ಬದಲಾದ ಭಾರತದಲ್ಲಿ ಮಹಿಳೆ ಎಂದಿಗೂ ಸುರಕ್ಷಿತ
- 15 Jan 2024 , 3:40 AM
- Belagavi
- 205
ಬದಲಾದ ಭಾರತದಲ್ಲಿ ಮಹಿಳೆ ಎಂದಿಗೂ ಸುರಕ್ಷಿತ
ಬದಲಾವಣೆಯ ಹಾದಿಯಲ್ಲಿ ಭಾರತೀಯ ಮಹಿಳಾ ಸಮಾಜ.
ವಿಶ್ವ ವ್ಯಾಪಾರ ಸಂಘಟನೆಗೆ ಸಹಿ ಹಾಕಿ ಜಾಗತೀಕರಣಕ್ಕೆ ತೆರೆದುಕೊಂಡ ಭಾರತದಲ್ಲಿ ಅದರಿಂದ ಅತಿ ಹೆಚ್ಚು ನಷ್ಟಕ್ಕೊಳಗಾಗಿ ನಾಶವಾಗಿದ್ದು ಭಾರತೀಯ ರೈತರು ಎಂಬುದು ನಮಗೆಲ್ಲ ತಿಳಿದಿದೆ.
ಆದರೆ ಅದರಿಂದ ನಮ್ಮಲ್ಲಿ ಅತಿಹೆಚ್ಚು ಲಾಭವಾಗಿದ್ದು ಯಾರಿಗೆ ? ನನ್ನ ಪ್ರಕಾರ ಅದು ಭಾರತೀಯ ಮಹಿಳೆಯರಿಗೆ.
ಸಾಂಪ್ರದಾಯಿಕ ಮತ್ತು ಪ್ರಶ್ನಿಸದ ಧಾರ್ಮಿಕ ಜೀವನ ಶೈಲಿಯನ್ನೇ ಬಹುತೇಕ ಒಪ್ಪಿಕೊಂಡು ಜೀವನ ಸಾಗಿಸುತ್ತಿದ್ದ ಇಲ್ಲಿನ ಮಹಿಳೆಯರು ಹಳೆಯ ಸಂಸ್ಕೃತಿಗೆ ಹೊಸ ಭಾಷ್ಯ ಬರೆಯಲು ಜಾಗತೀಕರಣ ಬಹುಮಖ್ಯ ಅಂಶವಾಯಿತು.
ಅವಿಭಕ್ತ ಕುಟುಂಬಗಳಲ್ಲಿ Almost ಜೀತದಾಳುಗಳಂತೆ ದುಡಿಯುತ್ತಿದ್ದ, ತಮ್ಮ ಆಸೆ ಆಕಾಂಕ್ಷೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಹೆದರುತ್ತಿದ್ದ ಮಹಿಳೆಯರು ಇದರ ನಂತರ ಸಮಾಜದ ಮುಖ್ಯವಾಹಿನಿಗೆ ತೆರೆದುಕೊಂಡರು. ಅಲ್ಲಿಯವರೆಗೂ ಮಹಿಳೆಯರ ಬಗ್ಗೆ ಎಷ್ಟೇ ಗೌರವ ಭಾವನೆ ಹೊಂದಿರುವ ಸಮಾಜ ನಮ್ಮದಾಗಿದ್ದರೂ ಆಕೆಯ ಸ್ವತಂತ್ರ ಮನೋಭಾವವನ್ನು , ಆರ್ಥಿಕ ಸ್ವಾವಬನೆಯನ್ನು , ಆಕೆಯ ಸಾಮರ್ಥ್ಯವನ್ನು ನಮ್ಮ ಪುರುಷ ಕೇಂದ್ರಿತ ಸಮಾಜ ಒಪ್ಪಿಕೊಳ್ಳುತ್ತಿರಲಿಲ್ಲ ಅಥವಾ ನಿರ್ಲಕ್ಷಿಸುತ್ತಿತ್ತು. ( ಕೆಲವು ಅಪರೂಪದ ಘಟನೆಗಳನ್ನು ಹೊರತುಪಡಿಸಿ ).
