ಜನಪರ ಪಕ್ಷಗಳಿಗೆ ಜನತೆಯ ಬಹುಪರಾಕ್...!

ಭಾರತದ ಮತದಾರರ ಮನಸ್ಸು ಇನ್ನೊಂದು ದಿಕ್ಕಿನತ್ತ ಚಲಿಸಲು ಪ್ರಾರಂಭವಾಗಿ ಈಗ ಮತ್ತಷ್ಟು ಸ್ಪಷ್ಟತೆ ಪಡೆಯುತ್ತಿದೆ.

Your Image Ad

ಸ್ವಾತಂತ್ರ್ಯ ಪಡೆದ ಎರಡು ದಶಕಗಳು ಸ್ವಾತಂತ್ರ್ಯ ಹೋರಾಟದ ನೆನಪಿನಲ್ಲಿ, ಮುಗ್ದತೆಯ ಮರೆಯಲ್ಲಿ ಬಹುತೇಕ ಮತದಾರರ ನಿಲುವು ಒಲವುಗಳು ಇದ್ದವು.

Your Image Ad

ತದನಂತರದ ಎರಡು ದಶಕಗಳು ಬಡತನ ಉದ್ಯೋಗ ಮುಂತಾದ ಭರವಸೆಗಳು ಮತದಾರರನ್ನು ಪ್ರೇರೇಪಿಸಿದವು.

ಮುಂದಿನ ಎರಡು ದಶಕಗಳ ಬದಲಾವಣೆ ಸ್ವಲ್ಪ ವೇಗ ಪಡೆಯಿತು. ನೀರು ರಸ್ತೆ ವಿದ್ಯುತ್ ಕೈಗಾರಿಕೆಗಳ ಬೆಳವಣಿಗೆ ನಗರೀಕರಣ ಮುಂತಾದ ವಿಷಯಗಳು ಹೆಚ್ಚು ಮಹತ್ವ ಎನಿಸಿದವು.

ಆಮೇಲಿನ ಒಂದು ದಶಕ ಅಭಿವೃದ್ಧಿ ಮತ್ತು ಅದರ ಪರಣಾಮವಾದ ಭ್ರಷ್ಟಾಚಾರ ಶಿಕ್ಷಣ ಉದ್ಯೋಗ ಆಹಾರ ಭದ್ರತೆ ಮುಂತಾದ ವಿಷಯಗಳು ಹೆಚ್ಚು ಪ್ರಭಾವಿಸಿದವು.

ಅಲ್ಲಿಂದ ಮುಂದೆ ಧರ್ಮ ರಾಷ್ಟ್ರ ಭಕ್ತಿ ಕೆಲವು ಸಮುದಾಯಗಳ ಮೇಲಿನ ದ್ವೇಷ ಇತಿಹಾಸದ ಬಗೆಗಿನ ಭಿನ್ನ ಅಭಿಪ್ರಾಯ ವಿಶ್ವಗುರುವಾಗುವ ಬಯಕೆ ಮುಂತಾದ ಭಾವನಾತ್ಮಕ ವಿಷಯಗಳು ಹೆಚ್ಚು ಪ್ರಾಮುಖ್ಯತೆ ಪಡೆದವು.

ಆಯಾ ಕಾಲಕ್ಕೆ ಯಾವ ಪಕ್ಷಗಳು ಇದನ್ನು ಹೆಚ್ಚು ಪ್ರಚಾರ ಮಾಡಿದವೋ ಅದೇ ಪಕ್ಷ ಹೆಚ್ಚು ಜನಮನ್ನಣೆ ಗಳಿಸಿ ಅಧಿಕಾರ ಸ್ಥಾಪಿಸಿದವು.

ಇದರ ಜೊತೆಗೆ ಹಣ ಹೆಂಡ ಸೀರೆ ಪಂಚೆ ಜಾತಿ ಕೆಲವೊಮ್ಮೆ ತೋಳ್ಬಲ ಎಲ್ಲವೂ ಅಂದಿನಿಂದ ಇಂದಿನವರೆಗೂ ಇನ್ನೂ ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಅಲ್ಲದೆ ಶಾಸಕರ ಮಾರಾಟ ಎಂಬ ವ್ಯಾಪಾರವೂ ಜೋರಾಗಿ ನಡೆಯುತ್ತಿದೆ.

ಅದರ ಮುಂದುವರಿದ ಭಾಗದಂತೆ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಮೂಡಿಬಂದಿದೆ.

ಇದು ಸಹ ಶಾಶ್ವತ ಎಂದು ಪರಿಗಣಿಸಲು ಸಾಧ್ಯವಿಲ್ಲ. ಮತ್ತೆ ಮುಂದಿನ ವರ್ಷಗಳು ಬೇರೆಯದೇ ಆಯಾಮ ಪಡೆಯಬಹುದು.

