮ್ಮ ಬದುಕುಗಳನ್ನು ನರಕ ಮಾಡುವುದು ಬಹುತೇಕ ನಿಶ್ಚಿತ.

ರಷ್ಯಾ ಮತ್ತು ಉಕ್ರೇನ್ ಯುದ್ಧಕ್ಕೆ ಈ ಕ್ಷಣದಲ್ಲಿ ಇರಬಹುದಾದ ಒಂದು ಪರಿಹಾರ ಇಬ್ಬರೂ ಅಧ್ಯಕ್ಷರು ಸಾಮಾನ್ಯ ಜ್ಞಾನ ಉಪಯೋಗಿಸಿ ಅಹಂಕಾರ ತ್ಯಜಿಸಿ ಅವರೇ ನಂಬಿ ಆರಾಧಿಸುವ ಜೀಸಸ್ ಅವರು ನುಡಿದಂತೆ " ಶತ್ರುಗಳನ್ನು ಪ್ರೀತಿಸಿ - ನೆರೆಹೊರೆಯವರನ್ನು ಪ್ರೀತಿಸಿ " ಎಂಬ ತತ್ವವನ್ನು ನೆನಪು ಮಾಡಿಕೊಂಡು ಹೊಂದಾಣಿಕೆಯ ಮನೋಭಾವ ಪ್ರದರ್ಶಿಸಬೇಕು.

ರಾಕ್ಷಸ ಪುಟಿನ್ - ಬಪೂನ್ ಝಲೆನ್ಸ್ಕಿ, ಶಕುನಿ ಬೈಡನ್ ಅವರನ್ನು ಜನರು ಇನ್ನಾದರೂ ಗುರುತಿಸಿ ತಿರಸ್ಕರಿಸಬೇಕು. ಇಲ್ಲದಿದ್ದರೆ ಸಾವು ನೋವುಗಳನ್ನು ಅನುಭವಿಸುವುದು ಜನರ ಕರ್ಮವಾಗುತ್ತದೆ.

ಯುದ್ದ ನಿಲ್ಲಲಿ‌ ಶಾಂತಿ ನೆಲೆಸಲಿ

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.

Read More Articles