ಆಕೆಯ ಉಡುಗೆ , ಸಂಜೆ ನಂತರದ ಚಟುವಟಿಕೆ, ವಾಹನ ಚಲಾವಣೆ, ದೂರದ ಒಂಟಿ ಪ್ರಯಾಣ ಮುಂತಾದ ವಿಷಯಗಳಲ್ಲಿ ತುಂಬಾ ನಿಯಂತ್ರಣವಿತ್ತು.
ಆದರೆ ಜಾಗತೀಕರಣದ ಪರಿಣಾಮ ನಗರೀಕರಣ ಹೆಚ್ಚಾಗತೊಡಗಿತು. ಸಹಜವಾಗಿ ಅವಿಭಕ್ತ ಕುಟುಂಬಗಳು ಶಿಥಿಲವಾಗಿ ಸಣ್ಣ ಸಣ್ಣ ಕುಟುಂಬಗಳ ವ್ಯವಸ್ಥೆ ಪ್ರಾಮುಖ್ಯತೆ ಪಡೆಯಿತು. ಅದೇ ಸಮಯದಲ್ಲಿ ಪಾಶ್ಚಿಮಾತ್ಯ ಜೀವನ ಶೈಲಿಯಾದ ಕೊಳ್ಳುಬಾಕ ಗ್ರಾಹಕ ಸಂಸ್ಕೃತಿ ನಮ್ಮನ್ನು ಆಕ್ರಮಿಸತೊಡಗಿತು. ಅನೇಕ ಅವಶ್ಯಕ ಮತ್ತು ಅನವಶ್ಯಕ, ತೋರಿಕೆಯ ಮನೋಭಾವದ ನಮಗೆ ತೀರಾ ಅನಿವಾರ್ಯವಲ್ಲದ ವಸ್ತುಗಳು ಮಾರುಕಟ್ಟೆ ಪ್ರವೇಶಿಸಿದವು. ಇದರ ಪರಿಣಾಮ ಒಬ್ಬರ ಸಂಬಳ ಅಥವಾ ಆದಾಯ ಸಾಲದೆ ಇಬ್ಬರೂ ದುಡಿಯುವ ಅನಿವಾರ್ಯತೆ ಉಂಟಾಯಿತು.
ಕ್ರಮೇಣ ಶಿಕ್ಷಣ, ಆರೋಗ್ಯ, ಸಂಪರ್ಕ, ಮನೋರಂಜನೆ ಇತ್ಯಾದಿ ಹೊಸ ಹೊಸ ಆವಿಷ್ಕಾರಗಳಿಂದ ಜೀವನ ಶೈಲಿ ಬದಲಾಗಿ ಆರ್ಥಿಕ ಒತ್ತಡ ಹೆಚ್ಚಾಯಿತು. ಮಹಿಳೆಯರ ಮನಸ್ಥಿತಿಯಲ್ಲಿ ಜಾಗೃತಿ ಮೂಡಿತು.
ಈ ಸಂಧರ್ಭವನ್ನೇ ನಿರೀಕ್ಷಿಸುತ್ತಿದ್ದ, ವ್ಯಾಪಾರ - ಲಾಭಗಳೇ ಮುಖ್ಯ ಗುರಿಯಾಗಿದ್ದ ನಮ್ಮ ದೇಶದ ಕೆಲವು ಕಂಪನಿಗಳು ಮತ್ತು ಮುಖ್ಯವಾಗಿ MNC ಗಳು ಮಹಿಳೆಯರ ಈ ಜಾಗೃತಾವಸ್ಥೆಯನ್ನು ಗ್ರಹಿಸಿ ಹೆಚ್ಚು ಹೆಚ್ಚು ಮಹಿಳಾ ಉದ್ಯೋಗಿಗಳನ್ನು ನೇಮಿಸಿಕೊಳ್ಳತೊಡಗಿದವು. ಎಲ್ಲೆಲ್ಲೂ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಾಯಿತು.