ಜನರ ಮನಸ್ಥಿತಿ ಆಧ್ಯತೆಗಳು ಕಾಲದ ಪಯಣದಲ್ಲಿ ಬದಲಾಗುತ್ತಿರುವುದನ್ನು ಗಮನಿಸಿದಾಗ ಇದು ಪ್ರಗತಿಯೆಡೆಗೆ ಸಾಗುತ್ತಿದೆಯೇ ಅಥವಾ ವಿನಾಶದ ಕಡೆ‌ ಮುನ್ನಡೆಯುತ್ತಿದೆಯೇ ಎಂಬ ಅನುಮಾನ ಸಾಕಷ್ಟು ಜನರನ್ನು ಕಾಡುತ್ತಿದೆ.

ಪಕ್ಷ ಮತ್ತು ಸಿದ್ದಾಂತದ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಯೋಚಿಸುವವರು ಅವರವರ ಮೂಗಿನ ನೇರ ಅಥವಾ ಭಾವನೆಗಳಿಗೆ ತಕ್ಕಂತೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಪ್ರಕೃತಿಯ ಮೂಲದಿಂದ ಮಾನವೀಯ ಮೌಲ್ಯಗಳ ಹಿನ್ನೆಲೆಯಲ್ಲಿ ನಮ್ಮ ತಿಳಿವಳಿಕೆಯ ಮಿತಿಯಲ್ಲಿ ಯೋಚಿಸಿದಾಗ.

ಸಮಗ್ರ ಭಾರತದ ಸಮಾಜ ಮತ್ತು ಸರ್ಕಾರದ ಒಟ್ಟು ಪರಿಣಾಮ ಮತ್ತು ಫಲಿತಾಂಶಗಳನ್ನು ಸಮಗ್ರವಾಗಿ ಅವಲೋಕಿಸಿದಾಗ.

ಸ್ವಾತಂತ್ರ್ಯ ಪಡೆದ ನಂತರದಿಂದ ಇಲ್ಲಿಯವರೆಗೆ ನಡೆದ ಯಾವುದೇ ಚುನಾವಣೆಯಲ್ಲಿ ಬಹುತೇಕ ಮತದಾರರು ಅತ್ಯಂತ ವಿವೇಚನೆಯಿಂದ ಸ್ವಾರ್ಥ ರಹಿತವಾಗಿ ದೇಶದ ಮತ್ತು ಜನರ ಒಳಿತಿಗಾಗಿ ಮತ ಚಲಾಯಿಸಿದ್ದಾರೆ ಎಂದು ಧೈರ್ಯವಾಗಿ ಹೇಳುವುದು ಕಷ್ಟ.

ತೀರಾ ಅಪರೂಪದ ಕೆಲವೇ ಕೆಲವು ರಾಜ್ಯ ಅಥವಾ ರಾಷ್ಟ್ರದ ಚುನಾವಣೆಯಲ್ಲಿ ಅತ್ಯಂತ ಪ್ರಬುದ್ದವಾಗಿ ಮತ ಚಲಾಯಿಸಿ - ಜನ ಪ್ರತಿನಿಧಿಗಳಿಗೆ ಪಾಠ ಕಲಿಸಿದ ಉದಾಹರಣೆ ಹೊರತು ಪಡಿಸಿದರೆ ಬಹುತೇಕ ಅವರ ಮುಗ್ದತೆಯೋ ಅಜ್ಞಾನವೋ ಮೂರ್ಖತನವೋ ದುರಾಸೆಯೋ ಅಹಂಕಾರವೋ ತಪ್ಪು ತಿಳಿವಳಿಕೆಯೋ ಭಾವನಾತ್ಮಕ ವ್ಯಾಮೊಹವೋ ಹಣದ ದಾಹವೋ ಅಥವಾ ಹಣದ ಅನಿವಾರ್ಯವೋ ಇತರರ ಬಗೆಗಿನ ದ್ವೆಷವೋ ಸಂಕುಚಿತ ಮನೋಭಾವವೋ ಆಕರ್ಷಣೆಯೋ ಕಾರ್ಪೊರೇಟ್ ಸಂಸ್ಥೆಗಳು ತಂತ್ರದ ಬಲಿಪಶುವೋ ಮನಸ್ಸುಗಳ ಮುಖವಾಡವೋ ಒಟ್ಟಿನಲ್ಲಿ ಬಹುಮತದ ಜನಪ್ರಿಯತೆ ಸತ್ಯ ಮತ್ತು ವಾಸ್ತವದಿಂದ ತುಂಬಾ ದೂರ ಉಳಿದಿದೆ.