ನಿಧಾನವಾಗಿ ಮಹಿಳಾ ಸಬಲೀಕರಣ ತನಗರಿವಿಲ್ಲದೆ ವಿಸ್ತಾರವಾಗತೊಡಗಿತು. ಅದೇ ಸಮಯದಲ್ಲಿ ಸರ್ಕಾರ ಸ್ಥಳೀಯ ಸಂಸ್ಥೆಗಳ ರಾಜಕೀಯದಲ್ಲಿ ಮಹಿಳೆಯರಿಗೆ ಶೇಕಡ 33% ಮಹಿಳಾ ಮೀಸಲಾತಿ ಒದಗಿಸಿತು. ಇದರ ಬಹುದೊಡ್ಡ ಪರಿಣಾಮ ಮುಂಬಯಿ ಮಹಾನಗರ ಪಾಲಿಕೆಯ 227 ಸ್ಥಾನಗಳಲ್ಲಿ 133 ಮಹಿಳೆಯರೇ ಆಯ್ಕೆಯಾದರು. ಕರ್ನಾಟಕದಲ್ಲೂ ಈ ರೀತಿಯ ಉದಾಹರಣೆಗಳು ಇವೆ.
ಮುಂದೆ..
ಬದುಕು ಆಧುನಿಕವಾದಂತೆ, ಸಂಪರ್ಕ ಕ್ರಾಂತಿ ಮಹಿಳಾ ಸಬಲೀಕರಣಕ್ಕೆ ಕಾರಣವಾದಂತೆ ಅದೇ ನೆಪವಾಗಿ ಕೌಟುಂಬಿಕ ವ್ಯವಸ್ಥೆ ಶಿಥಿಲವಾಗತೊಡಗಿದೆ. ಮಹಿಳೆಯರ ಪರಿವರ್ತನಾ ಮನೋಸ್ಥಿತಿ ಬೆಳೆದಷ್ಟು ವೇಗವಾಗಿ ಪುರಷ ಮನಸ್ಥಿತಿ ಅದನ್ನು ಒಪ್ಪಿಕೊಳ್ಳುತ್ತಿಲ್ಲ.
ಶತಶತಮಾನಗಳ ಪುರುಷ ಪ್ರಧಾನ ಸಾಮ್ರಾಜ್ಯ ಕುಸಿದು ಬೀಳುತ್ತಿರುವುದನ್ನು ಸಹಿಸಿಕೊಳ್ಳಲು ಮತ್ತು ಅದನ್ನು ಗ್ರಹಿಸಲು ಪುರುಷರಿಗೆ ಸುಲಭವಾಗಿ ಸಾಧ್ಯವಾಗುತ್ತಿಲ್ಲ. ಘರ್ಷಣೆಗಳು ನಿರಂತರವಾಗುತ್ತಿವೆ. ಕೌಟುಂಬಿಕ ನ್ಯಾಯಾಲಯಗಳು ತುಂಬಿ ತುಳುಕುತ್ತಿವೆ. ಅಲ್ಲಿಗೆ ಬರಲಾಗದ ಎಷ್ಟೋ ಘಟನೆಗಳು ಇನ್ನೂ ಆಂತರ್ಯದಲ್ಲೇ ಒದ್ದಾಡುತ್ತಿವೆ.ಮದುವೆಗಳು ಒಪ್ಪಂದಗಳಾಗಿ ಹಾಸ್ಯಾಸ್ಪದವಾಗುತ್ತಿವೆ.
ಆದರೂ, ಕಾಲನ ನಿರ್ಣಯದಲ್ಲಿ ಇದು ಕೂಡ ತಾತ್ಕಾಲಿಕ. ಕೆಲವು ವರ್ಷಗಳ ನಂತರ ಮತ್ತೊಂದು ರೂಪದಲ್ಲಿ ಇದು ಬದಲಾಗಬಹುದು. ಎಲ್ಲಕ್ಕೂ ಸಾಕ್ಷಿಯಾಗಿ ಜೀವನದ ಅನುಭವಗಳನ್ನೂ ಸವಿಯುತ್ತಾ ಮುನ್ನಡೆಯೋಣ.
ಏಕೆಂದರೆ ಎಲ್ಲಾ ಭಿನ್ನತೆಗಳ ನಡುವೆಯೂ ನಾವೆಲ್ಲರೂ ಒಂದೇ ದೋಣಿಯ ಪಯಣಿಗರು.
ಜೊತೆಗೆ ಇನ್ನೊಂದು ಮುಖವೂ ಇನ್ನೂ ಹಾಗೇ ಉಳಿದಿದೆ.
ಮಹಿಳೆಯರಿಗೆ ವಿಶ್ವದಲ್ಲಿ ಅತ್ಯಂತ ಹೆಚ್ಚು ಗೌರವ ಕೊಡುವ ದೇಶ ಭಾರತ ನಿಜವೇ ?
ಮಹಿಳೆಯರಿಗೆ ಭಾರತ ಸುರಕ್ಷಿತವೇ ?
ಇಲ್ಲಿ ಆರೋಗ್ಯಕರ ವಾತಾವರಣ ಇದೆಯೇ ?
ಯಾವುದೋ ಯಾರದೋ ವರದಿಯನ್ನು ಕೇಳಿ ನಾವು ತಿಳಿದುಕೊಳ್ಳಬೇಕಿಲ್ಲ. ವಿಮರ್ಶೆ ಮಾಡಿಕೊಳ್ಳಬೇಕಿಲ್ಲ.
ಈ ಮಾಧ್ಯಮ ಕ್ರಾಂತಿಯ ಸಂದರ್ಭದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದಿನನಿತ್ಯದ ಘಟನೆಗಳ ಮಾಹಿತಿ ನಮಗೆ ಸಿಗುತ್ತದೆ. ಅದರ ಆಧಾರದಲ್ಲಿ ನಾವುಗಳೇ ಸ್ವಯಂ ವಿಮರ್ಶೆ ಮಾಡಿಕೊಳ್ಳೋಣ.
ಸುರಕ್ಷತೆ ಎಂದರೆ ವಿಶ್ವದ ಇತರೆ ದೇಶಗಳ ಸುರಕ್ಷತೆ ಅಥವಾ ಅಸುರಕ್ಷತೆಯ ಆಧಾರದಲ್ಲಿ ನಾವು ಇದನ್ನು ಅಳತೆ ಮಾಡಬೇಕೆ ? ಅಥವಾ, ಭಾರತದ ಸಂಸ್ಕೃತಿ ಜೀವನ ಶೈಲಿ ಮತ್ತು ಇಲ್ಲಿ ಮಹಿಳೆಯರಿಗೆ ಇರುವ ಗೌರವ - ಪೂಜ್ಯ ಭಾವನೆಗಳನ್ನು ಅಳತೆಗೋಲಾಗಿ ಈ ವಿಷಯ ವಿಮರ್ಶಿಸಬೇಕೆ ?
ಸದ್ಯಕ್ಕೆ ಇತರ ದೇಶಗಳ ಮಹಿಳೆಯರ ಪರಿಸ್ಥಿತಿಯನ್ನು ಪಕ್ಕಕ್ಕಿಟ್ಟು ಭಾರತೀಯ ಸಮಾಜದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ನೋಡೋಣ.
ಮೇಲ್ನೋಟಕ್ಕೆ ಭಾರತದ ಮಹಿಳೆಯರು ಖಂಡಿತ ಸುರಕ್ಷಿತ.