ಇದು ಈಗಿನ ಚುನಾವಣಾ ಫಲಿತಾಂಶ ಮಾತ್ರವಲ್ಲ 75 ವರ್ಷಗಳ ಬಹುತೇಕ ಬಹಳಷ್ಟು ಚುನಾವಣೆಗಳಿಗೆ ಅನ್ವಯಿಸುತ್ತದೆ. ಸ್ವಾರ್ಥದ ನಿರೀಕ್ಷೆಗಳು ಮತ್ತು ಸಂಕುಚಿತ ಮನೋಭಾವ ಮೇಲುಗೈ ಪಡೆದು ನಿಜವಾದ ಒಳ್ಳೆಯತನ ಮರೆಯಾಗಿದೆ. ಅದರ ದೀರ್ಘ ಪರಿಣಾಮ ಒಳ್ಳೆಯ ವ್ಯಕ್ತಿಗಳು ಚುನಾವಣಾ ರಾಜಕೀಯದಲ್ಲಿ ಭಾಗವಹಿಸುವುದೇ ಇಲ್ಲ.

ಅದರಿಂದಾಗಿಯೇ ಸೂಕ್ಷ್ಮತೆ ಕಳೆದುಕೊಂಡ, ರಾಜಕೀಯವನ್ನೇ ಉದ್ಯೋಗ ವ್ಯಾಪಾರ ಮಾಡಿಕೊಂಡ, ಅಧಿಕಾರ ಮತ್ತು ಹಣವನ್ನೇ ಮುಖ್ಯ ಗುರಿಯಾಗಿಸಿಕೊಂಡ, ತಮ್ಮ ಸಿದ್ಧಾಂತಗಳನ್ನು ಜನರಲ್ಲಿ ಹೇರುವ ಮನಸ್ಥಿತಿಯ ಸಂಘ ಸಂಸ್ಥೆ ವಂಶಗಳು ಮನೆತನಗಳು ಚುನಾವಣಾ ರಾಜಕೀಯದಲ್ಲಿ ಯಶಸ್ವಿಯಾಗುತ್ತಾ ಸಾಗುತ್ತಿದೆ.

ಆ ಏರಿದ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಜನ ಸೇವೆಯ ದೇಶ ಸೇವೆಯ ಮುಖವಾಡ ಹೊತ್ತು ಜನರನ್ನು ಅವರ ಯೋಚನಾ ಶಕ್ತಿಯನ್ನು ಅವರ ಜೀವನಾವಶ್ಯಕ ಪರಿಸ್ಥಿತಿಯನ್ನು ವಿವಿಧ ರೀತಿಯಲ್ಲಿ ನಿಯಂತ್ರಿಸಲು ದುಷ್ಟ ಮಾರ್ಗಗಳನ್ನು ದುಷ್ಟ ಕೂಟಗಳನ್ನು ವ್ಯವಸ್ಥೆ ಒಳಗೆ ರೂಪಿಸಿಕೊಂಡಿದ್ದಾರೆ.

ಅದರ ದುಷ್ಪರಿಣಾಮ ಈ ಚುನಾವಣಾ ಫಲಿತಾಂಶಗಳು. ಅದರ ಪರಿಣಾಮ ಆಹಾರ ನೀರು ಗಾಳಿಯ ಕಲ್ಮಶ, ಶಿಕ್ಷಣ ಆರೋಗ್ಯ ದುಬಾರಿ, ಮಾನವೀಯ ಮೌಲ್ಯಗಳ ಕುಸಿತ. ಇಡೀ ವ್ಯವಸ್ಥೆಯು ಕೆಲವೇ ಜನರ ಕೈಯೊಳಗೆ ನಿಯಂತ್ರಣ. ಬಹುತೇಕ ಸಂಪತ್ತು ಕೆಲವೇ ಕುಟುಂಬಗಳ ಒಡೆತನ. ನಮ್ಮ ಇಡೀ ಬದುಕು ಜೀವನಾವಶ್ಯಕ ವಸ್ತುಗಳ ಪೂರೈಕೆಗಾಗಿ ಸಂಘರ್ಷ ನಡೆಸುತ್ತಾ ಸಾಯುವುದು.

ಆತ್ಮೀಯರೆ,

ಸ್ವಲ್ಪ ಸಮಯ ಮಾಡಿಕೊಂಡು ದಯವಿಟ್ಟು ಈ ಬಗ್ಗೆ ಗಂಭೀರವಾಗಿ ಯೋಚಿಸಿ. ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ಸಮಾಜದಲ್ಲಿ ಇದರ ಬದಲಾವಣೆಗಾಗಿ ನಾವು ಯಾವ ರೀತಿಯ ಪಾತ್ರ ನಿರ್ವಹಿಸಬೇಕು ಎಂದು. ಒಂದು ವೇಳೆ ಜನ ಸಾಮಾನ್ಯ ಅತ್ಯಂತ ವಿವೇಚನೆಯಿಂದ ಸ್ವಾರ್ಥ ರಹಿತವಾಗಿ ಮತ ಚಲಾಯಿಸಿದ್ದೇ ಆದರೆ ನಮ್ಮ ಮುಂದಿನ ಪೀಳಿಗೆ ನಮಗಿಂತ ಉತ್ತಮ ರೀತಿಯಲ್ಲಿ ಬದುಕಬಹುದು. ಇಲ್ಲದಿದ್ದರೆ.

ಆಯ್ಕೆನಮ್ಮಮುಂದಿದೆ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.

Read More Articles