ಶಾಲಾ ಕಾಲೇಜುಗಳು, ಉದ್ಯೋಗ ಸ್ಥಳಗಳು, ಸಂತೆ, ಜಾತ್ರೆ, ಮಾರ್ಕೆಟ್ ಮುಂತಾದ ಜನಜಂಗುಳಿ ಪ್ರದೇಶಗಳು, ಪಾರ್ಕ್, ಗೃಹಿಣಿಯರು ಇತ್ಯಾದಿ ಎಲ್ಲವನ್ನೂ ಗಮನಿಸಿದಾಗ ನಿಜಕ್ಕೂ ಸುರಕ್ಷತೆಯ ಭಾವ ಉಂಟಾಗುತ್ತದೆ. ಅತ್ಯಾಚಾರದ ಬಗ್ಗೆ ಭಾರತೀಯರ ಮನಸ್ಸುಗಳಲ್ಲಿ ಅತ್ಯಂತ ಆಕ್ರೋಶದ ಮತ್ತು ಅಸಹ್ಯದ ಭಾವನೆ ಇದೆ.
ಜೈಲಿನಲ್ಲೂ ಕೂಡ ಬೇರೆ ಅಪರಾಧಿಗಳಿಗಿಂತ ಅತ್ಯಾಚಾರದ ಆರೋಪಿಯನ್ನು ಜೈಲಿಗೆ ಮೊದಲು ಪ್ರವೇಶಿಸಿದಾಗ ಇತರ ಖೈದಿಗಳು ಹೊಡೆಯುವರಂತೆ. ಕಾರಣ ಆತ ಅತ್ಯಂತ ಹೀನಾಯ ಕೆಲಸ ಮಾಡಿದ್ದಾನೆ ಎಂದು. ಕೊಲೆ ಕಳ್ಳತನ ಸಹಿಸಬಹುದು ಆದರೆ ಅಮಾಯಕ ಮಹಿಳೆಯ ಅತ್ಯಾಚಾರ ಖೈದಿಗಳಿಗೂ ಸಹ ಸಹಿಸಲು ಸಾಧ್ಯವಿಲ್ಲ.
ಇತ್ತೀಚಿನ ಆಧುನಿಕ ಮತ್ತು ಚಿಕ್ಕದಾದ ಕೌಟುಂಬಿಕ ವ್ಯವಸ್ಥೆಯಲ್ಲಿ ಮಹಿಳೆಯರಿಗೇ ಹೆಚ್ಚು ಅಧಿಕಾರ ಇದೆ ಎಂಬುದು ಸಹ ಮೇಲ್ನೋಟಕ್ಕೆ ಕಂಡುಬರುತ್ತದೆ. ಹಾಸ್ಯ ಲೇಖನಗಳು ಮತ್ತು ಸಿನಿಮಾ - ನಾಟಕ - ಧಾರವಾಹಿಗಳಲ್ಲಿ ಇದನ್ನು ಪ್ರತಿನಿತ್ಯ ಗಮನಿಸುತ್ತೇವೆ.
ಈ ರೀತಿಯ ವ್ಯವಸ್ಥೆಯಲ್ಲಿ ನಮ್ಮ ಮಹಿಳೆಯರು ಸಾಮಾನ್ಯ ಸ್ಥಿತಿಯಲ್ಲಿ ಸುರಕ್ಷಿತ ಎಂದು ಹೇಳಬಹುದು.
ಆದರೆ,.
ಭಾರತದಲ್ಲಿ ಮಹಿಳೆಯರಿಗೆ ಇರುವ ಪೂಜನೀಯ ಸ್ಥಾನ, ತಾಯಿ, ತಂಗಿ, ಅಕ್ಕ, ಅತ್ತಿಗೆ, ಹೆಂಡತಿ ಮುಂತಾದ ಭಾವನಾತ್ಮಕ ಸಂಬಂಧಗಳ ಆಧ್ಯಾತ್ಮಿಕ ಹಿನ್ನೆಲೆಯ ಸಂಸ್ಕಾರದಲ್ಲಿ ನಿಜಕ್ಕೂ ಮಹಿಳೆ ಆ ಗೌರವ ಪಡೆಯುತ್ತಿದ್ದಾಳೆಯೇ ? ಆಕೆ ಅತ್ಯಂತ ಸುರಕ್ಷಿತ ಎಂದು ಧೈರ್ಯವಾಗಿ ಹೇಳಬಹುದೆ ?.
ಈ ಪ್ರಶ್ನೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು.
ಸಿನಿಮಾ - ರಾಜಕೀಯ ಮುಂತಾದ ಜನಪ್ರಿಯ ಕ್ಷೇತ್ರಗಳನ್ನು ಬಿಡಿ. ಅಲ್ಲಿ ಕೆಲವು ಮಹಿಳೆಯರು ಬಲವಂತದ, ಅನಿವಾರ್ಯ ಮತ್ತು ಆಕರ್ಷಣೆಯ ಶೋಷಣೆಗೆ ಒಳಗಾಗುತ್ತಾರೆ ಎಂಬುದು ಬಹಿರಂಗ ಸತ್ಯ ಅದಕ್ಕೆ ಅಧೀಕೃತತೆ ಇರುವುದಿಲ್ಲ ಆ ಕೆಲವು ಘಟನೆಗಳ ಬಗ್ಗೆ ಚರ್ಚೆ ಅನಾವಶ್ಯಕ.
ನಾವು ಸಮಾಜದ ಸಾಮಾನ್ಯ ಮಹಿಳೆಯರ ಸ್ಥಿತಿ ಗಮನಿಸೋಣ. ಈಗಲೂ ಒಟ್ಟು ಭಾರತದಲ್ಲಿ ಅಧಿಕೃತ ಅಂಕಿ ಸಂಖ್ಯೆಗಳ ಪ್ರಕಾರವೇ ದಿನನಿತ್ಯ ಹತ್ತಾರು ಅತ್ಯಾಚಾರದ ಪ್ರಕರಣಗಳು ದಾಖಲಾಗುತ್ತವೆ. ದಾಖಲಾಗದ ಅಷ್ಟೇ ಪ್ರಕರಣಗಳು ಮುಚ್ಚಿ ಹೋಗುತ್ತವೆ.
ಈಗಲೂ ಒಂಟಿ ಮಹಿಳೆಯರು ದೂರದ ಪ್ರಯಾಣ ಅಥವಾ ರಾತ್ರಿಯ ಪ್ರಯಾಣ ಆತಂಕಕಾರಿ ಎಂಬುದು ನಮಗೆಲ್ಲಾ ತಿಳಿದಿದೆ. ಗಾರ್ಮೆಂಟ್ಸ್, ಮನೆಗೆಲಸ, ಕೂಲಿ ಮುಂತಾದ ಆರ್ಥಿಕವಾಗಿ ಕೆಳ ದರ್ಜೆಯ ಕೆಲಸಗಳಲ್ಲಿ ಮಹಿಳೆಯರ ಲೈಂಗಿಕ ಶೋಷಣೆ ನಿರಂತರವಾಗಿರುವುದನ್ನು ಕಾಣಬಹುದು.
ಕಾಲೇಜುಗಳಿಗೆ, ಪ್ರವಾಸಗಳಿಗೆ, ಹಾಸ್ಟಲ್ ಗಳಿಗೆ ಮುಂತಾದ ಕಡೆ ಪುರುಷರಷ್ಟು ಸಹಜವಾಗಿ ಮಹಿಳೆಯರನ್ನು ಕಳಿಸಲು ಪೋಷಕರು ಒಪ್ಪುವುದಿಲ್ಲ. ಅದಕ್ಕೆ ಕಾರಣ ಆಕೆಯ ಸುರಕ್ಷತೆ. Social media ಗಳಲ್ಲಿ ಸಹ ಮಹಿಳೆಯರ ಫೋಟೋಗಳನ್ನು ದುರುಪಯೋಗ ಮಾಡಿಕೊಂಡು ಅವರಿಗೆ ಬ್ಲಾಕ್ ಮೇಲ್ ಮಾಡಲಾಗುವುದು ಎಂದು ಹೇಳಲಾಗುತ್ತದೆ.
ಬಸ್ಸು ಮತ್ತು ರೈಲುಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಗಳು ದಿನನಿತ್ಯ ವರದಿಯಾಗುತ್ತಲೇ ಇದೆ.
ಈ ವಿಷಯಗಳನ್ನು ನೋಡಿದಾಗ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಮೇಲ್ನೋಟಕ್ಕೆ ಇರುವ ಗೌರವಾಧರಗಳು ವಾಸ್ತವದಲ್ಲಿ ಇಲ್ಲ. ಅದರಲ್ಲೂ ಅಸಹಾಯಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ಸಾಮಾನ್ಯವಾಗಿದೆ.
ವಿಕೃತ ಮನಸ್ಸುಗಳು ಕೆಲವು ಅತಿಕಾಮಿಗಳನ್ನು ಹೊರತುಪಡಿಸಿದರು ಸಾಮಾನ್ಯ ಜನರ ಮನಸ್ಥಿತಿಯೂ ಕೂಡ ಬದಲಾಗಬೇಕಿದೆ.
ಕೊನೆಯದಾಗಿ ದಯವಿಟ್ಟು ಅರ್ಥಮಾಡಿಕೊಳ್ಳಿ. ಭಾರತದಲ್ಲಿ ಮಹಿಳೆ ಅತ್ಯಂತ ಪೂಜನೀಯ ಸ್ಥಾನ ಹೊಂದಿದ್ದಾಳೆ ನಿಜ. ಅದು ಕೇವಲ ತನ್ನ ತಾಯಿ, ತಂಗಿ, ಅಕ್ಕ, ಮಗಳು, ಹೆಂಡತಿ, ಪ್ರೇಯಸಿ ಮತ್ತು ಇತರ ರಕ್ತ ಸಂಬಂಧಿ ಹೆಣ್ಣು ಮಕ್ಕಳು ಮಾತ್ರ. ಇದನ್ನು ಹೊರತುಪಡಿಸಿ ಇತರರನ್ನು ನಾವು ಹೇಗೆ ನೋಡುತ್ತೇವೆ ಎಂದು ನಮ್ಮ ಮನಃಸಾಕ್ಷಿಗೆ ಕೇಳಿಕೊಂಡು ಉತ್ತರ ಹುಡುಕಬೇಕಿದೆ.
ನಮ್ಮ ಪರಿಚಿತ ಹೆಣ್ಣು ಮಕ್ಕಳಿಗೆ ಅದರಲ್ಲೂ ಕೆಳಹಂತದಲ್ಲಿರುವವರಿಗೆ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿರುವವರಿಗೆ, ಉದ್ಯೋಗ ಮಾಡುವವರಿಗೆ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಚಟುವಟಿಕೆಯಿಂದ ಇರುವವರಿಗೆ ಕೇಳಿ ನಮ್ಮ ಅಭಿಪ್ರಾಯ ರೂಪಿಸಿಕೊಳ್ಳಬೇಕಿದೆ.
ವ್ಯವಸ್ಥೆ ತೀರಾ ಹದಗೆಟ್ಟಿಲ್ಲದಿದ್ದರೂ ಸಂಪೂರ್ಣ ಸುರಕ್ಷತೆಯೂ ಇಲ್ಲ. ಆದ್ದರಿಂದ ಕನಿಷ್ಠ ನಮ್ಮ ಸಮಕಾಲೀನ ಸಂದರ್ಭದಲ್ಲಿಯಾದರೂ ಮಹಿಳೆಯರ ಸುರಕ್ಷತೆಯ ಮಟ್ಟವನ್ನು ಇನ್ನಷ್ಟು ಉತ್ತಮ ಪಡಿಸಲು ನಾವುಗಳು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಮ್ಮ ಕೈಲಾದ ಪ್ರಯತ್ನ ಮಾಡೋಣ. ಈ ವಿಷಯದಲ್ಲಿ ಪಕ್ಷ ಪಂಥ ಧರ್ಮ ಜಾತಿ ಭಾಷೆಗಳನ್ನು ಮೀರಿ ಮಾನವೀಯತೆ ಮೆರೆಯೋಣ ಎಂದು ಆಶಿಸುತ್ತಾ.
ಮತ್ತೊಮ್ಮೆ ಅಂತರರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಹೆಚ್.ಕೆ.